ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ವೈದ್ಯಕೀಯ ಕ್ಷೇತ್ರದಲ್ಲಾಗುತ್ತಿರುವ ಆವಿಷ್ಕಾರಗಳಿಂದ ವ್ಶೆದ್ಯರಿಗೆ ಹಾಗೂ ಸಾರ್ವಜನಿಕರಿಗೆ ಸಾಕಷ್ಟು ಪ್ರಯೋಜನವಾಗುತ್ತಿದೆ. ಅದರಂತೆ ಸಂಶೋಧನೆಯ ಫಲವಾಗಿ ವೈದ್ಯರು ಚಿಕಿತ್ಸೆ ನೀಡುವ ವಿಧಾನ ಮತ್ತು ರೋಗಪತ್ತೆ ಸಾಕಷ್ಟು ಸಲೀಸಾಗಿದೆ. ತಂತ್ರಜ್ಞಾನ ಇಂದು ಸಾಕಷ್ಟು ಬೆಳೆದಿದೆ. ಅದನ್ನು ಒಳ್ಳೆಯದಕ್ಕೆ ಮಾತ್ರ ಉಪಯೋಗಿಸಿಕೊಳ್ಳಬೇಕು ಎಂದು ಅಹ್ಮದಾಬಾದ್ ನ ಸ್ತ್ರೀರೋಗ ಮತ್ತು ಹೆರಿಗೆ ತಜ್ಞವೈದ್ಯ ಡಾ. ಮಹೇಶ ಗುಪ್ತಾ ಹೇಳಿದರು.
ಕೆಎಲ್ಇ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಶನ್ ಆ್ಯಂಡ್ ರಿಸರ್ಚ್ , ಜೆಎನ್ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಕೆಎಲ್ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆಯ ಸಂಯುಕ್ತಾಶ್ರಯದಲ್ಲಿ ಆಸ್ಪತ್ರೆಯಲ್ಲಿ ಏರ್ಪಡಿಸಲಾದ ಹೆರಿಗೆ ನಂತರದ ರಕ್ತಸ್ರಾವ ಕುರಿತ ಮುಂದುವರೆದ ವೈದ್ಯಕೀಯ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು,
ಭಾರತದಲ್ಲಿ ಪ್ರಥಮ ಬಾರಿಗೆ 1980 ರಲ್ಲಿ ಅಲ್ಟ್ರಾ ಸೋನಾಗ್ರಾಫಿಯನ್ನು ಪರಿಚಯಿಸಲಾಯಿತು. 1987ರಲ್ಲಿ ಐಸಿಎಂಅರ್ ಯುಎಸ್ಜಿ ಸ್ಕ್ಯಾನಿಂಗ್ ಪ್ರಾರಂಭಿಸಿತು. ಮೊದಮೊದಲು ಕೆಲವೇ ಕೆಲವು ರೋಗ ಪತ್ತೆ ಹಾಗೂ ಗರ್ಭಿಣಿ ಸ್ತ್ರೀಯರ ಹೊಟ್ಟೆ ಸ್ಕ್ಯಾನಿಂಗ್ ಮಾಡಲು ಉಪಯೋಗಿಸುತ್ತಿದ್ದರು. ತಂತ್ರಜ್ಞಾನ ಸಾಕಷ್ಟು ಬೆಳೆದಿದ್ದರೂ ಕೂಡ ಕೇವಲ ಹೊಟ್ಟೆ ನೋವೆಂದು ಬಂದರೆ ವೈದ್ಯರು ಮೊದಲು ಸೋನೊಗ್ರಾಫಿ ಸ್ಕ್ಯಾನಿಂಗ್ ಮಾಡುವ ಪರಿಪಾಠ ಬೆಳೆದು ಬಂದಿದೆ. ಅದಕ್ಕಿಂತ ಮುಂಚಿತವಾಗಿ ರೋಗಿಯ ಸಮಸ್ಯೆಗಳನ್ನು ಅರಿತುಕೊಳ್ಳಲು ಪ್ರಯತ್ನಿಸಬೇಕೆಂದು ಸಲಹೆ ನೀಡಿದರು.
ಕೆಎಲ್ಇ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಶನ್ ಆ್ಯಂಡ್ ರಿಸರ್ಚ್ ನ ಕುಲಸಚಿವ ಡಾ. ವಿ. ಎ. ಕೋಠಿವಾಲೆ ಮಾತನಾಡಿ, ಹೆರಿಗೆ ಸಂದರ್ಭದಲ್ಲಿ ಸಾವುಗಳ ನಿಯಂತ್ರಣ ಅತ್ಯವಶ್ಯಕ. ಇಂದು ಮೊದಲಿನಂತೆ ಸಾವು ಅಧಿಕವಾಗಿ ಇಲ್ಲ. ಆದರೂ ಕೂಡ ಗ್ರಾಮೀಣ ಪ್ರದೇಶದಲ್ಲಿ ಇದೆ. ಅದು ತಪ್ಪಬೇಕು. ಎಲ್ಲ ಸುರಕ್ಷತಾ ಕ್ರಮಗಳು ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ನರ್ಸಿಂಗ್ ಕೇಂದ್ರಗಳಲ್ಲಿ ಆಗಬೇಕು. ಅದಕ್ಕಾಗಿ ಹೆರಿಗೆ ತಜ್ಞವೈದ್ಯರು ಅರಿವು ಮೂಡಿಸಬೇಕು. ನಾವು ಎಲ್ಲ ಸೌಲಭ್ಯಗಳನ್ನು ಪಡೆದುಕೊಂಡಿದ್ದು, ಯಾವುದೇ ಸಾವು ಸಂಭವಿಸದಂತೆ ಎಚ್ಚರಿಕೆ ಅಗತ್ಯ ಎಂದು ತಿಳಿಸಿದರು.
ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ಎಂ.ವಿ. ಜಾಲಿ ಮಾತನಾಡಿ, 1983ರಲ್ಲಿ ಪ್ರಪ್ರಥಮ ಬಾರಿಗೆ ಕೆಎಲ್ಇ ಸಂಸ್ಥೆಯ ಆಸ್ಪತ್ರೆಯಲ್ಲಿ ಯುಎಸ್ಜಿ ಯಂತ್ರವನ್ನು ಅಳವಡಿಸಲಾಗಿತ್ತು. ಇಂದು ಅತ್ಯಾಧುನಿಕ ತಂತ್ರಜ್ಞಾನದ ಎಲ್ಲ ರೋಗ ಪತ್ತೆ ವೈದ್ಯಕೀಯ ಸಲಕರಣೆಗಳನ್ನು ಆಸ್ಪತ್ರೆಯಲ್ಲಿ ಅಳವಡಿಸಲಾಗಿದ್ದು, ರೋಗಿಗಳಿಗೆ ಒಳ್ಳೆಯ ಸೇವೆಯ ಜೊತೆಗೆ ಯುವ ವ್ಶೆದ್ಯರಿಗೆ ಒಳ್ಳೆಯ ಕಲಿಕೆಗೆ ಅವಕಾಶ. ವಾತಾವರಣ ನಿರ್ಮಿಸಲು ಕ್ರಮಕೈಕೊಳ್ಳಲಾಗಿದೆ. ಸ್ತ್ರೀರೋಗ ಮತ್ತು ಹೆರಿಗೆ ವಿಭಾಗದಲ್ಲಿ ಬಹುವಿಧ ವ್ಯವಸ್ಥೆಯುಳ್ಳ ವಿಭಾಗವನ್ಬಾಗಿ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಜೆಎನ್ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಚಾರ್ಯೆ ಡಾ. ಎನ್. ಎಸ್. ಮಹಾಂತಶೆಟ್ಟಿ ಮಾತನಾಡಿ, ಹೆರಿಗೆ ನಂತರ ತಾಯಿಯನ್ನು ಸುರಕ್ಷಿತವಾಗಿ ಉಳಿಸುವ ಕಾರ್ಯವಾಗಬೇಕು. ದೇಶದಲ್ಲಿ ಲಕ್ಷಕ್ಕೆ 82 ಸಾವು ಎಂದರೆ ನೋವು. ಅದು ಇನ್ನೂ ಕಡಿಮೆಯಾಗಬೇಕು. ಆಸ್ಪತ್ರೆಯಿಂದ ಆಸ್ಪತ್ರೆಗೆ ಸಾಗಿಸುವಲ್ಲಿ ಸಾಕಷ್ಟು ವಿಳಂಬವಾಗುತ್ತಿದೆ. ಇದರಿಂದ ತಾಯಿಯ ಸಾವು ಸಂಭವಿಸುವ ಸಾಧ್ಯತೆ ಅಧಿಕವಾಗಿದೆ. ಅದು ತಪ್ಪಬೇಕೆಂದು ಹೇಳಿದರು.
ಸ್ತ್ರೀರೋಗ ಮತ್ತು ಹೆರಿಗೆ ವಿಭಾಗದ ಡಾ. ಎಂ ಬಿ ಬೆಲ್ಲದ ಅವರು ಪ್ರಾಸ್ತಾವಿಕ ಮಾತನಾಡಿ, ಹೆರಿಗೆ ನಂತರದ ರಕ್ತಸ್ರಾವ ಹಾಗೂ ಮಹಿಳೆಯರ ಸಾವನ್ನು ತಡೆಗಟ್ಟಲು ಸುಸ್ಥಿರ ಅಭಿವೃದ್ದಿಯ ಗುರಿಯನ್ನು ಹೊಂದಲಾಗಿದೆ. 2030 ರೊಳಗೆ ಸಾವಿನ ಪ್ರಮಾಣವನ್ನು ಗಣನೀಯವಾಗಿ ತಗ್ಗಿಸಲು ಆಗಲೇ ಕಾರ್ಯಪ್ರವೃತ್ತರಾಗಿದ್ದೇವೆ ಎಂದರು.
ವಿಜಯನಗರ ವೈದ್ಯ ವಿಜ್ಞಾನ ಸಂಸ್ಥೆಯ ಡಾ. ವೀರೇಂದ್ರ ಕುಮಾರ, ಹುಬ್ಬಳ್ಳಿಯ ಕಿಮ್ಸ್ ನಿರ್ದೇಶಕ ಡಾ. ರಾಮಲಿಂಗಪ್ಪಾ ಎ., ರಾಯಚೂರಿನ ಡಾ. ಜಯಪ್ರಕಾಶ ಪಾಟೀಲ ಉಪನ್ಯಾಸ ನೀಡಿದರು. ಈ ಸಂದರ್ಭದಲ್ಲಿ ಡಾ. ಅನಿತಾ ದಲಾಲ, ಡಾ. ಎಂ ಸಿ ಮೆಟಗುಡ್ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.
ಜನಾರೋಗ್ಯ ರಕ್ಷಣೆಯಲ್ಲಿ ಕೊರೊನಾ ವಾರಿಯರ್ ಗಳ ಪಾತ್ರ ಅವಿಸ್ಮರಣೀಯ: ಲಕ್ಷ್ಮೀ ಹೆಬ್ಬಾಳಕರ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ