ಪ್ರಗತಿವಾಹಿನಿ ಸುದ್ದಿ, ಮೂಡಲಗಿ : ಸ್ಥಳೀಯ ಪತ್ರಕರ್ತರೋರ್ವರ ಮೇಲೆ ಗುರುವಾರ ಪೊಲೀಸರು ಹಲ್ಲೆ ನಡೆಸಿರುವ ಆರೋಪ ಕೇಳಿ ಬಂದಿದೆ.
ಗುರುವಾರ ಬೆಳಗ್ಗೆ ಪತ್ರಿಕೆ ವಿತರಿಸುವಾಗ ಪಟ್ಟಣದ ಕಲ್ಮೇಶ್ವರ ವೃತ್ತದಲ್ಲಿ ಸ್ಥಳೀಯ ಸಿಪಿಐ ವೆಂಕಟೇಶ ಮುರನಾಳ ಅವರು ದಿನಪತ್ರಿಕೆಯ ವರದಿಗಾರ ಶಿವಬಸು ಮೋರೆ ಅವರನ್ನು ತಡೆದು ಪ್ರಶ್ನಿಸಿದ್ದಾರೆ. ದಿನಪತ್ರಿಕೆ ವಿತರಿಸಿ ಮನೆಗೆ ಹೋಗುತ್ತಿದ್ದೇನೆ ಎಂದು ಹೇಳಿದ್ದಾಗಿಯು ಆತನ ಮಾತನ್ನು ಆಲಿಸದೇ ಪತ್ರಕರ್ತನನ್ನು ಹಿಗ್ಗಾಮುಗ್ಗಾ ಥಳಿಸಿದ್ದಾರೆ ಎಂದು ಆರೋಪಿಸಿರುವ ಸ್ಥಳೀಯ ಪ್ರೆಸ್ ಕ್ಲಬ್ ಘಟನೆಯನ್ನು ಖಂಡಿಸಿದೆ.
ಪ್ರೆಸ್ ಕ್ಲಬ್ ಮಾಜಿ ಅಧ್ಯಕ್ಷ ವ್ಹಿ ಎಚ್ ಬಾಲರಡ್ಡಿ ನೇತೃತ್ವದಲ್ಲಿ ತಾಲೂಕು ದಂಡಾಧಿಕಾರಿಗೆ ಮನವಿ ಸಲ್ಲಿಸಿರುವ ಪತ್ರಕರ್ತರು, ಪತ್ರಕರ್ತನ ಮೇಲೆ ಹಲ್ಲೆ ನಡೆಸಿದ ಪೋಲಿಸ್ ಅಧಿಕಾರಿಯ ಮೇಲೆ ಕ್ರಮ ತೆಗೆದುಗೊಳ್ಳಬೇಕೆಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರನ್ನು ಆಗ್ರಹಿಸಿದ್ದಾರೆ.
ಈ ವೇಳೆ ಪತ್ರಕರ್ತ ಎಲ್ ಸಿ ಗಾಡವಿ ಮಾತನಾಡಿ, ಪತ್ರಕರ್ತರನ್ನು ಸಂವಿಧಾನದ ನಾಲ್ಕನೇ ಅಂಗ ಎಂದು ಪರಿಗಣಿಸಲಾಗಿದೆ. ಕೊರೋನಾ ಸಂದರ್ಭದಲ್ಲಿ ತಮ್ಮ ಜೀವದ ಹಂಗು ತೊರೆದು ಕೆಲಸ ಮಾಡುತ್ತಿರುವ ಪರ್ತಕರ್ತರ ಕಾರ್ಯವನ್ನು ಶ್ಲಾಘಿಸಿರುವ ಕೇಂದ್ರ ಹಾಗೂ ರಾಜ್ಯ ಸರ್ಕಾರ ಫ್ರಂಟ್ ಲೈನ್ ವಾರಿಯರ್ಸ್ ಎಂದು ಘೋಷಣೆ ಸಹ ಮಾಡಿದೆ. ಪತ್ರಕರ್ತರಿಗೆ ಯಾವುದೇ ರೀತಿಯ ತೊಂದರೆ ನೀಡಬಾರದು ಎಂಬ ಆದೇಶ ಹೊರಡಿಸಿದ್ದರೂ ಸ್ಥಳೀಯ ಸಿಪಿಐ ಮುರನಾಳ ಸರ್ಕಾರದ ಆದೇಶ ಧಿಕ್ಕರಿಸಿ ಸರ್ವಾಧಿಕಾರಿ ಧೋರಣೆ ತೋರುತ್ತಿರುವುದು ಪೊಲೀಸ್ ಇಲಾಖೆಗೆ ಕೆಟ್ಟ ಹೆಸರು ತರುವಂತಾಗಿದೆ ಎಂದರು.
ಪತ್ರಕರ್ತ ತನ್ನ ಗುರುತಿನ ಚೀಟಿ ತೋರಿಸಿದರೂ ಸಿಪಿಐ ಅವರು ನೀನು ಪತ್ರಕರ್ತನಾದರೆ ನನಗೆ ಏನು, ನನ್ನ ಮೇಲೆ ದೂರು ದಾಖಲು ಮಾಡು ಎಂದು ದರ್ಪದ ಮಾತನಾಡಿರುವುದು ಸರಿಯಲ್ಲ ಹಾಗೂ ಪೋಲಿಸ್ ಪೇದೆಯಾದ ದುಂಡಪ್ಪ ಕೋಣ್ಣೂರ ಇವರ ದೌರ್ಜನ್ಯ ಸಹ ಪಟ್ಟಣದಲ್ಲಿ ಹೆಚ್ಚಾಗಿದ್ದು ಇವರಿಬ್ಬರ ಈ ಉದ್ದಟತನವನ್ನು ಮೂಡಲಗಿಯ ಪತ್ರಕರ್ತರ ಬಳಗ ಖಂಡಿಸುತ್ತದೆ. ಪತ್ರಕರ್ತರಿಗೆ ಥಳಿಸಿ ಅವಮಾನಿಸಿರುವ ಅಧಿಕಾರಿ ವಿರುದ್ದ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದಲ್ಲಿ ರಾಜ್ಯ ಪತ್ರಕರ್ತರ ಸಂಘಕ್ಕೆ ದೂರು ನೀಡಿ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಪ್ರೆಸ್ ಕ್ಲಬ್ ಅಧ್ಯಕ್ಷ ಎಲ್ ವಾಯ್ ಅಡಿಹುಡಿ, ಪತ್ರಕರ್ತರಾದ ಅಲ್ತಾಫ್ ಹವಾಲ್ದಾರ, ಎಸ್ ಎಮ್ ಚಂದ್ರಶೇಖರ, ಭೀಮಶಿ ತಳವಾರ, ಸುಭಾಷ ಗೋಡ್ಯಾಗೋಳ, ಭಗವಂತ ಉಪ್ಪಾರ, ಮಲ್ಲು ಬೋಳನವರ, ರಾಜು ಮಗದುಮ್ಮ, ಚಂದ್ರಶೇಖರ ಪತ್ತಾರ, ಹಣಮಂತ ಕಂಕಣವಾಡಿ, ಸುರೇಶ ಪಾಟೀಲ, ಅಶೋಕ ಸಿದ್ದಲಿಂಗಪ್ಪಗೋಳ, ಸುರೇಶ ಎಮ್ಮಿ ಮೊದಲಾದವರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ