ಶವದ ಪ್ಯಾಂಟ್ ಕಿಸೆಯಲ್ಲಿ ಇತ್ತು 77 ಲಕ್ಷ ರೂ. ಮೌಲ್ಯದ ಬಂಗಾರದ ಗಟ್ಟಿಗಳು
ಪ್ರಗತಿವಾಹಿನಿ ಸುದ್ದಿ, ಅಥಣಿ – ಅಕ್ಟೋಬರ್ 5ರಂದು ಅಥಣಿ ತಾಲೂಕಿನ ಕೃಷ್ಣಾ ನದಿ ತೀರದಲ್ಲಿ ಸಿಕ್ಕಿದ್ದ 28 -30 ವರ್ಷದ ಯುವಕನ ಶವ ದೊಡ್ಡ ಕಥೆಯೊಂದನ್ನು ಬಿಚ್ಚಿಟ್ಟಿದೆ.
ಶವವೊಂದೇ ಸಿಕ್ಕಿದ್ದರೆ ಅಷ್ಟೊಂದು ಕುತೂಹಲ ಹುಟ್ಟಿಸುತ್ತಿರಲಿಲ್ಲವೇನೋ… ಶವದ ಪ್ಯಾಂಟ್ ಕಿಸೆಯಲ್ಲಿ ಇತ್ತು 77 ಲಕ್ಷ ರೂ. ಮೌಲ್ಯದ ಬಂಗಾರದ ಗಟ್ಟಿಗಳು.
ಶವ ಪತ್ತೆಯಾದ ತಕ್ಷಣ ಅದರ ಜೊತೆಯಲ್ಲಿದ್ದ ಬ್ಯಾಂಕ್ ಅಕೌಂಟ್ ಮಾಹಿತಿ ಅಧರಿಸಿ, ಆದಾರ ಕಾರ್ಡ್ ಪತ್ತೆ ಮಾಡಿದ ಅಥಣಿ ಪೊಲೀಸರು ನೇರವಾಗಿ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆ, ಮಿರಜ್ ತಾಲೂಕಿನ ಪಾಟಗಾಂವ್ ಎನ್ನುವ ಹಳ್ಳಿಗೆ ಹೋಗುತ್ತಾರೆ.
ಅಲ್ಲಿ ಪ್ರಗತಿ ಸಾಗರ ಪಾಟೀಲ ಎನ್ನುವ ಮಹಿಳೆಗೆ ಹೋಗಿ ಶವದ ಫೋಟೋ ತೋರಿಸಿ ನಿನ್ನ ಗಂಡನದ್ದಾ ಎಂದು ಪ್ರಶ್ನಿಸುತ್ತಾರೆ. ಆದರೆ ಆಗಲೇ ಕೊಳೆತು ಹೋಗಿದ್ದ ಶವ ನೋಡಿ ಆಕೆ ಗುರುತಿಸಲಾಗದೆ ನೇರವಾಗಿ ಅಥಣಿಗೆ ಬಂದು ಶವ ಪರಿಶೀಲಿಸುತ್ತಾಳೆ. ದೇಹದ ಮೇಲಿನ ಬಟ್ಟೆಗಳನ್ನು ನೋಡಿ ಆಕೆ ಶವ ತನ್ನ ಗಂಡನದ್ದೇ ಎಂದು ಹೇಳುತ್ತಾಳೆ.
ಅಷ್ಟರಲ್ಲಾಗಲೇ ಉತ್ತರ ಪ್ರದೇಶದ ಪೊಲೀಸರು ಆಕೆಯ ಮನೆಗೆ ಬಂದು ನಿನ್ನ ಗಂಡ ಎಲ್ಲಿದ್ದಾನೆ ಎಂದು ವಿಚಾರಿಸಿದ್ದಾರೆ. ಉತ್ತರ ಪ್ರದೇಶದಲ್ಲಿ ಆತನ ವಿರುದ್ಧ ದೂರು ದಾಖಲಾಗಿರುತ್ತದೆ. ಅನೇಕ ಗ್ರಾಹಕರು ತಾವು ಕೊಟ್ಟಿದ್ದ ಬಂಗಾರಗಳನ್ನು ಮರಳಿಸದೆ ಸಾಗರ್ ಎನ್ನುವ ವ್ಯಕ್ತಿ ನಾಪತ್ತೆಯಾಗಿದ್ದಾನೆ ಎಂದು ದೂರು ನೀಡಲಾಗಿರುತ್ತದೆ. ಹಾಗಾಗಿ ಅಲ್ಲಿಂದ ಸಾಗರ್ ನನ್ನು ಹುಡುಕಿಕೊಂಡು ಪೊಲೀಸರು ಇಲ್ಲಿಗೆ ಬಂದಿದ್ದರು.
ಆಕೆ ತನ್ನ ಗಂಡ ಉತ್ತರ ಪ್ರದೇಶದ ಮುಗಲ್ ಸರಾಯಿ ಎನ್ನುವಲ್ಲಿ ಸಂಬಂಧಿಕ ಸಂತೋಷ ಎನ್ನುವವನ ಜೊತೆ ಸೇರಿ ಬಂಗಾರದ ಗಟ್ಟಿ ಕರಗಿಸುವ ವ್ಯವಹಾರ ಮಾಡುತ್ತಿದ್ದ, ಆದರೆ ಆತ ಅಲ್ಲಿಂದ ನಾಪತ್ತೆಯಾಗಿದ್ದಾನೆ ಎಂದು ಸೆಪ್ಟಂಬರ್ 27ರಂದು ಸಂತೋಷ ತನೆ ಫೋನ್ ಮಾಡಿ ತಿಳಿಸಿದ್ದಾನೆ. ಆ ನಂತರ ನನಗೂ ಅವರ ಸಂಪರ್ಕ ಇಲ್ಲ ಎಂದು ತಿಳಿಸಿದ್ದಾಳೆ.
ಇದೀಗ ಅಥಣಿ ಪೊಲೀಸರು ಆಕೆಯ ಬಳಿ ಇನ್ನಷ್ಟು ವಿಚಾರವನ್ನು ಕೆದಕುತ್ತಾರೆ. ತನ್ನ ಪತಿ ಉತ್ತರ ಪ್ರದೇಶದಿಂದ ಗ್ರಾಹಕರ ಬಂಗಾರಗಳನ್ನು ತೆಗೆದುಕೊಂಡು ಹೊರಟಿದ್ದಾನೆ ಎನ್ನುವ ಮಾಹಿತಿಯನ್ನು ಸಂತೋಷ ತನಗೆ ತಿಳಿಸಿದ್ದಾನೆ ಎಂದು ತಿಳಿಸಿದಳು. ಜೊತೆಗೆ ಅಥಣಿ ತಾಲೂಕು ಜಂಬಗಿಯ ನವನಾಥ ಬಾಬರ್ ಎನ್ನುವ ವ್ಯಕ್ತಿ ಸೆ.29ರಂದು ನನ್ನ ಪತಿಯ ಜೊತೆಗೆ ಇದ್ದ ಎನ್ನುವ ಮಾಹಿತಿ ತನಗೆ ಸಿಕ್ಕಿದೆ ಎಂದೂ ತಿಳಿಸುತ್ತಾಳೆ.
ಅಥಣಿ ಪೊಲೀಸರು ನವನಾಥ ಬಾಬರ್ ನನ್ನು ಪತ್ತೆ ಮಾಡಿ ಬೆಂಡೆತ್ತಿದಾಗ ಪೂರ್ಣ ಕಥೆ ಹೊರಬೀಳುತ್ತದೆ.
ಆಗಿದ್ದೇನು?
ಸಾಗರ್ ಮತ್ತು ಸಂತೋಷ ಉತ್ತರ ಪ್ರದೇಶದ ಮುಗಲ್ ಸರಾಯಿ ಎನ್ನುವಲ್ಲಿ ಬಂಗಾರದ ವ್ಯವಹಾರ ಮಾಡುತ್ತಿರುತ್ತಾರೆ. ಸಾಗರ್ ಗ್ರಾಹಕರ ಬಂಗಾರ ಲಪಟಾಯಿಸುವ ಉದ್ದೇಶದಿಂದ ಅಲ್ಲಿಂದ ಪರಾರಿಯಾಗುತ್ತಾನೆ. ಜೊತೆಗೆ ಮೊದಲೇ ಪರಿಚಯಸ್ಥನಾದ ನವನಾಥ ಬಾಬರ್ ಬಳಿ ಕೆಲವು ದಿನ ತನಗೆ ಆಶ್ರಯ ನೀಡುವಂತೆ ಕೋರುತ್ತಾನೆ.
ಸಾಗರ್ ಉತ್ತರ ಪ್ರದೇಶದಿಂದ ಬರುತ್ತಿದ್ದಂತೆ ನವನಾಥ ಅವನನ್ನು ಸ್ವಾಗತಿಸಿ, ಆತನ ಬಳಿಯಿದ್ದ ಬಂಗಾರವನ್ನು ತಾನೇ ಎಗರಿಸುವ ಪ್ಲ್ಯಾನ್ ಮಾಡುತ್ತಾನೆ. ಸಾಗರ್ ನಲ್ಲಿ ಮರ್ಡರ್ ಮಾಡಿ ಕೃಷ್ಣಾ ನದಿಯಲ್ಲಿ ಎಸೆಯುತ್ತಾನೆ. ನಂತರ ಆತ ಬ್ಯಾಗ್ ಎತ್ತಿಕೊಂಡು ಪರಾರಿಯಾಗುತ್ತಾನೆ.
ಆದರೆ ವಿಚಿತ್ರವೆಂದರೆ ಆ ಬ್ಯಾಗ್ ನಲ್ಲಿ ಕೇವಲ 2 ಲಕ್ಷ ರೂ. ಮೌಲ್ಯದ 3.638 ಕೆಜಿ ಬೆಳ್ಳಿ ಮಾತ್ರ ಇದ್ದವು. 77 ಲಕ್ಷ ರೂ. ಮೌಲ್ಯದ 1.491 ಕೆಜಿ ಬಂಗಾರದ ಗಟ್ಟಿಗಳು ಸಾಗರ್ ನ ಪ್ಯಾಂಟ್ ಕಿಸೆಯಲ್ಲೇ ಇದ್ದವು. ಶವ ಸಿಕ್ಕಿದಾಗ ಬಂಗಾರದ ಗಟ್ಟಿಗಳು ಸಿಕ್ಕಿದವು.
ಅಥಣಿ ಡಿಎಸ್ಪಿ ಗಿರೀಶ್ ಎಸ್.ವಿ., ಸಿಪಿಐ ಶಂಕರಗೌಡ ಬಸನಗೌಡರ್, ಪಿಎಸ್ಐಗಳಾದ ಕುಮಾರ ಹಾಡಕಾರ್ ಮತ್ತು ಎಂ.ಡಿ.ಘೋರಿ ಮತ್ತು ಸಿಬ್ಬಂದಿ ಇಡೀ ಪ್ರಕರಣದ ತನಿಖೆ ಕೈಗೊಂಡಿದ್ದರು. ಎಸ್ಪಿ ಲಕ್ಷ್ಮಣ ನಿಂಬರಗಿ ಮತ್ತು ಹೆಚ್ಚುವರಿ ಎಸ್ಪಿ ಅಮರನಾಥ ರೆಡ್ಡಿ ಮಾರ್ಗದರ್ಶನ ನೀಡಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ