ಕಾಂಗ್ರೆಸ್ ನಾಯಕ, ಹರ್ಷ ಶುಗರ್ಸ್ ಎಂಡಿ, ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಸಹೋದರ ಚನ್ನರಾಜ ಹಟ್ಟಿಹೊಳಿ ಅವರ 36ನೇ ಜನ್ಮ ದಿನದ (ನವೆಂಬರ್ 20) ನಿಮಿತ್ತ ಈ ಬರಹ
ಸಂಗೊಳ್ಳಿ ರಾಯಣ್ಣನಂತೆ ಬಲಗೈ ಬಂಟನಾಗಿ ನಿಂತ ಚನ್ನರಾಜ ಹಟ್ಟಿಹೊಳಿ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಕಿತ್ತೂರು ರಾಣಿ ಚನ್ನಮ್ಮ ಎಲ್ಲರಿಗೂ ಗೊತ್ತು. ಬ್ರಿಟೀಷರ ವಿರುದ್ಧ ತೊಡೆ ತಟ್ಟಿ ನಿಂತು ವಿಜಯೋತ್ಸವ ಆಚರಿಸಿದ ಮೊದಲ ಮಹಿಳೆ. ಕಿತ್ತೂರು ಚನ್ನಮ್ಮನಿಗೆ ಬಲಗೈ ಬಂಟನಾಗಿ ನಿಂತವನು ವೀರ ಶೂರ ಸಂಗೊಳ್ಳಿ ರಾಯಣ್ಣ.
ಕಿತ್ತೂರು ಚನ್ನಮ್ಮ, ಸಂಗೊಳ್ಳಿ ರಾಯಣ್ಣ ಇಬ್ಬರೂ ಬೆಳಗಾವಿ ಜಿಲ್ಲೆಯ ಹೆಮ್ಮೆಯ ಪ್ರತೀಕ. ಜಿಲ್ಲೆಯ ಕೀರ್ತಿಯನ್ನು ನಾಡಿನುದ್ದಗಲಕ್ಕೂ ಪಸರಿಸಿದವರು. ಜಿಲ್ಲೆಯ ಜನರ ಹೃದಯದಲ್ಲಿ ಸ್ಥಾನ ಪಡೆದವರು.
ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಅವರನ್ನು ರಾಜ್ಯದ ಅನೇಕ ಕಡೆಗಳಲ್ಲಿ ಕಿತ್ತೂರು ರಾಣಿ ಚನ್ನಮ್ಮ ಎಂದು ಸಂಭೋದಿಸುತ್ತಾರೆ. ಲಕ್ಷ್ಮಿ ಹೆಬ್ಬಾಳಕರ್ ಅವರ ನಿರಂತರ ಹೋರಾಟ, ಹಿಡಿದ ಕೆಲಸವನ್ನು ಮಾಡದೇ ಬಿಡದಿರುವ ಛಲ, ಅವರ ಅಗಾಧವಾದ ಕನಸು, ತಾವು ಪ್ರತಿನಿಧಿಸುವ ಬೆಳಗಾವಿ ಗ್ರಾಮೀಣ ಕ್ಷೇತ್ರದ ಜನರಿಗಾಗಿನ ಅವರ ನಿರಂತರ ಶ್ರಮ, ಎಂತಹ ಕಷ್ಟವನ್ನೂ ಎದುರಿಸಿ ಜಯಿಸುವ ದಿಟ್ಟತನ ಅವರನ್ನು ಈ ಹೆಸರಿನಿಂದ ಕರೆಯುವಂತೆ ಮಾಡಿದೆ.
ಲಕ್ಷ್ಮಿ ಹೆಬ್ಬಾಳಕರ್ ಅವರ ಈ ಎಲ್ಲ ಕಷ್ಟ, ಸುಖಗಳಲ್ಲಿ ಸಂಗೊಳ್ಳಿ ರಾಯಣ್ಣನಂತ ಬಲಗೈ ಬಂಟನಾಗಿ ನಿಂತ ವ್ಯಕ್ತಿಯೊಬ್ಬರಿದ್ದಾರೆ. ಅವರೇ ಸಹೋದರ ಚನ್ನರಾಜ ಹಟ್ಟಿಹೊಳಿ.
ಚನ್ನರಾಜ ಹಟ್ಟಿಹೊಳಿ ಲಕ್ಷ್ಮಿ ಹೆಬ್ಬಾಳಕರ್ ಅವರ ಸಹೋದರ. ಇನ್ನೂ 36ರ ಯುವಕ. ಮರೈನ್ ಎಂಜಿನಿಯರಿಂಗ್ ಪದವಿ ಪಡೆದು ದೇಶ, ವಿದೇಶಗಳಲ್ಲಿ ಕೆಲಸ ನಿರ್ವಹಿಸಿದ ಅವರು, ಹುಟ್ಟೂರಿನಲ್ಲಿ ಸಮಾಜ ಸೇವೆ ಮಾಡಬೇಕೆನ್ನುವ ಅಧಮ್ಯ ಬಯಕೆ ಹೊತ್ತು ವಾಪಸ್ಸಾಗಿದ್ದಾರೆ.
ಚನ್ನರಾಜ ಹಟ್ಟಿಹೊಳಿ ಅಕ್ಕನ ಬೆನ್ನಿಗೆ ನಿಂತು ಅವರ ಎಲ್ಲ ಕೆಲಸಗಳಲ್ಲಿ ಬಲಗೈ ಬಂಟನಂತೆ ಕೆಲಸ ಮಾಡುತ್ತ ಬಂದಿದ್ದಾರೆ. ಹೆಬ್ಬಾಳಕರ್ ಅವರ ಯಶಸ್ಸಿನ ಹಿಂದೆ ಚನ್ನರಾಜ ಅವರ ಚಾಣಾಕ್ಷತೆ ಬಹುಮುಖ್ಯ ಪಾತ್ರ ವಹಿಸಿದೆ. ಲಕ್ಷ್ಮಿ ಹೆಬ್ಬಾಳಕರ್ ಈವರೆಗೆ 3 ಚುನಾವಣೆಗಳನ್ನು ಎದುರಿಸಿದ್ದಾರೆ. ಎರಡರಲ್ಲಿ ಅಲ್ಪ ಮತಗಳಿಂದ ಪರಾಭವಗೊಂಡಿದ್ದಾರೆ. ಮೂರನೇಯದರಲ್ಲಿ ಭರ್ಜರಿ ಯಶಸ್ಸು ಕಂಡಿದ್ದಾರೆ.
ಸಮಷ್ಠಿ ಪ್ರಜ್ಞೆಯ ನಾಯಕ
ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಹೇಗೆ ಕ್ಷೇತ್ರದ ಮನೆ ಮಗಳೆನಿಸಿದ್ದಾರೋ, ಚನ್ನರಾಜ ಹಟ್ಟಿಹೊಳಿ ಮನೆ ಮಗನಾಗಿ ಕ್ಷೇತ್ರದ ಜನರ ಕಷ್ಟ ಸುಖದ ಜವಾಬ್ದಾರಿ ಹೊತ್ತಿದ್ದಾರೆ. ಎಲ್ಲರನ್ನೂ ಸಂಬಾಳಿಸುವ, ಸಂತೈಸುವ, ಸ್ಪಂದಿಸುವ, ಮಾರ್ಗದರ್ಶನ ತೋರುವ ಅಣ್ಣನಾಗಿ ಅವರು ಕೆಲಸ ಮಾಡುತ್ತಿದ್ದಾರೆ.
ಹರ್ಷ ಬಿಲ್ಡರ್ಸ್ ಆ್ಯಂಡ್ ಡೆವಲಪ್ಪರ್ಸ್ ಚೆರಮನ್ ಆಗಿ, ಹರ್ಷ ಶುಗರ್ಸ್ ವ್ಯವಸ್ಥಾಪಕ ನಿರ್ದೇಶಕರಾಗಿ, ಲಕ್ಷ್ಮಿ ಸೌಹಾರ್ದ ಸೊಸೈಟಿಯ ಚೆರಮನ್ ಆಗಿ ಸಾಕಷ್ಟು ಸಮಾಜ ಸೇವೆಯಲ್ಲಿ ತೊಡಗಿಸಿಕೊಡಿದ್ದಾರೆ.
ಚನ್ನರಾಜ ಹಟ್ಟಿಹೊಳಿ ಮೂಲತಃ ಖಾನಾಪುರ ತಾಲೂಕಿನ ಚಿಕ್ಕಹಟ್ಟಿಹೊಳಿ ಗ್ರಾಮದವರು. ಅಲ್ಲಿಯೇ ಪ್ರಾಥಮಿಕ ಶಿಕ್ಷಣ ಪೂರೈಸಿ, ಮೈಸೂರಿನ ಶ್ರೀರಾಮಕೃಷ್ಣ ವಿದ್ಯಾಶಾಲೆಯಲ್ಲಿ ಪ್ರೌಢ ಮತ್ತು ಪದವಿ ಪೂರ್ವ ಶಿಕ್ಷಣ ಪಡೆದರು. ಚೆನ್ನೈಯಲ್ಲಿ ಮರೈನ್ ಎಂಜಿನಿಯರಿಂಗ್ ಕೋರ್ಸ್ ಮುಗಿಸಿ 5 ವರ್ಷಗಳ ಕಾಲ ವಿಶ್ವದ ಹಲವಾರು ದೇಶಗಳಲ್ಲಿ ಕೆಲಸ ನಿರ್ವಹಿಸಿದ್ದಾರೆ.
2013ರ ನಂತರ ಕುಟುಂಬದ ವ್ಯವಹಾರ ನೋಡಿಕೊಳ್ಳುವುದಕ್ಕಾಗಿ, ಸಮಾಜಸೇವೆ ಮಾಡುವುದಕ್ಕಾಗಿ ಇರುವ ಉದ್ಯೋಗವನ್ನು ತೊರೆದು ಬೆಳಗಾವಿಗೆ ಆಗಮಿಸಿದರು. ಅಂದಿನಿಂದ ಇಂದಿನವರೆಗೂ ಜನಸೇವೆಯಲ್ಲಿ ಯಾವ ಜನಪ್ರತಿನಿಧಿಗೂ ಕಡಿಮೆ ಇಲ್ಲದಂತೆ ತೊಡಗಿಸಿಕೊಂಡಿದ್ದಾರೆ.
ಚನ್ನರಾಜ ಹಟ್ಟಿಹೊಳಿ ಸಣ್ಣ ವಯಸ್ಸಿನಲ್ಲೇ ತಮ್ಮ ನಾಯಕತ್ವ ಗುಣವನ್ನು ಪ್ರಚುರಪಡಿಸಿದ್ದಾರೆೆ. ಸಮಾಧಾನ, ತಾಳ್ಮೆ, ಮಾನವೀಯತೆ, ಎಲ್ಲರನ್ನೂ ಒಟ್ಟಾಗಿಸಿಕೊಂಡು ಹೋಗುವ ನಾಯಕತ್ವ, ಎಂತಹ ಸಂದರ್ಭದಲ್ಲೂ ಧೈರ್ಯಗುಂದದೇ ಮುನ್ನುಗ್ಗುವ ಗುಣ, ಎದುರಿಗಿದ್ದವರನ್ನು ತಮ್ಮತ್ತ ಸೆಳೆಯುವ ವ್ಯಕ್ತಿತ್ವ, ಯೋಚಿಸಿ ನಿರ್ಧಾರ ತೆಗೆದುಕೊಳ್ಳುವ ಚಾಣಾಕ್ಷತೆ ಈ ಮೊದಲಾದ ಗುಣಗಳಿಂದ ಅವರು ಭವಿಷ್ಯದ ನಾಯಕನಾಗುವ ಲಕ್ಷಣ ತೋರ್ಪಡಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ