ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಖಾಸಗಿ ದೂರು ದಾಖಲಿಸಲು ಅನುಮತಿ ಕೋರಿರುವ ಹಿನ್ನೆಲೆಯಲ್ಲಿ ರಾಜ್ಯಪಾಲರು ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಪ್ರಾಯ ಕೇಳಿ ನೋಟೀಸ್ ನೀಡಿದ್ದು, ಇದರಿಂದಾಗಿ ಇಂದು ಬೆಳಗ್ಗೆ 11 ಗಂಟೆಗೆ ನಡೆಯಲಿರುವ ಸಚಿವ ಸಂಪುಟ ಸಭೆ ಭಾರೀ ಕುತೂಹಲ ಮೂಡಿಸಿದೆ.
ಅಬ್ರಹಾಂ ಎನ್ನುವ ಸಾಮಾಜಿಕ ಕಾರ್ಯಕರ್ತರೊಬ್ಬರು ಮುಖ್ಯಮಂತ್ರಿ ವಿರುದ್ಧ ಪ್ರಕರಣ ದಾಖಲಿಸಲು ರಾಜ್ಯಪಾಲರ ಅನುಮತಿ ಕೋರಿದ್ದಾರೆ. ಹಾಗಾಗಿ ರಾಜ್ಯಪಾಲರು ಮುಖ್ಯಮಂತ್ರಿಗಳಿಗೆ ನೋಟೀಸ್ ನೀಡಿದ್ದಾರೆ. ಈ ಕುರಿತು ಈಗಾಗಲೆ ಹಲವಾರು ಸಚಿವರು, ಕಾಂಗ್ರೆಸ್ ನಾಯಕರು ಕಿಡಿಕಾರಿದ್ದು, ರಾಜ್ಯಪಾಲರ ಮೂಲಕ ಸರಕಾರ ಕೆಡವಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದ್ದಾರೆ.
ಈ ಪ್ರಕರಣ ರಾಜ್ಯ ರಾಜಕಾರಣದಲ್ಲಿ ಭಾರೀ ಕೋಲಾಹಲ ಎಬ್ಬಿಸಿದೆ. ಒಂದೆಡೆ ಬಿಜೆಪಿ ಮೈಸೂರಿಗೆ ಹಮ್ಮಿಕೊಂಡಿರುವ ಪಾದಯಾತ್ರೆ ಗೊಂದಲದ ಗೂಡಾಗಿರುವ ಬೆನ್ನಲ್ಲೇ ಇದೀಗ, ರಾಜ್ಯಪಾಲರ ನೋಟೀಸ್ ಕೂಡ ಪ್ರಕರಣಕ್ಕೆ ಮತ್ತೊಂದು ತಿರುವು ನೀಡಿದೆ.
ಈ ಹಿನ್ನೆಲೆಯಲ್ಲಿ ಇಂದು ಸಚಿವಸಂಪುಟ ಸಭೆಯಲ್ಲಿ ನಡೆಯಲಿರುವ ಚರ್ಚೆ ಮತ್ತು ನಿರ್ಣಯ ಕುತೂಹಲ ಹೆಚ್ಚಿಸಿದೆ. ಸಧ್ಯ ಮುಖ್ಯಮಂತ್ರಿಗಳ ನಿವಾಸದಲ್ಲಿ ಸಚಿವರ ಉಪಹಾರ ಕೂಟ ನಡೆಯುತ್ತಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ