ಗೊಂದಲಕ್ಕೆ ಅವಕಾಶ ಕೊಡಬಾರದೆನ್ನುವ ಕಾರಣಕ್ಕೆ ಯೋಜನೆಗಳ ಅನುಷ್ಠಾನದಲ್ಲಿ ಸ್ವಲ್ಪ ವಿಳಂಬ – ಲಕ್ಷ್ಮೀ ಹೆಬ್ಬಾಳಕರ್
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಗೃಹ ಲಕ್ಷ್ಮೀ ಯೋಜನೆ ಆರಂಭವಾದ ನಂತರ ಗೊಂದಲಕ್ಕೆ ಅವಕಾಶವಾಗಬಾರದೆನ್ನುವ ಕಾರಣಕ್ಕೆ ಎಲ್ಲವನ್ನೂ ಸರಿಪಡಿಸಲಾಗುತ್ತಿದೆ. ಹಾಗಾಗಿ ಅರ್ಜಿ ಸ್ವೀಕಾರ ಸ್ವಲ್ಪ ವಿಳಂಬವಾಗುತ್ತಿದೆ. ಯೋಜನೆ ಜಾರಿಯಲ್ಲಿ ಯಾವುದೇ ರೀತಿಯ ಸಮಸ್ಯೆ ಇಲ್ಲ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಹಿರಿಯ ನಾಗರಿಕರು ಹಾಗೂ ವಿಕಲಚೇತನರ ಸಬಲೀಕರಣ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ತಿಳಿಸಿದ್ದಾರೆ.
ಬೆಳಗಾವಿಯ ಬಸ್ತವಾಡ ಗ್ರಾಮದಲ್ಲಿ ಭಾನುವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಅವರು ಮಾತನಾಡಿದರು. “ಯೋಜನೆ ಫಲಾನುಭವಿಗಳಿಗೆ ಕ್ಷಿಪ್ರ ಪ್ರಯೋಜನ ದೊರಕಿಸುವ ನಿಟ್ಟಿನಲ್ಲಿ ಗೃಹ ಲಕ್ಷ್ಮೀ ಅಪ್ಲಿಕೇಷನ್ ಕೂಡ ಅತೀ ಶೀಘ್ರ ಲಾಂಚ್ ಮಾಡಲಾಗುವುದು” ಎಂದು ಅವರು ಹೇಳಿದರು.
ಗೃಹಲಕ್ಷ್ಮೀ ಅನುಷ್ಠಾನಕ್ಕೆ ತಾಂತ್ರಿಕ ತೊಂದರೆ ಆಗುತ್ತಿರುವ ವಿಚಾರದ ಕುರಿತು ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, “ಇದಕ್ಕಾಗಿಯೇ ಪ್ರತ್ಯೇಕವಾದ ಸಾಫ್ಟ್ ವೇರ್ ಮತ್ತು ಆ್ಯಪ್ ಸಿದ್ಧಪಡಿಸಲಾಗುತ್ತಿದೆ. ಫಲಾನುಭವಿಗಳಿಗೆ ನೆರವಾಗಲು ಪ್ರತಿ ಬೂತ್ ನಲ್ಲಿ ನಾಲ್ಕು ಜನ ನೇಮಕ ಮಾಡುತ್ತಿದ್ದೇವೆ. 1.13 ಕೋಟಿ ಕುಟುಂಬಗಳು ಇದರ ಉಪಯೋಗ ಪಡೆಯಲಿವೆ” ಎಂದು ಮಾಹಿತಿ ನೀಡಿದರು.
“ಹೊಸ ಸಾಫ್ಟ್ ವೇರ್ ಲಾಂಚ್ ಮಾಡಿದಾಗ ಗೊಂದಲ ಉಂಟಾಗಬಾರದು ಎಂಬ ಒಂದೇ ಕಾರಣಕ್ಕೆ ಸಾಫ್ಟ್ ವೇರ್ ಸಿದ್ಧಪಡಿಸುವ ಕಾರ್ಯವನ್ನು ಬಹಳಷ್ಟು ಸೂಕ್ಷ್ಮವಾಗಿ ನಿರ್ವಹಿಸಲಾಗುತ್ತಿದೆ. ಶೀಘ್ರವಾಗಿ ಇದನ್ನು ಲಾಂಚ್ ಮಾಡುವ ನಿಟ್ಟಿನಲ್ಲಿ ಆ ಕೆಲಸ ಜಾರಿಯಿದೆ” ಎಂದು ತಿಳಿಸಿದರು.
“ಗೃಹಜ್ಯೋತಿ ಯೋಜನೆಗೆ ಇಂದಿನಿಂದಲೇ ಅರ್ಜಿ ಆಹ್ವಾನಿಸಿದ್ದೇವೆ. ಈಗಾಗಲೇ ಜಾಹೀರಾತು ಹಾಗೂ ಪತ್ರಿಕಾಗೋಷ್ಠಿ ಮುಖಾಂತರ ಮಾಧ್ಯಮಗಳ ಮೂಲಕ ಜನರಿಗೆ ಈ ಬಗ್ಗೆ ಅರಿವು ಮೂಡಿಸಲಾಗುತ್ತಿದೆ” ಎಂದು ಲಕ್ಷ್ಮೀ ಹೆಬ್ಬಾಳಕರ ಹೇಳಿದರು.
“ಮಹಿಳೆಯರು ಬರೀ ಮನೆ ಕೆಲಸಕ್ಕೆ, ಮಕ್ಕಳ ಹೆರುವುದಕ್ಕೆ ಮಾತ್ರ ಸೀಮಿತವಾಗಬಾರದು. ಸಿದ್ದರಾಮಯ್ಯ ಸರ್ಕಾರ ಬಂದ ಮೇಲೆ ಮಹಿಳೆಯರು ನೆಮ್ಮದಿಯಿಂದ ಜೀವನ ಮಾಡಬೇಕೆಂಬುದು ಸರ್ಕಾರದ ಉದ್ದೇಶ. ಉಚಿತ ಬಸ್ ಸೌಲಭ್ಯ ಬಳಸಿ ಎಲ್ಲ ಮಹಿಳೆಯರು ದೇವಸ್ಥಾನಕ್ಕೆ ಹೋಗಿ ಪುನೀತರಾಗಲಿ. ಸರ್ಕಾರಕ್ಕೆ ಒಳ್ಳೆಯ ಹೆಸರು ಬರಲಿ ಎಂದು ನಾನೂ ಪ್ರಾರ್ಥಿಸುತ್ತೇನೆ” ಎಂದು ಅವರು ಹೇಳಿದರು.
“ಅಕ್ಕಿ ವಿಚಾರದಲ್ಲಿ ಕೇಂದ್ರ ಸರ್ಕಾರ ರಾಜಕಾರಣ ಮಾಡುತ್ತಿದೆ. ಇದು ಕೇವಲ ರಾಜಕಾರಣವಲ್ಲದೆ ಬೇರೇನೂ ಅಲ್ಲ. ಎಫ್‌ಸಿಐನವರು ಮೊದಲು ಅಕ್ಕಿ ಕೊಡುವುದಾಗಿ ಹೇಳಿ ಈಗ ವಾಪಸ್ ಪಡೆದಿದ್ದಾರೆ. ರಾಜ್ಯದ ಜನರು ವಿಚಾರ ಮಾಡಬೇಕಾಗಿಲ್ಲನಾವು ಏನು ಭರವಸೆ ಕೊಟ್ಟಿದ್ದೇವೋ ಅದನ್ನು ಈಡೇರಿಸುತ್ತೇವೆ. ಜಾರ್ಖಂಡ್, ತೆಲಂಗಾಣ, ಪಂಜಾಬ್ ರಾಜ್ಯ ಸರಕಾರಗಳ ಜೊತೆ ಚರ್ಚೆ ನಡೆದಿದೆ. ಹೆಚ್ಚಿನ ಮಾಹಿತಿಯನ್ನು ನಮ್ಮ ಆಹಾರ ಸಚಿವರು ನೀಡಲಿದ್ದಾರೆ.” ಎಂದರು.
“ಮಹದಾಯಿ ವಿಚಾರದಲ್ಲಿ ಗೋವಾಕ್ಕೆ ಮಹಾರಾಷ್ಟ್ರ ಬೆಂಬಲ ವಿಚಾರಕ್ಕೆ ಪ್ರತಿಕ್ರಿಯಿಸಿದ ಲಕ್ಷ್ಮೀ ಹೆಬ್ಬಾಳಕರ ಅದರ ಬಗ್ಗೆ ಗೊತ್ತಿಲ್ಲ ತಿಳಿದುಕೊಂಡು ಅನಂತರ ಪ್ರತಿಕ್ರಿಯಿಸುತ್ತೇನೆ” ಎಂದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ