Belagavi NewsBelgaum NewsKannada NewsKarnataka News

ಕೆಲವೇ ಕ್ಷಣಗಳಲ್ಲಿ ಬೆಳಗಾವಿಯಲ್ಲೊಂದು ಹೃದಯಸ್ಪರ್ಶಿ ಕಾರ್ಯಕ್ರಮ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಹೃದಯಸ್ಪರ್ಶಿ ಕಾರ್ಯಕ್ರಮವೊಂದಕ್ಕೆ ಬೆಳಗಾವಿಯ ಕೆಎಲ್ಇಎಸ್ ಡಾ.ಪ್ರಭಾಕರ ಕೋರೆ ಆಸ್ಪತ್ರೆ ಸಾಕ್ಷಿಯಾಗಲಿದೆ.

ಎರಡು ವರ್ಷದ ಬಾಲಕಿ ಯಶಸ್ವಿ ಹೃದಯ ಶಸ್ತ್ರ ಚಿಕಿತ್ಸೆಗೆ ಒಳಗಾಗಿ ಇಂದು ಮಧ್ಯಾಹ್ನ 2.30ಕ್ಕೆ ಆಸ್ಪತ್ರೆಯಿಂದ ಬಿಡುಗಡೆಯಾಗಲಿದ್ದಾಳೆ. ಇಷ್ಟೇ ಆಗಿದ್ದರೆ ಅದೇನು ವಿಶೇಷವಾಗುತ್ತಿರಲಿಲ್ಲ. ಆದರೆ ಆ ಬಾಲಕಿ ಕೆಲವೇ ದಿನಗಳ ಹಿಂದೆ ಅಪಘಾತದಲ್ಲಿ ತನ್ನ ತಂದೆಯನ್ನು ಕಳೆದುಕೊಂಡಿದ್ದಾಳೆ. ಆಕೆಯ ತಾಯಿ ಸಂಕಷ್ಟದ ಮಧ್ಯೆಯೂ ಧೈರ್ಯ ಮಾಡಿ, ತನ್ನ ಪತಿಯ ಅಂಗಾಂಗಗಳನ್ನು ದಾನ ಮಾಡಿದ್ದಾಳೆ. ತನ್ಮೂಲಕ ಅನೇಕ ಜೀವಗಳನ್ನು ಉಳಿಸಲು ಸಾಧ್ಯವಾಯಿತು.

ಆ ಕುಟುಂಬದ ಕರುಣಾಜನಕ ಕಥೆ ಕೇಳಿದ ಬೆಳಗಾವಿ ರೋಟರಿ ಕ್ಲಬ್ ಮುಂದಾಗಿ ಬಾಲಕಿಯ ಹೃದಯಶಸ್ತ್ರ ಚಿಕಿತ್ಸೆಯ ಜವಾಬ್ದಾರಿ ವಹಿಸಿಕೊಂಡಿತು. ಇದೀಗ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗುತ್ತಿದೆ.

“ಇತ್ತೀಚೆಗೆ ನಡೆದ ಭೀಕರ ಅಪಘಾತದಲ್ಲಿ ಯುವಕನೊಬ್ಬ ಪ್ರಾಣ ಕಳೆದುಕೊಂಡಿದ್ದ. ಅವರ ದುಃಖದ ಹೊರತಾಗಿಯೂ, ಅವರ ಕುಟುಂಬವು ಅವರ ಅಂಗಗಳನ್ನು ದಾನ ಮಾಡುವ ನಿಸ್ವಾರ್ಥ ನಿರ್ಧಾರವನ್ನು ತೆಗೆದುಕೊಂಡಿತು, ಅನೇಕ ಜೀವಗಳನ್ನು ಉಳಿಸಿತು. ಇದಕ್ಕಿಂತ ನೋವಿನ ಸಂಗತಿ ಎಂದರೆ ಮೃತರ ಎರಡು ವರ್ಷದ ಮಗಳು ಹೃದಯ ಖಾಯಿಲೆಯಿಂದ ಬಳಲುತ್ತಿದ್ದಾಳೆ ಮತ್ತು ಹೃದಯ ಶಸ್ತ್ರಚಿಕಿತ್ಸೆಯ ಅಗತ್ಯವಿದೆ ಎಂದು ಗೊತ್ತಾಯಿತು. ಆದರೆ ಕುಟುಂಬದ ಆರ್ಥಿಕ ಸ್ಥಿತಿಯ ಕಾರಣದಿಂದ ಇದು ಸಾಧ್ಯವಿರಲಿಲ್ಲ” ಎಂದು ರೋಟರಿ ಸಂಸ್ಥೆಯ ಪ್ರಮುಖರು ಹೇಳುತ್ತಾರೆ.

ಕೆಎಲ್ಇ ಆಸ್ಪತ್ರೆಯ ಸಹಭಾಗಿತ್ವದಲ್ಲಿ ರೋಟರಿ ಕ್ಲಬ್ ಆಫ್ ಬೆಳಗಾವಿ ಸೌತ್ (RID 3170) ಮತ್ತು ರೋಟರಿ ಗೋಲ್ಡ್ ಕೋಸ್ಟ್ ಕ್ಲಬ್ USA ಯ ಪ್ರಯತ್ನಗಳ ಮೂಲಕ ಬಾಲಕಿಯ ಹೃದಯ ಶಸ್ತ್ರ ಚಿಕಿತ್ಸೆ ನೆರವೇರಿಸಲಾಗಿದೆ.

ಗ್ಲೋಬಲ್ ಗ್ರಾಂಟ್ ಕಾರ್ಯಕ್ರಮದ ಅಡಿಯಲ್ಲಿ ಮಕ್ಕಳಿಗೆ ಉಚಿತ ಹೃದಯ ಶಸ್ತ್ರಚಿಕಿತ್ಸೆಗಳನ್ನು ಒದಗಿಸುವ ಉಪಕ್ರಮದ ಭಾಗವಾಗಿ, ಈಗಾಗಲೆ 14 ಮಕ್ಕಳಿಗೆ ಚಿಕಿತ್ಸೆ ನೀಡಲಾಗಿದ್ದು, ಈಗ 15 ನೇ ಶಸ್ತ್ರಚಿಕಿತ್ಸೆಯನ್ನು ಪೂರ್ಣಗೊಳಿಸಿದ್ದೇವೆ ಎಂದು ಚೈತನ್ಯ ಕುಲಕರ್ಣಿ ಪ್ರಗತಿವಾಹಿನಿಗೆ ತಿಳಿಸಿದರು.

“ರೋಟರಿ ಕ್ಲಬ್‌ನ ಗಿಫ್ಟ್ ಆಫ್ ಲೈಫ್ ಉಪಕ್ರಮಕ್ಕೆ ಧನ್ಯವಾದಗಳು, ನಾವು ಶಸ್ತ್ರಚಿಕಿತ್ಸೆಯನ್ನು ಯಾವುದೇ ವೆಚ್ಚವಿಲ್ಲದೆ ಒದಗಿಸಲು ಸಾಧ್ಯವಾಯಿತು. ಇಂದು, ಚಿಕ್ಕ ಹುಡುಗಿ ಡಿಸ್ಚಾರ್ಜ್ ಆಗಿದ್ದಾಳೆ, ಆರೋಗ್ಯವಾಗಿದ್ದಾಳೆ ಮತ್ತು ಮನೆಗೆ ಹೋಗಲು ಸಿದ್ಧಳಾಗಿದ್ದಾಳೆ. ಅತ್ಯಂತ ಕೆಳಮಟ್ಟದ ಸಾಮಾಜಿಕ -ಆರ್ಥಿಕ ಹಿನ್ನೆಲೆಯ ಕುಟುಂಬದ ನಂಬಲಾಗದ ಉದಾರತೆ ಮತ್ತು ಧೈರ್ಯದಿಂದ, ತಮ್ಮ ಸ್ವಂತ ಕಷ್ಟಗಳ ಹೊರತಾಗಿಯೂ, ಇತರರಿಗೆ ಜೀವನದ ಉಡುಗೊರೆಯನ್ನು ನೀಡಿದ್ದಾರೆ. ಅಂತಹ ಕುಟುಂಬಕ್ಕೆ ನಮ್ಮದೊಂದು ಚಿಕ್ಕ ನೆರವು ಎಂದು ಅವರು ಹೇಳುತ್ತಾರೆ.

ಇಂದು ಮಧ್ಯಾಹ್ನ 2.30ಕ್ಕೆ ಸವದತ್ತಿ ತಾಲೂಕಿನ ಆ ಮಗುವಿಗೆ ಶುಭ ಹಾರೈಸಿ ಮನೆಗೆ ಬೀಳ್ಕೊಡಲಾಗುತ್ತದೆ. ಮಗುವಿನ ತಾಯಿ, ಅಜ್ಜ, ಅಜ್ಜಿ ಸಹ ಕಾರ್ಯಕ್ರಮಕ್ಕೆ ಸಾಕ್ಷಿಯಾಗಲಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button