ಪ್ರಗತಿವಾಹಿನಿ ಸುದ್ದಿ, ರಾಂಚಿ: ಆರೋಪಿಯೊಬ್ಬನನ್ನು ಬಂಧಿಸಲು ಬಂದಿದ್ದ ಪೊಲೀಸರು ನಾಲ್ಕು ದಿನಗಳ ಶಿಶುವನ್ನು ತುಳಿದು ಸಾಯಿಸಿದ ಘಟನೆಯೊಂದು ಇಡೀ ವ್ಯವಸ್ಥೆ ತಲೆತಗ್ಗಿಸುವಂತೆ ಮಾಡಿದೆ.
ಜಾರ್ಖಂಡ್ ರಾಜ್ಯದ ಗಿರಿದಿಹ್ ಜಿಲ್ಲೆಯ ಕೊಸೊಗೊಂಡೊಡಿಗಿ ಗ್ರಾಮದಲ್ಲಿ ನಡೆದಿರುವ ಈ ಘಟನೆಗೆ ದೇಶಾದ್ಯಂತ ಖಂಡನೆ ವ್ಯಕ್ತವಾಗಿದ್ದು ಮುಖ್ಯಮಂತ್ರಿ ಹೇಮಂತ ಸೊರೆನ್ ಅವರು ತನಿಖೆಗೆ ಆದೇಶಿಸಿದ್ದಾರೆ.
ಮಗುವಿನ ಅಜ್ಜ ಭೂಷಣ್ ಪಾಂಡೆ ಪ್ರಕರಣವೊಂದರಲ್ಲಿ ಜಮೀನಿಗೆ ಸಂಬಂಧಿಸಿದ ಪ್ರಕರಣವೊಂದರಲ್ಲಿ ಆರೋಪಿಯಾಗಿದ್ದು ಅವರ ವಿರುದ್ಧ ಜಾಮೀನು ರಹಿತ ವಾರಂಟ್ ಜಾರಿಯಾಗಿತ್ತು. ಈ ಹಿನ್ನೆಲೆಯಲ್ಲಿ ದಿಯೋರಿ ಪೊಲೀಸ್ ಠಾಣೆ ಅಧಿಕಾರಿ ಸಂಗಮ್ ಪಾಠಕ್ ತಮ್ಮ ಸಿಬ್ಬಂದಿ ಜೊತೆ ಭೂಷಣ್ ಬಂಧನಕ್ಕೆ ಮನೆಗೆ ತೆರಳಿದ್ದರು.
ಆದರೆ ಪೊಲೀಸರು ಬರುವ ಸುಳಿವು ದೊರೆತ ಭೂಷಣ್ ತಮ್ಮ ಕುಟುಂಬ ಸಮೇತ ಮನೆಯಿಂದ ಪರಾರಿಯಾಗಿದ್ದು ಮಗು ಮಾತ್ರ ಮನೆಯಲ್ಲಿತ್ತು ಎನ್ನಲಾಗಿದೆ. ಪೊಲೀಸ್ ತಂಡ ಮನೆಯೊಳಗೆ ಹೋಗಿ ತಪಾಸಣೆ ನಡೆಸಿ ತೆರಳಿದ ನಂತರ ಮಗು ಮೃತಪಟ್ಟಿರುವುದು ಕಂಡುಬಂದಿದೆ ಎಂದು ಭೂಷಣ್ ಕುಟುಂಬ ತಿಳಿಸಿದ್ದು ಪೊಲೀಸರೇ ಮಗುವನ್ನು ತುಳಿದು ಕೊಂದಿದ್ದಾಗಿ ಆರೋಪಿಸಿದೆ.
ಮಗುವಿನ ಶವದ ಮರಣೋತ್ತರ ಪರೀಕ್ಷೆ ನಡೆಸಿದ್ದು ವರದಿ ಬರಬೇಕಿದೆ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕ ಸಂಜಯ ರಾಣಾ ತಿಳಿಸಿದ್ದಾರೆ. ರಾಜ್ಯ ಆರೋಗ್ಯ ಸಚಿವ ಬನ್ನಾ ಗುಪ್ತಾ ಸಹ ಘಟನೆ ಖಂಡಿಸಿದ್ದು ಈ ಬಗ್ಗೆ ಸೂಕ್ತ ತನಿಖೆ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ