
ಪ್ರಗತಿವಾಹಿನಿ ಸುದ್ದಿ, ಹಾಸನ: ಗುಂಪೊಂದರ ಹಲ್ಲೆಯಿಂದ ಯುವಕನನ್ನು ತಡೆದು ಜಗಳ ಬಿಡಿಸಲು ಹೋಗಿದ್ದ ಪೊಲೀಸ್ ಪೇದೆಯೊಬ್ಬರ ಮೇಲೆ ಮಾರಕಾಸ್ತ್ರಗಳಿಂದ ಮಾರಣಾಂತಿಕ ಹಲ್ಲೆ ನಡೆಸಲಾಗಿದೆ.
ಹೊಳೆನರಸಿಪುರದ ಮಳಲಿ ದೇವಸ್ಥಾನದಲ್ಲಿ ಈ ಘಟನೆ ನಡೆದಿದೆ. ಯಸಳೂರು ಪೊಲೀಸ್ ಠಾಣೆಯ ಪೇದೆ, ಕುಂದೂರು ಹೋಬಳಿ ಎಸ್. ಹೊನ್ನೇನಹಳ್ಳಿ ಗ್ರಾಮದ ಶರತ್ ಹಲ್ಲೆಗೊಳಗಾದವರು.
ಶರತ್ ಅವರು ಜೂ. 15 ರಂದು ಸಾಂದರ್ಭಿಕ ರಜೆ ಪಡೆದು ತಮ್ಮ ಗ್ರಾಮದ ದೀಪಕ್ ಎಂಬುವವರ ಮಗಳ ಹುಟ್ಟಹಬ್ಬದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಮಳಲಿ ದೇವಸ್ಥಾನಕ್ಕೆ ಆಗಮಿಸಿದ್ದರು. ದೇವಸ್ಥಾನದ ಬಳಿಯಿರುವ ಕನ್ವೆನ್ಷನ್ ಹಾಲ್ ಎದುರು ಚೇತನ್ ಎಂಬ ಯುವಕನ ಮೇಲೆ ಗ್ರಾಮದ ಯುವಕರ ಗುಂಪೊಂದು ಹಲ್ಲೆ ನಡೆಸುತ್ತಿತ್ತು.
ಈ ವೇಳೆ ಜಗಳ ಬಿಡಿಸಲು ಹೋಗಿದ್ದ ಶರತ್ ಅವರ ಮೇಲೆ ಯುವಕರ ಗುಂಪು ಮುಗಿಬಿದ್ದು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದೆ. ಹಲ್ಲೆಯಿಂದ ಶರತ್ ತೀವ್ರ ಗಾಯಗೊಂಡು ಸ್ಥಳದಲ್ಲೇ ಕುಸಿದು ಬೀಳುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಮಿಥುನ್, ಲೋಹಿತ್, ನಟರಾಜು ಹಾಗೂ ಇತರರ ಗುಂಪು ಹಲ್ಲೆ ನಡೆಸಿದ್ದು ಹೊಳೆನರಸಿಪುರ ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಇಬ್ಬರನ್ನುಬಂಧಿಸಿದ್ದಾರೆ. ತೀವ್ರ ಗಾಯಗೊಂಡಿರುವ ಶರತ್ ಅವರು ಹಾಸನ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ