ನ್ಯಾಯಾಧೀಶರಾಗಿರುವ ಐವರು ಹಳೆಯ ವಿದ್ಯಾರ್ಥಿಗಳ ಅಭಿನಂದನಾ ಕಾರ್ಯಕ್ರಮ
ರಾಜಾ ಲಖಮಗೌಡ ಕಾನೂನು ಮಹಾವಿದ್ಯಾಲಯ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಇಲ್ಲಿನ ಕರ್ನಾಟಕ ಕಾನೂನು ಸಂಸ್ಥೆಯ ರಾಜಾ ಲಖಮಗೌಡ ಕಾನೂನು ಮಹಾವಿದ್ಯಾಲಯ ಅಪರೂಪದ ಕಾರ್ಯಕ್ರಮಕ್ಕೆ ಅಣಿಯಾಗಿದೆ.
ರಾಜಾ ಲಖಮಗೌಡ ಕಾನೂನು ಮಹಾವಿದ್ಯಾಲಯದ ಆಡಳಿತ ಮಂಡಳಿ ಚೇರಮನ್, ನ್ಯಾಯವಾದಿ ಎಂ.ಆರ್.ಕುಲಕರ್ಣಿ, ಐಎಂಇಆರ್ ಚೇರಮನ್ ಹಾಗೂ ರಾಜಾ ಲಖಮಗೌಡ ಕಾನೂನು ಮಹಾವಿದ್ಯಾಲಯದ ಆಡಳಿತ ಮಂಡಳಿ ಸದಸ್ಯ, ನ್ಯಾಯವಾದಿ ಆರ್.ಎಸ್.ಮುತಾಲಿಕ, ಕರ್ನಾಟಕ ಕಾನೂನು ಸಂಸ್ಥೆಯ ಕಾರ್ಯದರ್ಶಿ, ಆಡಳಿತ ಮಂಡಳಿ ಸದಸ್ಯ, ನ್ಯಾಯವಾದಿ ಎಸ್.ವಿ.ಗಣಾಚಾರಿ ಅವರು ಗುರುವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಕಾರ್ಯಕ್ರಮದ ಮಾಹಿತಿ ನೀಡಿದರು.
ರಾಜಾ ಲಖಮಗೌಡ ಕಾನೂನು ಮಹಾವಿದ್ಯಾಲಯ ಕರ್ನಾಟಕದ ಉಚ್ಚ ನ್ಯಾಯಾಲಯದ ನ್ಯಾಯಾಧೀಶರಾದ ನಮ್ಮ ಕಾಲೇಜಿನಲ್ಲಿ ಓದಿದ ಐವರು ಗಣ್ಯ ಹಳೆಯ ವಿದ್ಯಾರ್ಥಿಗಳಿಗೆ ಸನ್ಮಾನ ಸಮಾರಂಭವನ್ನು ಆಯೋಜಿಸುತ್ತಿದೆ. ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಜಸ್ಟೀಸ್ ಪ್ರಸನ್ನ ಬಿ.ವರಾಳೆ ಅವರು ಹಳೆಯ ವಿದ್ಯಾರ್ಥಿಗಳನ್ನು ಸನ್ಮಾನಿಸಲಿದ್ದಾರೆ. ಆಗಸ್ಟ್ 5 ರಂದು ಸಂಜೆ 4:30 ಗಂಟೆಗೆ ಕಾಲೇಜಿನ ಪ್ಲಾಟಿನಂ ಜುಬಿಲಿ ಬಿಲ್ಡಿಂಗ್ ನ ಕೆ.ಕೆ.ವೇಣುಗೋಪಾಲ್ ಆಡಿಟೋರಿಯಂನಲ್ಲಿ ಸನ್ಮಾನಿಸಲಿದ್ದಾರೆ.
ಕರ್ನಾಟಕ ಕಾನೂನು ಸಂಸ್ಥೆಯ ಅಧ್ಯಕ್ಷ ಹಾಗೂ ಹಿರಿಯ ನ್ಯಾಯವಾದಿ ಅನಂತ ಮಂಡಗಿ ಅವರು ಕರ್ನಾಟಕ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಜಸ್ಟಿಸ್ ಪ್ರಸನ್ನ ಬಿ.ವರಾಳೆ ಅವರನ್ನು ಗೌರವಿಸಲಿದ್ದಾರೆ.
ಪ್ರಸನ್ನ ಬಿ.ವರಾಳೆ ಅವರು ನ್ಯಾಯಮೂರ್ತಿ ಸಚಿನ್ ಶಂಕರ ಮಗದುಮ್, ನ್ಯಾಯಮೂರ್ತಿ ರವಿ ವೆಂಕಪ್ಪ ಹೊಸಮನಿ, ನ್ಯಾಯಮೂರ್ತಿ ಕೆ.ಎಸ್.ಹೇಮಲೇಖಾ, ಜಸ್ಟೀಸ್ ಅನಿಲ್ ಭೀಮಸೇನ ಕತ್ತಿ, ಜಸ್ಟೀಸ್ ರಾಮಚಂದ್ರ ಡಿ. ಹುದ್ದಾರ ಅವರನ್ನು ಸನ್ಮಾನಿಸಲಿದ್ದಾರೆ.
ಪ್ರಸನ್ನ ವರಾಳೆ ಅವರು ಸಮಾರಂಭವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಸಮಾರಂಭದ ಅಧ್ಯಕ್ಷತೆಯನ್ನು ಕರ್ನಾಟಕ ಕಾನೂನು ಸಂಸ್ಥೆಯ ಅಧ್ಯಕ್ಷ ಅನಂತ ಮಂಡಗಿ ವಹಿಸಲಿದ್ದು, ಕರ್ನಾಟಕ ಕಾನೂನು ಸಂಸ್ಥೆಯ ಎಲ್ಲಾ ಸದಸ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿರುವರು ಎಂದು ಮಾಹಿತಿ ನೀಡಿದರು.
ಬೆಳಗಾವಿಯ ಕರ್ನಾಟಕ ಕಾನೂನು ಸಂಸ್ಥೆಯ ರಾಜಾ ಲಖಮಗೌಡ ಕಾನೂನು ಮಹಾವಿದ್ಯಾಲಯ ಭಾರತದ ಅತ್ಯಂತ ಹಳೆಯ ಕಾನೂನು ಕಾಲೇಜುಗಳಲ್ಲಿ ಒಂದಾಗಿದೆ. ದಕ್ಷಿಣ ಭಾರತದ ಕಾನೂನು ಶಿಕ್ಷಣ ನೀಡುವ ಪ್ರಮುಖ ಸಂಸ್ಥೆಯಾಗಿದೆ, ಗುಣಮಟ್ಟದ ಕಾನೂನು ಶಿಕ್ಷಣವನ್ನು ನೀಡುವ ತನ್ನ ಸಂಕಲ್ಪದ ಭಾಗವಾಗಿ 1939 ರಲ್ಲಿ ಕರ್ನಾಟಕ ಕಾನೂನು ಸಂಸ್ಥೆಯನ್ನು ಬೆಳಗಾವಿಯಲ್ಲಿ ಸ್ಥಾಪಿಸಲಾಯಿತು. ಕಾಲೇಜಿಗೆ ಉದಾರ ದಾನ ಧರ್ಮ ಮಾಡಿದ ವಂಟಮುರಿ ರಾಜಾ ಲಖಮಗೌಡ ಸರ್ದೇಸಾಯಿ ಅವರ ಹೆಸರಿಡಲಾಗಿದೆ ಎಂದು ಹೇಳಿದರು.
ಪ್ರಾರಂಭದಿಂದಲೂ ರಾಜಾ ಲಖಮಗೌಡ ಕಾನೂನು ಮಹಾವಿದ್ಯಾಲಯ ಕಾನೂನು ಶಿಕ್ಷಣದ ಉದ್ದೇಶಕ್ಕಾಗಿ ಅಪಾರ ಸೇವೆಯನ್ನು ಮಾಡುತ್ತಿದೆ. ರಾಜಾ ಲಖಮಗೌಡ ಕಾನೂನು ಕಾಲೇಜು ತನ್ನ ಹೆಮ್ಮೆಯ ಹಳೆಯ ವಿದ್ಯಾರ್ಥಿಗಳಿಂದ ಹೆಸರುವಾಸಿಯಾಗಿದೆ. ಭಾರತದ ಇಬ್ಬರು ಮಾಜಿ ಮುಖ್ಯ ನ್ಯಾಯಮೂರ್ತಿಗಳಾದ ಗೌರವಾನ್ವಿತ ನ್ಯಾಯಮೂರ್ತಿ (ದಿವಂಗತ) ಇ.ಎಸ್. ವೆಂಕಟರಾಮಯ್ಯ ಮತ್ತು ಗೌರವಾನ್ವಿತ ನ್ಯಾಯಮೂರ್ತಿ ಡಾ. ಎಸ್. ರಾಜೇಂದ್ರ ಬಾಬು (ಮಾಜಿ ಅಧ್ಯಕ್ಷರು, ಎನ್‌ಎಚ್‌ಆರ್‌ಸಿ, ನವದೆಹಲಿ) ಅವರು ಹೆಮ್ಮೆಯ ಹಳೆಯ ವಿದ್ಯಾರ್ಥಿಗಳಾಗಿ ತಮ್ಮ ಸೇವೆಯನ್ನು ದೇಶಕ್ಕೆ ನೀಡಿದ್ದಾರೆ. ವಿವಿಧ ಹೈಕೋರ್ಟ್‌ಗಳ ಅನೇಕ ಹಾಲಿ ಮತ್ತು ಮಾಜಿ ನ್ಯಾಯಾಧೀಶರಿಗೆ ನೆಲೆಯಾಗಿದೆ.
ಅವರಲ್ಲಿ ಕರ್ನಾಟಕ ಮತ್ತು ಕೇರಳ ಹೈಕೋರ್ಟ್‌ನ ಮಾಜಿ ಮುಖ್ಯ ನ್ಯಾಯಮೂರ್ತಿ ವಿ.ಎಸ್. ಮಳಿಮಠ ಮತ್ತು ಎನ್‌ಎಚ್‌ಆರ್‌ಸಿ ಮಾಜಿ ಸದಸ್ಯ, ಕೇರಳ ಹೈಕೋರ್ಟ್ ನಿವೃತ್ತ ಮುಖ್ಯ ನ್ಯಾಯಮೂರ್ತಿ ಎಸ್.ಆರ್.ಬನ್ನೂರಮಠ, ಪದ್ಮವಿಭೂಷಣ, ಭಾರತದ ಮಾಜಿ ಅಟಾರ್ನಿ ಜನರಲ್ ಕೆ.ಕೆ.ವೇಣುಗೋಪಾಲ್, ಭಾರತದ ಸರ್ವೋಚ್ಚ ನ್ಯಾಯಾಲಯದ ಖ್ಯಾತ ಹಿರಿಯ ವಕೀಲರು ಮತ್ತು ಹೆಸರಾಂತ ಸಾಂವಿಧಾನಿಕ ಕಾನೂನು ತಜ್ಞರೂ ನಮ್ಮ ಹೆಮ್ಮೆಯ ಹಳೆಯ ವಿದ್ಯಾರ್ಥಿಗಳು ಎನ್ನುವುದು ನಮಗೆ ಹೆಮ್ಮೆಯ ಸಂಗತಿ ಎಂದು ಹೇಳಿದರು.
ಸಂಸದೀಯ ಕ್ಷೇತ್ರದಲ್ಲಿ ರಾಜಾ ಲಖಮಗೌಡ ಕಾನೂನು ಮಹಾವಿದ್ಯಾಲಯದ ಕೊಡುಗೆಯೂ ಅಷ್ಟೇ ಅಪಾರ. ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಸ್.ಆರ್.ಬೊಮ್ಮಾಯಿ, ಕೇಂದ್ರದ ಮಾಜಿ ಸಚಿವರಾದ ಬಿ.ಎನ್. ದಾತಾರ, ಬಿ. ಶಂಕರಾನಂದ ಮತ್ತು ಸರೋಜಿನಿ ಮಹಿಷಿ ನಮ್ಮ ಕಾಲೇಜಿನ ಹಳೇ ವಿದ್ಯಾರ್ಥಿಗಳು.
ರಾಷ್ಟ್ರಪ್ರಶಸ್ತಿ ವಿಜೇತ ನಟ ಚಾರು ಹಾಸನ್, ರಾಷ್ಟ್ರೀಯ ಕ್ರೀಡಾಪಟು ಅರ್ಜುನ್ ದೇವಯ್ಯ ಸೇರಿದಂತೆ ಹಲವರು ಕಾಲೇಜಿನ ಹೆಸರನ್ನು ದೇಶದ ಮೂಲೆ ಮೂಲೆಗೆ ಕೊಂಡೊಯ್ದಿದ್ದಾರೆ. ಈ ಶ್ರೀಮಂತ ಸಂಪ್ರದಾಯವನ್ನು ನಮ್ಮ ವಿದ್ಯಾರ್ಥಿಗಳು ಇತ್ತೀಚಿನ ಜಿಲ್ಲಾ ಮತ್ತು ಸಿವಿಲ್ ನ್ಯಾಯಾಧೀಶರ ಆಯ್ಕೆಯ ಸಮಯದಲ್ಲಿ ಅತ್ಯುತ್ತಮವಾಗಿ ನಿರ್ವಹಿಸುವ ಮೂಲಕ ಮುಂದುವರಿಸಿದ್ದಾರೆ. ಇತ್ತೀಚೆಗೆ ನಮ್ಮ ಐದು ಹಳೆಯ ವಿದ್ಯಾರ್ಥಿಗಳು ಕರ್ನಾಟಕ ಉಚ್ಚ ನ್ಯಾಯಾಲಯದ ಹಾಲಿ ಹೈಕೋರ್ಟ್ ನ್ಯಾಯಾಧೀಶರಾಗಿದ್ದಾರೆ.
ಕಾಲೇಜು ನಿರಂತರವಾಗಿ ವಿಶ್ವವಿದ್ಯಾನಿಲಯಕ್ಕೆ ಶ್ರೇಯಾಂಕಗಳನ್ನು ಗಳಿಸುತ್ತದೆ. ಯೂನಿವರ್ಸಿಟಿ ಬ್ಲೂಸ್ ಅನ್ನು ಪದೇ ಪದೇ ಪಡೆಯುತ್ತಿದೆ ಎಂದು ಮಾಹಿತಿ ನೀಡಿದರು.
ಪ್ರಾಚಾರ್ಯ ಡಾ.ಎ.ಎಚ್.ಹವಾಲ್ದಾರ್, ಮತ್ತು ಸಹಾಯಕ ಪ್ರಾಧ್ಯಾಪಕಿ ಸಮೀನಾ.ಎನ್ ಬೇಗ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ