ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಪ್ರಾಥಮಿಕ ಪೂರ್ವ ಶಿಕ್ಷಣದಲ್ಲಿ ಗುರುತರ ಬದಲಾವಣೆಗಳನ್ನು ಮಾಡಬೇಕೆಂಬ ಉದ್ದೇಶವಿದೆ. ಅದಕ್ಕೂ ಮುನ್ನ ಇಲಾಖೆಯ ಸಮಗ್ರ ಮಾಹಿತಿಗಳನ್ನು ಅರಿತು ನಿರ್ಧಾರ ಕೈಗೊಳ್ಳಲಿದ್ದೇನೆ ಎಂದು ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಹೇಳಿದರು.
ಅವರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿ ಬೆಳಗಾವಿಗೆ ಹಿಂದಿರುಗಿದ ವೇಳೆ ಭಾನುವಾರ ಇಲ್ಲಿನ ವಿಮಾನ ನಿಲ್ದಾಣದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
“ಇನ್ನೂ ಇಲಾಖೆಗಳ ಅಧಿಕೃತವಾದ ಹಂಚಿಕೆ ಆಗಿಲ್ಲ. ಕೊಟ್ಟ ಇಲಾಖೆಯ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಲಿದ್ದು, ಭ್ರಷ್ಟಾಚಾರ ಮುಕ್ತವಾದ ಆಡಳಿತ ನೀಡಬೇಕೆಂಬ ಉದ್ದೇಶ ಹೊಂದಲಾಗಿದೆ. ಆ ಮೂಲಕ ಸರಕಾರಕ್ಕೆ, ಮುಖ್ಯಮಂತ್ರಿಗಳಿಗೆ ಒಳ್ಳೆಯ ಹೆಸರು ಬರುವಂತೆ ಕಾರ್ಯ ನಿರ್ವಹಿಸಲಾಗುವುದು” ಎಂದು ಅವರು ತಿಳಿಸಿದರು. ಜಿಲ್ಲೆಗೆ ಹೊಸ ಯೋಜನೆಗಳನ್ನೇನಾದರೂ ತರುವ ಉದ್ದೇಶದ ಬಗ್ಗೆ ಪ್ರಶ್ನಿಸಿದಾಗ ಅಂಥ ಗುರಿ ಇದ್ದು, ಈಗಾಗಲೆ ಚರ್ಚಿಸಲಾಗಿದೆ. ಮುಂಬರುವ ದಿನಗಳಲ್ಲಿ ಎಲ್ಲವನ್ನೂ ತಿಳಿಸಲಾಗುತ್ತದೆ” ಎಂದರು.
ನೂತನ ಲೋಕೋಪಯೋಗಿ ಇಲಾಖೆ ಸಚಿವ ಸತೀಶ ಜಾರಕಿಹೊಳಿ ಅವರು ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿ, “ರಾಜಕೀಯ ಸ್ಥಿತಿಗತಿಗಳಿಗೆ ಅನುಸಾರವಾಗಿ ಜಿಲ್ಲೆಗೆ ಎರಡು ಸಚಿವ ಸ್ಥಾನಗಳನ್ನಷ್ಟೇ ನೀಡಲಾಗಿದೆ. ಇದು ಕೇವಲ ಬೆಳಗಾವಿ ಜಿಲ್ಲೆಗಷ್ಟೇ ಅನ್ವಯಿಸುವುದಿಲ್ಲ. ಸಚಿವ ಸ್ಥಾನ ಸಿಗಲಿಲ್ಲವೆಂಬ ಅಸಮಾಧಾನಗಳು, ಆ ಕುರಿತ ಆರೋಪಗಳು ಸಹಜ. ಮುಂಬರುವ ದಿನಗಳಲ್ಲಿ ಎಲ್ಲರಿಗೂ ಯೋಗ್ಯ ಹುದ್ದೆಗಳನ್ನು ನೀಡಲಾಗುತ್ತಿದೆ” ಎಂದರು.
“ಶಾಸಕರಾಗಿದ್ದ ವೇಳೆ ಕೈಗೊಂಡ ಅನೇಕ ಅಭಿವೃದ್ಧಿ ಕಾಮಗಾರಿಗಳು ಅಪೂರ್ಣವಾಗಿದ್ದು ಅವುಗಳನ್ನು ಪೂರ್ಣಗೊಳಿಸಲು ಆದ್ಯತೆ ನೀಡಲಾಗುವುದು” ಎಂದು ಅವರು ಹೇಳಿದರು.
ಬ್ಯಾನ್ ಮಾಡುವುದಾಗಿ ಹೇಳಿಲ್ಲ:
ರಾಜ್ಯ ಸರಕಾರದಿಂದ ಯಾವುದೇ ನಿರ್ದಿಷ್ಟ ಸಂಘಟನೆಗಳನ್ನು ನಿಷೇಧಿಸುವುದಾಗಿ ಎಲ್ಲೂ ಹೇಳಿಲ್ಲ. ಅದಕ್ಕೆ ಅಂಥ ತರಾತುರಿಯೇನಿಲ್ಲ. ಶಾಂತಿ ಕದಡುವ ಸಂಘಟನೆಗಳನ್ನು ನಿಷೇಧಿಸುವುದಾಗಿ ಅಷ್ಟೇ ಹೇಳಲಾಗಿದೆ. ಎಸ್ ಡಿಪಿಐ, ಆರೆಸ್ಸೆಸ್ ಎಂದು ಉದಾಹರಣೆಗೆ ಹೇಳಲಾಗಿದೆಯೇ ಹೊರತು ಅವುಗಳನ್ನು ಬ್ಯಾನ್ ಮಾಡುವುದಾಗಿ ಹೇಳಿಲ್ಲ” ಎಂದು ಲಕ್ಷ್ಮೀ ಹೆಬ್ಬಾಳಕರ ಹಾಗೂ ಸತೀಶ ಜಾರಕಿಹೊಳಿ ಹೇಳಿದರು.
ಸಿದ್ದರಾಮಯ್ಯ ಐದು ವರ್ಷ ಮುಖ್ಯಮಂತ್ರಿಯಾಗಿರುತ್ತಾರೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಸತೀಶ ಜಾರಕಿಹೊಳಿ, ಅದನ್ನೆಲ್ಲ ನೋಡೋಣ. ಕಾಂಗ್ರೆಸ್ ಸರಕಾರವಂತೂ ಇದ್ದೇ ಇರುತ್ತದೆ. 50:50: ಇರುತ್ತದೆಯೋ, 12:12: ಇರುತ್ತದೆಯೋ ಅದು ಗೊತ್ತಿಲ್ಲ” ಎಂದರು.
ಅಭಿವೃದ್ಧಿ ಕಾರ್ಯಗಳನ್ನು ಸ್ಥಗಿತಗೊಳಿಸಿದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿ, “ಆಯಾ ಇಲಾಖೆ ಸಚಿವರು ಈ ಬಗ್ಗೆ ನಿರ್ಧರಿಸುತ್ತಾರೆ. ಯಾವುದೇ ಯೋಜನೆ ಅವಶ್ಯಕತೆ ಇದ್ದರೆ, ಜನಪರವಾಗಿದ್ದರೆ ಅದನ್ನು ಮುಂದುವರಿಸಲಾಗುತ್ತದೆ” ಎಂದು ಸತೀಶ ಜಾರಕಿಹೊಳಿ ಹೇಳಿದರು.
ಗ್ಯಾರಂಟಿ ಜಾರಿಗೆ ಸಮಯ ನೀಡಲಿ:
ಕಾಂಗ್ರೆಸ್ ಗ್ಯಾರಂಟಿಗಳ ಬಗ್ಗೆ ಪ್ರತಿಕ್ರಿಯಿಸಿದ ಸತೀಶ ಜಾರಕಿಹೊಳಿ, “ಗ್ಯಾರಂಟಿ ಯೋಜನೆಗಳ ಜಾರಿಗೆ ಬಿಜೆಪಿಯವರು ಸಮಯ ನೀಡಬೇಕು. ನಾವು ನಿರ್ದಿಷ್ಟ ಸಮಯದಲ್ಲಿ ಜಾರಿ ಮಾಡದಿದ್ದರೆ ಪ್ರತಿಭಟಿಸಲಿ. ಯಾವುದಕ್ಕೂ ಸಮಯ ಬೇಕಿದೆ” ಎಂದರು.
ವಿಮಾನ ನಿಲ್ದಾಣದ ಬಳಿ ಇಬ್ಬರೂ ನೂತನ ಸಚಿವರನ್ನು ಅಭಿಮಾನಿಗಳು, ಬೆಂಬಲಿಗರು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಅಪಾರ ಸಂಖ್ಯೆಯಲ್ಲಿ ಸೇರಿ ಸ್ವಾಗತ ಕೋರಿದರು. ಅಲ್ಲಿಂದ ಲಕ್ಷ್ಮೀ ಹೆಬ್ಬಾಳಕರ್ ಸುಳೇಬಾವಿಗೆ ತೆರಳಿ ಮಹಾಲಕ್ಷ್ಮಿಯ ದರ್ಶನ, ಆಶಿರ್ವಾದ ಪಡೆದರು. ರಸ್ತೆಯುದ್ದಕ್ಕೂ ಜನರು ಪಟಾಕಿಗಳನ್ನು ಸಿಡಿಸಿ, ಅದ್ದೂರಿಯಾಗಿ ಸ್ವಾಗತಿಸುತ್ತಿದ್ದರು.
ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ, ಶಾಸಕ ವಿಶ್ವಾಸ ವೈದ್ಯ ಮೊದಲಾದವರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ