ಪ್ರಗತಿವಾಹಿನಿ ಸುದ್ದಿ, ಬೈಲಹೊಂಗಲ: ಭಾರತೀಯ ಸೇನೆಯಲ್ಲಿ 28 ವರ್ಷಗಳ ಸುದೀರ್ಘ ಸೇವೆಯನ್ನು ಸಲ್ಲಿಸಿ ನಿವೃತ್ತರಾಗಿ ತಮ್ಮ ಊರಿಗೆ ಆಗಮಿಸಿದ ತಾಲೂಕಿನ ಸುತಗಟ್ಟಿ ಗ್ರಾಮದ ಯೋಧ ಈರಪ್ಪ ಬಾಳಿಗಟ್ಟಿ ಅವರಿಗೆ ಗ್ರಾಮದಲ್ಲಿ ಅದ್ದೂರಿ ಸ್ವಾಗತ ಕೋರಲಾಯಿತು.
ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘ ಬೆಳಗಾವಿ ಜಿಲ್ಲಾ ಘಟಕ ಹಾಗೂ ಊರಿನ ಎಲ್ಲ ಮಾಜಿ ಸೈನಿಕರು ಹಮ್ಮಿಕೊಂಡಿದ್ದರು ಊರಿನ ದ್ವಾರದಿಂದ ಶ್ರೀ ಜೋಡು ಬಸವಣ್ಣನ ಗುಡಿಯವರಿಗೆ ತೆರೆದ ವಾಹನದಲ್ಲಿ ಮೆರವಣಿಗೆ ಮೂಲಕ ಬಸವಂತಪ್ಪ ಕರಾಂವಿ ಇವರ ನೇತೃತ್ವದಲ್ಲಿ ಈರಪ್ಪ ಬಾಳಿಗಟ್ಟಿ ಅವರನ್ನು ಕರೆತರಲಾಯಿತು.
ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘ ಬೆಳಗಾವಿ ಜಿಲ್ಲಾ ಘಟಕದ ಕಾರ್ಯದರ್ಶಿ ಜಗದೀಶ ಪೂಜೇರಿ ಮಾತನಾಡಿ, “ಒಬ್ಬ ಮಾಜಿ ಸೈನಿಕ 28 ವರ್ಷಗಳ ಕಾಲ ಯಶಸ್ವಿಯಾಗಿ ಸೇವೆ ಸಲ್ಲಿಸಿ ಹತ್ತಾರು ಕಷ್ಟಗಳನ್ನ ಎದುರಿಸಿ ಯಶಸ್ವಿ 28 ವರ್ಷಗಳ ಮುಗಿಸಿ ಇಂದು ಸ್ವಗ್ರಾಮಕ್ಕೆ ಆಗಮಿಸುತ್ತಿರುವ ಯೋಧನಿಗೆ ಈ ಸಂಭ್ರಮದ ಆಚರಣೆಗಿಂತಲೂ ನಿವೃತ್ತಿ ಜೀವನದ ಪ್ರತಿ ಹೆಜ್ಜೆಗೂ ನಾವು ಜೊತೆಗಿದ್ದೇವೆ” ಎಂದರು.
“ಊರಿನ ಎಲ್ಲ ಮಾಜಿ ಸೈನಿಕರು ಸಂಘಟನೆಯೊಂದಿಗೆ ಕೈಜೋಡಿಸಿ ಕೆಲಸ ಮಾಡಿದ್ದೆ ಆದರೆ ಎಂತಹ ಪರಿಸ್ಥಿತಿಗಳನ್ನು ಯಾವ ಸಮಸ್ಯೆಗಳನ್ನು ಎದುರಿಸಲು ನಾವು ಸನ್ನದ್ಧರು,” ಎಂದು ಅವರು ಹೇಳಿದರು.
ಸಂಘಟನೆಯ ಗೌರವಾಧ್ಯಕ್ಷ ನಾಗಪ್ಪ ಕಳಸನ್ನವರ್ ಮಾತನಾಡಿದರು. ಪ್ರಧಾನ ಉಪಾಧ್ಯಕ್ಷ ವಿರೂಪಾಕ್ಷ ತಿರಗಂಜಿ ಖಜಾಂಚಿ ಶಿವಬಸಪ್ಪ ಕಾಡನ್ನವರ್, ಸಂಘದ ಪ್ರಧಾನ ಸಲಹೆಗಾರ ಚಾಂದಸಾಬ್ ವಾಲಿಕಾರ್ ಮತ್ತಿತರ ಪದಾಧಿಕಾರಿಗಳು ಭಾಗವಹಿಸಿದ್ದರು. ಊರಿನ ಹಿರಿಯ ಬಸ್ವಂತ್ ದೊಡ್ಡಪ್ಪನವರ್ ಅಧ್ಯಕ್ಷತೆ ಹಾಗೂ ಶಿಕ್ಷಕ ರಮೇಶ್ ಹೆಗಡೆ ನಿರೂಪಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ