ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ನಕಲಿ ಪಾನ್ ಮಸಾಲಾ ತಯಾರಿ ಮಾರಾಟ ಮಾಡುವ ಮೂಲಕ ಸರಕಾರಕ್ಕೆ ಕೋಟ್ಯಾಂತರ ರೂ. ತೆರಿಗೆ ವಂಚಿಸಿದ 7 ಜನರನ್ನು ಪೊಲೀಸರು ಬಂಧಿಸಿದ್ದಾರೆ.
ಕರ್ನಾಟಕದ ಇಬ್ಬರು, ತೆಲಂಗಾಣದ ಇಬ್ಬರು ಹಾಗೂ ಹಾಗೂ ದೆಹಲಿಯ ಮೂವರು ಬಂಧಿತರಾಗಿದ್ದು ಅವರಿಂದ ಯಂತ್ರೋಪಕರಣಗಳು, ಲಕ್ಷಾಂತರ ರೂ. ಮೌಲ್ಯದ ಕಚ್ಚಾ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.ಈ ಪೈಕಿ ಐವರಿಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
2012ರ ಮೇ 17ರಂದು ಯಕ್ಸಂಬಾ ಪಟ್ಟಣದ ಬಸವೇಶ್ವರ ಸರ್ಕಲ್ ನಲ್ಲಿರುವ ರಾಜಲಕ್ಷ್ಮೀ ಕಿರಾಣಿ ಅಂಗಡಿಯವರಿಗೆ ನಕಲಿ ಆರ್ ಎಂಡಿ ಪಾನ್ ಮಸಾಲಾ ಮಾರಾಟ ಮಾಡುತ್ತಿದ್ದ ವೇಳೆ ಧಾರಿವಾಲ್ ಇಂಡಸ್ಟ್ರೀಸ್ ಪ್ರೈ. ಲಿಮಿಟೆಡ್ ನ ಸೇಲ್ಸ್ ಮ್ಯಾನೇಜರ್ ಶೀತಲ ಬಾಲೇಶ ಅವರು ಚಿಕ್ಕೋಡಿ ಮುಲ್ಲಾಗಲ್ಲಿ ನಿವಾಸಿ ನೌಶಾದ್ ಮುಲ್ಲಾ ಎಂಬುವವನನ್ನು ಹಿಡಿದು 14 ಬಾಕ್ಸ್ ನಕಲಿ ಪಾನ್ ಮಸಾಲಾ ಪೌಚ್ ಗಳೊಂದಿಗೆ ಹಿಡಿದು ತಂದು ಸದಲಗಾ ಪೊಲೀಸ್ ಠಾಣೆಗೆ ಹಾಜರುಪಡಿಸಿದ್ದರು. ಆರೋಪಿ ವಿರುದ್ಧ ಐಪಿಸಿ ಕಲಂ 420ರಡಿ ಪ್ರಕರಣ ದಾಖಲಿಸಲಾಗಿತ್ತು.
ಬಂಧಿತ ವ್ಯಕ್ತಿಯು ತನಿಖೆ ವೇಳೆ ನೀಡಿದ ಮಾಹಿತಿಯನ್ನಾಧರಿಸಿ ಜನರ ಆರೋಗ್ಯಕ್ಕೆ ಹಾನಿಕರವಾಗಿರುವ ಪಾನ್ ಮಸಾಲಾ ತಯಾರಿಸಿ ಸರಕಾರಕ್ಕೆ ಕೋಟ್ಯಾಂತರ ರೂ. ತೆರಿಗೆ ವಂಚನೆ ನಡೆಯುತ್ತಿರುವ ಶಂಕೆ ಮೇಲೆ ತನಿಖೆ ತೀವ್ರಗೊಳಿಸಲಾಗಿತ್ತು.
ಈ ವೇಳೆ ಆರ್ ಎಂಡಿ ಅಷ್ಟೇ ಅಲ್ಲದೆ ವಿಮಲ ಪಾನ್ ಮಸಾಲಾ ಸೇರಿದಂತೆ ದೇಶಾದ್ಯಂತ ಚಲಾವಣೆಯಲ್ಲಿರುವ ನಾನಾ ಕಂಪನಿಗಳ ಬ್ರಾಂಡ್ ಬಳಸಿ ನಕಲಿ ಪಾನ್ ಮಸಾಲಾ ತಯಾರಿಸಿ ಮಾರಾಟ ಮಾಡುವ ಜಾಲ ಪತ್ತೆಯಾಗಿದೆ.
ಬೆಳಗಾವಿ ಪೊಲೀಸ್ ಅಧೀಕ್ಷಕರು, ಹೆಚ್ಚುವರಿ ಅಧೀಕ್ಷಕರು, ಚಿಕ್ಕೋಡಿ ಉಪಾಧೀಕ್ಷಕರ ಮಾರ್ಗದರ್ಶನದಲ್ಲಿ ಚಿಕ್ಕೋಡಿ ಸಿಪಿಐ ಆರ್.ಆರ್. ಪಾಟೀಲ, ಸದಲಗಾ ಪಿಎಸ್ಐ ರವೀಂದ್ರ ಅಜ್ಜನ್ನವರ, ಅಂಕಲಿ ಪಿಎಸ್ಐ ಭರತ, ಹಾಗೂ ಸಿಬ್ಬಂದಿಗಳಾದ ವಿಠ್ಠಲ ನಾಯ್ಕ, ಎಸ್.ಎಲ್.ಗಳತಗಿ ಎಸ್.ಪಿ.ಗಲಗಲಿ, ಎಸ್.ಎಚ್.ದೇವರ, ಆರ್.ಎನ್.ಮುಂದಿನಮನಿ, ಅವರನ್ನೊಳಗೊಂಡ ತಂಡ ರಚಿಸಿ ತನಿಖೆ ಆರಂಭಿಸಿದಾಗ ಈ ಜಾಲ ಪತ್ತೆಯಾಗಿದೆ.
ಪ್ರಧಾನಿ ನರೇಂದ್ರ ಮೋದಿ ಹತ್ಯೆಗೆ ಸ್ಕೆಚ್; ಇಬ್ಬರು ಶಂಕಿತ ಭಯೋತ್ಪಾದಕರ ಬಂಧನ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ