ಪ್ರಗತಿವಾಹಿನಿ ಸುದ್ದಿ, ಕಕ್ಕೇರಿ: ಸಮೀಪದ ಹೊಸ ಲಿಂಗನಮಠ ಪಕ್ಕದ ಹುಲಿಕೇರಿ ಕಾಡಿನಿಂದ ನೀರು, ಮೇವು ಅರಸಿ ಜಿಂಕೆ ಮರಿ ಲಿಂಗನಮಠ ಗ್ರಾಮಕ್ಕೆ ಬರುತ್ತಿದ್ದಂತೆ ಜನರು ಮತ್ತೆ ಯಾವ ಪ್ರಾಣಿಗಳಿವೆಯೋ ಎಂದು ಭಯಭೀತರಾದರು.
ಬಿಸಿಲ ಧಗೆ ದಿನದಿಂದ ದಿನಕ್ಕೆ ಏರುತ್ತಿರುವುದರಿಂದ ಕಾಡಿನ ಪ್ರಾಣಿಗಳು ನೀರು, ಮೇವು ಅರಸಿ ನಾಡಿನತ್ತ ಮುಖ ಮಾಡುತ್ತಿರುವುದು ಸಾಮಾನ್ಯವಾಗಿದೆ. ಯುವಕರು ಜಿಂಕೆ ಮರಿಯ ಮೇಲೆ ನಾಯಿಗಳು ದಾಳಿ ಮಾಡದಂತೆ ಉಪಾಯದಿಂದ ಹಿಡಿದು ಅದನ್ನು ಕೋಣೆಯಲ್ಲಿ ಕಟ್ಟಿಹಾಕಿ ಅದಕ್ಕೆ ನೀರು ಕುಡಿಸಿ, ಹಸಿರು ಹುಲ್ಲು ಹಾಕಿ ಸಂತೈಸಿದರು. ಆದರೂ ಜಿಂಕೆ ಜನರನ್ನು ಕಂಡು ಭಯದಿಂದ ತಡಬಡಿಸುತ್ತಿತ್ತು.
ಬಳಿಕ ಯುವಕರು ಅರಣ್ಯ ಇಲಾಖೆಯ ಸಿಬ್ಬಂದಿಗೆ ವಿಷಯ ತಿಳಿಸಿ, ಅವರು ಬರುವವರೆಗೆ ಜಿಂಕೆಯ ಆರೈಕೆ ಮಾಡಿ ಮಾನವೀಯತೆ ಮೆರೆದರು.
ಗೋಲಿಹಳ್ಳಿ ವಲಯ ಅರಣ್ಯಾಧಿಕಾರಿ ಶ್ರೀನಾಥ ಕಡೋಲಕರ ಹಾಗೂ ಗೋಧೊಳ್ಳಿ ಉಪವಿಭಾಗ ವಲಯದ ಸಿಬ್ಬಂದಿ ಪ್ರಕಾಶ ಮರೆಪ್ಪನವರ , ಗಾರ್ಡ ಮಂಜುನಾಥ ಗೌಡರ ಹೊಸಲಿಂಗನಮಠಕ್ಕೆ ದೌಡಾಯಿಸಿ, ಪಕ್ಕದ ಗೋಧೊಳ್ಳಿ ಅರಣ್ಯ ಪ್ರದೇಶದಲ್ಲಿ ಜಿಂಕೆ ಮರಿಯನ್ನು ಕಾಡಿನೊಳಕ್ಕೆ ಬಿಟ್ಟರು.
ಯುವಕರ ಕಾರ್ಯಕ್ಕೆ ಅರಣ್ಯ ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದರು.
ಕಾಡಿನಲ್ಲಿ ಪ್ರಾಣಿಗಳಿಗೆ ಸೂಕ್ತ ನೀರು ಹಾಗೂ ಹಸಿರು ಮೇವು ವ್ಯವಸ್ಥೆ ಮಾಡಿದರೆ ಪ್ರಾಣಿಗಳು ನಾಡಿಗೆ ನುಗ್ಗುವುದು, ಅಪಾಯ ಒಡ್ಡುವುದು ತಪ್ಪುತ್ತದೆ ಎಂದು ಜನರು ಅರಣ್ಯ ಅಧಿಕಾರಿಗಳಿಗೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಹೊಸ ಲಿಂಗನಮಠ ಹಾಗೂ ಸುತ್ತಲಿನ ಗ್ರಾಮಗಳ ಯುವಕರು, ಗ್ರಾಮಸ್ಥರು ಇದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ