Kannada NewsLatest

ಗೋಮಾಂಸ ಸಾಗಿಸುತ್ತಿದ್ದ ವ್ಯಕ್ತಿ ಹತ್ಯೆ

ಪ್ರಗತಿವಾಹಿನಿ ಸುದ್ದಿ, ಮುಂಬೈ: ಗೋಮಾಂಸ ಕಳ್ಳ ಸಾಗಣೆ ಮಾಡುತ್ತಿದ್ದ ವ್ಯಕ್ತಿಯನ್ನು ಗುಂಪೊಂದು ಹಲ್ಲೆ ನಡೆಸಿ ಹತ್ಯೆಗೈದಿದೆ.

ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಅಫಾನ್ ಅಬ್ದುಲ್ ಮಜೀದ್ ಅನ್ಸಾರಿ (32) ಹತ್ಯೆಗೀಡಾದವ. ಮುಂಬೈ ಮೂಲದ ಅಫಾನ್ ಮತ್ತು ಆತನ ಸಹಾಯಕ ನಾಸಿರ್ ಶೇಖ್ ಕಾರಿನಲ್ಲಿ ಅಹಮ್ಮದ್ ನಗರದಿಂದ ಮುಂಬೈಗೆ ಗೋಮಾಂಸ ಸಾಗಿಸುತ್ತಿದ್ದಾಗ ಗುಂಪೊಂದು ಅವರನ್ನು ತಡೆದಿದೆ. ಕಾರಿನಲ್ಲಿ ಗೋಮಾಂಸ ಪತ್ತೆಯಾದ ಹಿನ್ನೆಲೆಯಲ್ಲಿ ಆತನ ಮೇಲೆ ಕಬ್ಬಿಣದ ರಾಡ್ ಹಾಗೂ ಬಡಿಗೆಗಳಿಂದ ಹಲ್ಲೆ ನಡೆಸಿದ್ದು ಗಂಭೀರ ಗಾಯಗೊಂಡ ಅಫಾನ್ ಮೃತಪಟ್ಟಿದ್ದಾನೆ.

“ಸಿನ್ನಾರ್ ಬಳಿಯ ಟೋಲ್ ಪ್ಲಾಜಾದ ಉದ್ಯೋಗಿಯೊಬ್ಬ ಕಾರಿನೊಳಗೆ ಇಬ್ಬರು ಮಾಂಸ ಸಾಗಿಸುತ್ತಿರುವುದನ್ನು ಆರಂಭದಲ್ಲಿ ಗಮನಿಸಿದ್ದ. ಈತ ಅಲ್ಲಿನ ಗೋರಕ್ಷಕ ಗುಂಪಿನ ಸದಸ್ಯನಿಗೆ ಮಾಹಿತಿ ನೀಡಿದ್ದ. ಕೂಡಲೆ ಕಾರ್ಯಪ್ರವೃತ್ತರಾದ ಗೋರಕ್ಷಕ ಗುಂಪಿನ ಸದಸ್ಯ ಘೋಟಿಯಲ್ಲಿರುವ ತನ್ನ ಸಹಚರರಿಗೆ ಮಾಹಿತಿಯನ್ನು ರವಾನಿಸಿದ್ದಾನೆ. ಜಾಗೃತ ಗುಂಪಿನ ಇತರ ಮೂವರು ಸದಸ್ಯರು ಇಬ್ಬರು ವ್ಯಕ್ತಿಗಳನ್ನು ಕಾರು ಮತ್ತು ಬೈಕಿನಲ್ಲಿ ಹಿಂಬಾಲಿಸಿ ವಾಹನವನ್ನು ಅಡ್ಡಗಟ್ಟಿ ಹಲ್ಲೆ ನಡೆಸಿದರು” ಎಂದು ನಾಸಿಕ್ ಗ್ರಾಮಾಂತರ ಪೊಲೀಸ್ ಸೂಪರಿಂಟೆಂಡೆಂಟ್ ಶಾಜಿ ಉಮಾಪ್ ಮಾಹಿತಿ ನೀಡಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು 11 ಜನರನ್ನು ಬಂಧಿಸಿದ್ದಾರೆ.

Home add -Advt

Related Articles

Back to top button