Latest

13.5 ವರ್ಷಗಳ ನಂತರ ಸಿಕ್ಕಿ ಬಿದ್ದ ಮೋಸ್ಟ್ ವಾಂಟೆಡ್ ಆರೋಪಿ ದಂಪತಿ

ಪ್ರಗತಿವಾಹಿನಿ ಸುದ್ದಿ, ಚಂಡಿಗಡ: ಫೈನಾನ್ಶಿಯರ್ ಹಾಗೂ ಅವರ ನಾಲ್ಕು ವರ್ಷದ ಮಗನ ಹತ್ಯೆಗೈದು ತಲೆಮರೆಸಿಕೊಂಡಿದ್ದ ಮೋಸ್ಟ್ ವಾಂಟೆಡ್  ಆರೋಪಿ ದಂಪತಿ 13.5 ವರ್ಷಗಳ ನಂತರ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ.

ರಾಜು ಹಾಗೂ ಆತನ ಪತ್ನಿ ಶಿಲ್ಪಾ ಬಂಧಿತ ಆರೋಪಿಗಳು. ಇವರಿಬ್ಬರೂ 2009ರ ಫೆ.14ರಂದು ಹರಿಯಾಣಾದ ಪಾಂಚಕುಲಾದ ಫೈನಾನ್ಶಿಯರ್ ವಿನೋದ ಮಿತ್ತಲ್ ಹಾಗೂ ಅವರ ನಾಲ್ಕು ವರ್ಷದ ಪುತ್ರ ಯಶನ್ ರನ್ನು ಕೊಲೆಗೈದು ತಲೆಮರೆಸಿಕೊಂಡಿದ್ದರು.

ಸೆಲೂನ್ ನಡೆಸಿಕೊಂಡಿದ್ದ ರಾಜು ಬಳಿ ವಿನೋದ ಮಿತ್ತಲ್ ಹೇರ್ ಕಟಿಂಗ್ ಮಾಡಿಸಿಕೊಳ್ಳುತ್ತಿದ್ದರು. ಈ ಪರಿಚಯದಿಂದಲೇ ವಿನೋದ ಅವರು  ರಾಜುಗೆ ದೊಡ್ಡ ಸೆಲೂನ್ ತೆರೆಯಲು ಹಣಕಾಸಿನ ನೆರವು ನೀಡಿದ್ದಲ್ಲದೆ ತಮ್ಮ ಕಾರೊಂದನ್ನು ಸಹ ಕೊಟ್ಟಿದ್ದರು. ಆದರೆ ರಾಜು  ಮತ್ತು ವಿನೋದ್ ಮಧ್ಯೆ ಕಾರಣಾಂತರಗಳಿಂದ ವೈಷಮ್ಯ ಉಂಟಾದಾಗ ವಿನೋದ್ ಅವರು ತಮ್ಮ ಹಣ ಮರಳಿಸುವಂತೆ ಒತ್ತಡ ಹೇರಿದ್ದರು. 

ಇದರಿಂದ ಕೋಪಗೊಂಡ ಆರೋಪಿ ರಾಜು ಹಣ ಕೊಡುವುದಾಗಿ ನಂಬಿಸಿ ವಿನೋದ್ ಅವರನ್ನು   ಕಾರ್ ಒಂದರಲ್ಲಿ ಕುಳ್ಳಿರಿಸಿಕೊಂಡು ಹೋಗಿ ತನ್ನ ಸಹಚರರೊಂದಿಗೆ ಇರಿದು ಕೊಲೆಗೈದಿದ್ದಲ್ಲದೆ ಶವವನ್ನು ನಾಲೆಯೊಂದಕ್ಕೆ ಎಸೆದಿದ್ದ. ಈ ವೇಳೆ ತಂದೆಯ ಕೊಲೆ ನೋಡಿದ ಮಗ ಸಾಕ್ಷ್ಯ ಹೇಳುವ ಭೀತಿಯಲ್ಲಿ ಅವನನ್ನೂ ಜೀವಂತ ನಾಲೆಗೆಸೆದು ಕೊಲೆ ಮಾಡಲಾಗಿತ್ತು. ಈ ಸಂದರ್ಭದಲ್ಲಿ ರಾಜು ಪತ್ನಿ ಕೂಡ ಸಾಥ್ ನೀಡಿದ್ದಳು. 

ನಂತರದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ ದಂಪತಿ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸುತ್ತಲೇ ಇದ್ದರು. ಕೊನೆಗೂ ಹರಿಯಾಣಾ ಪೊಲೀಸರು ಆರೋಪಿ ದಂಪತಿಯನ್ನು ಇಂದೋರ್ ನಲ್ಲಿ ಬಂಧಿಸಿದ್ದಾರೆ.

ಮಗನನ್ನು ಪುತ್ಥಳಿ ರೂಪದಲ್ಲಿ ನೋಡಲಾಗದು ಎಂದು ಕಣ್ಣೀರಿಟ್ಟ ತಂದೆ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button