ಪ್ರಗತಿವಾಹಿನಿ ಸುದ್ದಿ: 12 ವರ್ಷದ ಬಾಲಕನೊಬ್ಬ ತನ್ನ ಕಿರಿಯ ಸಹೋದರನನ್ನು ಚಿರತೆ ದಾಳಿಯಿಂದ ರಕ್ಷಿಸಿದ ಅದ್ಭುತ ಶೌರ್ಯ ಪ್ರದರ್ಶನ ತೋರಿದ ಘಟನೆ ಉತ್ತರಾಖಂಡದ ರಾಮನಗರದಲ್ಲಿ ನಡೆದಿದೆ.
ಚೋರ್ಪಾನಿಯ ಸತಿ ಕಾಲೋನಿಯ ಉದ್ಯಾನವನದ ಬಳಿ ಈ ಘಟನೆ ಸಂಭವಿಸಿದೆ. ಧೈರ್ಯಶಾಲಿ ಬಾಲಕನನ್ನು ದೇವ್ ಕುಮಾರ್ ಎಂದು ಗುರುತಿಸಲಾಗಿದೆ. ಕಾರ್ಬೆಟ್ ಹುಲಿ ಸಂರಕ್ಷಿತ ಪ್ರದೇಶದ ಬಿಜರಾಣಿ ವ್ಯಾಪ್ತಿಯ ಚೋರ್ಪಾನಿ ಗ್ರಾಮದ ಉದ್ಯಾನದಲ್ಲಿ ಪ್ರದೀಪ್ ಕುಮಾರ್ ಕುಟುಂಬ ವಾಸಿಸುತ್ತಿದೆ. ಗುರುವಾರ ರಾತ್ರಿ ಪ್ರದೀಪ್ ಅವರ ಮಕ್ಕಳು ಮನೆಯಲ್ಲಿದ್ದರು. ನಾಯಿಯನ್ನು ಪ್ರದೀಪ್ ಮನೆಯ ಹೊರಗೆ ಮಂಚದ ಕೆಳಗೆ ಕಟ್ಟಿದ್ದರು. ಸ್ವಲ್ಪ ಸಮಯದ ನಂತರ ಪ್ರದೀಪ್ ಅವರ ಎಂಟು ವರ್ಷದ ಮಗ ಮನೀಷ್ ಹೊರಗೆ ಬಂದು ಲೈಟ್ ಆನ್ ಮಾಡಿದ್ದಾನೆ.
ಆಗ ಚಿರತೆಯು ನಾಯಿ ಮೇಲೆ ದಾಳಿ ಮಾಡಿದೆ. ಚಿರತೆಯ ದಾಳಿಯಿಂದ ನಾಯಿಯನ್ನು ರಕ್ಷಿಸಲು ಮನೀಶ್ ಮುಂದಾಗಿದ್ದಾನೆ. ಆಗ ಈತನ ಮೇಲೆಯೇ ಚಿರತೆ ದಾಳಿ ಮಾಡಿದೆ. ಇತ್ತ ಸಹೋದರನ ಕಿರುಚಾಟ ಕೇಳಿದ ದೇವ್ ಹೊರಗೆ ಧಾವಿಸಿದ್ದಾನೆ. ಆರಂಭದಲ್ಲಿ ಈ ದೃಶ್ಯದಿಂದ ದಿಗ್ಧಮೆಗೊಂಡ ದೇವ್, ತಕ್ಷಣವೇ ಕೋಲು ಹಿಡಿದು ನನ್ನ ಸಹೋದರನನ್ನು ಬಿಡುವಂತೆ” ಕಿರುಚಾಡುತ್ತಾ ಚಿರತೆಯ ತಲೆಗೆ ಪದೇ ಪದೇ ಕೋಲಿನಿಂದ ಹೊಡೆದಿದ್ದಾನೆ. ಪರಿಣಾಮ ಚಿರತೆ ಅಲ್ಲಿಂದ ಕಾಲ್ಕಿತ್ತಿದೆ. ಇನ್ನು ಗಂಭೀರ ಗಾಯಗೊಂಡ ಮನೀಶ್‌ನನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಘಟನೆಯಿಂದ ಸ್ಥಳದಲ್ಲಿ ಆತಂಕ ಸೃಷ್ಟಿಯಾಗಿದ್ದು, ಅರಣ್ಯ ಇಲಾಖೆ ಗಸ್ತು ಹೆಚ್ಚಿಸುವಂತೆ ಸೂಚಿಸಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ