ಪ್ರಗತಿವಾಹಿನಿ ಸುದ್ದಿ, ಲಂಡನ್: ಹ್ಯಾಟ್ರಿಕ್ ವಿಕೆಟ್ ಪಡೆಯಲು ಎಂತೆಂಥ ಘಟಾನುಘಟಿ ಬೌಲರ್ ಗಳೆಲ್ಲ ತಿಣುಕಾಡುವುದು ಸಹಜ. ಅದೆಷ್ಟೋ ಜನ ಅಂತಾರಾಷ್ಟ್ರೀಯ ಖ್ಯಾತಿಯ ಕ್ರಿಕೆಟಿಗರು ಸಹ ಜೀವಮಾನದುದ್ದಕ್ಕೂ ಹ್ಯಾಟ್ರಿಕ್ ವಿಕೆಟ್ ಪಡೆಯದೆ ಕನಸನ್ನು ಕನಸಾಗೇ ಉಳಿಸಿಕೊಂಡು ಫೀಲ್ಡ್ ನಿಂದ ನಿರ್ಗಮಿಸಿದ್ದಾರೆ.
ಆದರೆ ಇಲ್ಲೊಬ್ಬ 12 ವರ್ಷದ ಬಾಲಕ 6 ಬಾಲ್ ಗಳಿಗೆ 6 ವಿಕೆಟ್ ಪಡೆದು ದಾಖಲೆ ಬರೆದಿದ್ದಾನೆ. ಈತನ ಹೆಸರು ಒಲಿವರ್ ವೈಟ್‌ಹೌಸ್.
ಇಂಗ್ಲೆಂಡ್ನ ಬ್ರೋಮ್ಸ್‌ಗ್ರೋವ್ ಕ್ರಿಕೆಟ್ ಕ್ಲಬ್ ಪರ ಕಣಕ್ಕಿಳಿದಿದ್ದ ವೈಟ್‌ಹೌಸ್, ಕುಕ್ಹಿಲ್ ತಂಡದ ವಿರುದ್ಧ ಆರು ಎಸೆತಗಳಲ್ಲಿ ಆರು ವಿಕೆಟ್ ಉರುಳಿಸಿದ್ದಾನೆ. ಕೇವಲ ಎರಡು ಓವರ್ ಬೌಲ್ ಮಾಡಿದ ವೈಟ್‌ಹೌಸ್, ಒಂದೇ ಒಂದು ರನ್ ಬಿಟ್ಟುಕೊಡದೆ ಎಂಟು ವಿಕೆಟ್‌ಗಳನ್ನು ಪಡೆದಿದ್ದಾನೆ.
ಇನ್ನು ವೈಟ್‌ಹೌಸ್ ಸಾಧನೆಗೆ ಶ್ಲಾಘನೆ ಹಾಗೂ ಅಚ್ಚರಿ ವ್ಯಕ್ತಪಡಿಸಿರುವ ಬ್ರೂಮ್ಸ್‌ಗ್ರೋವ್ ಕ್ರಿಕೆಟ್ ಕ್ಲಬ್ ಮೊದಲ ತಂಡದ ನಾಯಕ ಜೇಡೆನ್ ಲೆವಿಟ್, ವೈಟ್‌ಹೌಸ್ ಮಾಡಿದ್ದನ್ನು ನಂಬಲು ಸಾಧ್ಯವಾಗುತ್ತಿಲ್ಲ. ಅದು ಎಷ್ಟು ದೊಡ್ಡ ಸಾಧನೆ ಎಂದು ವೈಟ್ಹೌಸ್ಗೆ ತಿಳಿದಿರಲಿಕ್ಕಿಲ್ಲ. ಮುಂದೆ ಆತನಿಗೆ ತನ್ನ ಸಾಧನೆಗಳ ಮಹತ್ವದ ಅರಿವಾಗಬಹುದು ಎಂದು ಟ್ವೀಟ್ ಮಾಡಿದ್ದಾರೆ.
ಸದ್ಯ ವೈಟ್‌ಹೌಸ್ ಸಾಧನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ