ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಮಕ್ಕಳು ಶಾಲೆಗೆ ಹೋಗುವುದು ಪಾಠ ಕಲಿಯಲು ಹೊರತು ಶೂ, ಸಾಕ್ಸ್ ಹಾಕಿಕೊಳ್ಳಲು ಅಲ್ಲ ಎಂಬ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿಕೆಗೆ ಟಾಂಗ್ ನೀಡಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಶಿಕ್ಷಣ ಸಚಿವರು ಯಾಕೆ ಉತ್ತಮ ಬಟ್ಟೆ ಹಾಕಿಕೊಂಡು ಓಡಾಡಬೇಕು ಎಂದು ಪ್ರಶ್ನಿಸಿದ್ದಾರೆ.
ಸರ್ಕಾರಿ ಶಾಲಾ ಮಕ್ಕಳಿಗೆ ಸಮವಸ್ತ್ರ, ಶೂ, ಸಾಕ್ಸ್ ಕೊಡುವಲ್ಲಿ ರಾಜ್ಯ ಸರ್ಕಾರ ವಿಳಂಬ ಧೋರಣೆ ಅನುಸರಿಸುತ್ತಿರುವುದಕ್ಕೆ ಸಮರ್ಥಿಸಿಕೊಂಡಿದ್ದ ಶಿಕ್ಷಣ ಸಚಿವರ ಹೇಳಿಕೆಗೆ ಕಿಡಿ ಕಾರಿದ ಡಿ.ಕೆ.ಶಿವಕುಮಾರ್, ಶಿಕ್ಷಣ ಸಚಿವರ ಹೇಳಿಕೆ ಇಡೀ ಕರ್ನಾಟಕವೇ ತಲೆತಗ್ಗಿಸುವಂತದ್ದು, ನಮ್ಮ ಮಕ್ಕಳು ದೇಶಕ್ಕೆ ಕೀರ್ತಿ ತಂದಿದ್ದಾರೆ. ಗ್ರಾಮೀಣ ಭಾಗದ ಮಕ್ಕಳು ಸರ್ಕಾರಿ ಶಾಲೆಗಳಲ್ಲಿ ಓದಿ ವಿಶ್ವಮಟ್ಟದಲ್ಲಿ ಉನ್ನತ ಸ್ಥಾನದಲ್ಲಿದ್ದಾರೆ. ಶಿಕ್ಷಣ ಸಚಿವರಾದವರಿಗೆ ಕನಿಷ್ಠ ಪರಿಜ್ಞಾನವೂ ಬೇಡವೇ? ಸರ್ಕಾರಿ ಶಾಲಾ ಮಕ್ಕಳಿಗೆ ಸಕಾಲದಲ್ಲಿ ಸಮವಸ್ತ್ರ ಕೊಡಬೇಕಾಗಿದ್ದು ಸರ್ಕಾರದ ಕರ್ತವ್ಯ ಎಂದು ಕಿಡಿಕಾರಿದರು.
ಕೂಲಿ ಕಾರ್ಮಿಕರಿಂದ ಹಿಡಿದು ಚಾಲಕರವರೆಗೂ ಪ್ರತಿಯೊಬ್ಬರೂ ತಮ್ಮ ಮಕ್ಕಳು ಚೆನ್ನಾಗಿ ಓದಬೇಕು, ಶೂ, ಸಾಕ್ಸ್ ಸಮವಸ್ತ್ರದೊಂದಿಗೆ ಶಿಸ್ತಿನಿಂದ ಶಾಲೆಗೆ ಹೋಗಬೇಕು ಎಂದು ಸಾಲ ಮಾಡಿಯಾದರೂ ಮಕ್ಕಳನ್ನು ಶಾಲೆಗೆ ಕಳಿಸುತ್ತಾರೆ. ನಮ್ಮ ಸರ್ಕಾರದ ಅವಧಿಯಿಂದಲೂ ಶಾಲಾ ಮಕ್ಕಳಿಗೆ ಶೂ, ಸಾಕ್ಸ್ ಕೊಡಲಾಗಿತ್ತು. ಆದರೆ ಈಗ ರಾಜ್ಯ ಸರ್ಕಾರ ಮಕ್ಕಳಿಗೆ ಸಮವಸ್ತ್ರ, ಶೂ, ಸಾಕ್ಸ್ ಕೊಡುವುದರಲ್ಲಿ ಮೀನಾಮೇಷ ಎಣಿಸುತ್ತಿದೆ. ಈ ಬಗ್ಗೆ ಪ್ರಶ್ನೆ ಮಾಡಿದ್ರೆ ಶಿಕ್ಷಣ ಸಚಿವರು ಉಡಾಫೆ ಮಾತನಾಡುತ್ತಿದ್ದಾರೆ. ಇವರು ಯಾಕೆ ಊಟ ಮಾಡ್ತಾರೆ, ಚೆನ್ನಾಗಿ ಬಟ್ಟೆ ಹಾಕಿಕೊಂಡು ಓಡಾಡುತ್ತಾರೆ? ಶಿಕ್ಷಣ ಸಚಿವರು ಬರೀ ಚಡ್ಡಿ-ಬನಿಯನ್ ನಲ್ಲಿಯೇ ವಿಧಾನಸೌಧಕ್ಕೆ ಬರಲಿ ಹಾಗಾದ್ರೆ. ಅವರು ಯಾಕೆ ಉತ್ತಮ ಬಟ್ಟೆ ಹಾಕಿಕೊಂಡು ಓಡಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶಿಕ್ಷಣ ಸಚಿವರ ಹೇಳಿಕೆ ಗೌರವ ತರುವಂತದ್ದಲ್ಲ. ಇದು ಬರೀ ಹಣದ ವಿಚಾರವಲ್ಲ. ಸರ್ಕಾರಿ ಶಾಲೆಯ ಮಕ್ಕಳನ್ನು ಎಷ್ಟು ಅಗೌರವದಿಂದ ಕಾಣುತ್ತಿದ್ದಾರೆ ಎಂಬುದು ಇದರಿಂದ ಗೊತ್ತಾಗುತ್ತದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಖ್ಯಾತ ನಟ ವಿಕ್ರಮ್ ಗೆ ಹೃದಯಾಘಾತ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ