ಒಂದು ಶಾಲೆ -ಒಂದು ಕ್ರೀಡೆ; ಭಾರತ ಸರ್ಕಾರದ ಹೊಸ ಕ್ರೀಡಾ ನೀತಿ ; ಕರ್ನಾಟಕದಲ್ಲಿ ಪ್ರಾಶಸ್ತ್ಯದ ಕ್ರೀಡೆಗಳು ಯಾವುವು ಗೊತ್ತೇ?
ಕರ್ನಾಟಕದಲ್ಲಿ ಪ್ರಾಶಸ್ತ್ಯದ ಕ್ರೀಡೆಗಳಾಗಿ ಈಜು (ಸ್ವಿಮ್ಮಿಂಗ್), ಅಥ್ಲೆಟಿಕ್ಸ್ ಮತ್ತು ಶೂಟಿಂಗ್ ಚಟುವಟಿಕೆಗಳನ್ನು ಉತ್ತೇಜಿಸಲು ಯೋಜಿಸಲಾಗಿದೆ
ಪ್ರಗತಿವಾಹಿನಿ ಸುದ್ದಿ, ನವದೆಹಲಿ -:
ಭಾರತ ಸರ್ಕಾರದ ಒಂದು ಶಾಲೆ-ಒಂದು ಕ್ರೀಡೆ ಕುರಿತಂತೆ ಮಂಗಳವಾರ ಕೇಳಲಾದ ಚುಕ್ಕೆ ಪ್ರಶ್ನೆಗೆ ಕೇಂದ್ರ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವ ಅನುರಾಗ ಸಿಂಗ್ ಠಾಕೂರ ಅವರು ಉತ್ತರ ನೀಡಿದ್ದಾರೆ.
ಒಂದು ಶಾಲೆ-ಒಂದು ಕ್ರೀಡಾ ನೀತಿಯು ಭಾರತ ಸರ್ಕಾರದ ಕ್ರೀಡಾ ಸಚಿವಾಲಯದ ಉಪಕ್ರಮವಾಗಿದ್ದು, ದೇಶಾದ್ಯಂತ ಇರುವ ಸೈನಿಕ ಶಾಲೆಗಳನ್ನು ಗುರುತಿಸಿ ಒಂದು ರಾಜ್ಯ ಒಂದು ಪರಿಕಲ್ಪನೆ ಅನ್ವಯ ಹಾಗೂ ೨೦೨೪ ರ ಓಲಂಪಿಕ್ಸ್ ಮತ್ತು ನಂತರದ ಕ್ರೀಡೆಗಳನ್ನು ಗಮನದಲ್ಲಿರಿಸಿ ವಿದ್ಯಾರ್ಥಿಗಳನ್ನು ಕ್ರೀಡಾ ಪ್ರವೀಣರನ್ನಾಗಿ ಮಾಡುವ ಗುರಿ ಹೊಂದಲಾಗಿದೆ.
ಓಲಂಪಿಕ್ಸ್‌ನಲ್ಲಿ ಗೆಲ್ಲುವ ವಿಶೇಷ ಅರ್ಹತೆ ಹೊಂದಿದ ವಿಭಾಗಗಳನ್ನು ಹಾಗೂ ಆದ್ಯತಾ ಕ್ರೀಡೆಗಳನ್ನು ಗುರುತಿಸಿ ವಿಶೇಷ ತರಬೇತಿ, ಕ್ರೀಡಾ ಮತ್ತು ವಿಜ್ಞಾನ ಉಪಕರಣಗಳು, ಅವಶ್ಯಕ ಸಿಬ್ಬಂದಿ ಬೆಂಬಲ ನೀಡಲು ಅಗತ್ಯ ತಾಂತ್ರಿಕ ನೆರವು ಒದಗಿಸಲಾಗುತ್ತಿದೆ. ಮಾನವ ಸಂಪನ್ಮೂಲದಲ್ಲಿ ಉತ್ತಮ ಗುಣಮಟ್ಟ ಮತ್ತು ಮಾನವ ಶಕ್ತಿ ಬಳಕೆಯನ್ನು ಉತ್ತಮಗೊಳಿಸಲು ವಿಶೇಷ ಮಾನದಂಡಗಳನ್ನು ರೂಪಿಸಿ ವಿದ್ಯಾರ್ಥಿಗಳು ಮತ್ತು ತರಬೇತುದಾರರು ಆಸಕ್ತಿಯುಳ್ಳ ಕ್ರೀಡೆಯಲ್ಲಿ ಕೇಂದ್ರೀಕರಿಸಲು ಹಾಗೂ ಆಸಕ್ತಿ ಬೆಳೆಸಿಕೊಳ್ಳಲು ಈ ಯೋಜನೆ ತುಂಬಾ ಅನುಕೂಲಕರವಾಗಿದೆ. ಕ್ರಿಕೆಟ್ ಹೊರತುಪಡಿಸಿ ದೇಶದ ವಿವಿಧ ರಾಜ್ಯಗಳಲ್ಲಿ ಆಯಾ ಪ್ರದೇಶಕ್ಕೆ ಅನುಗುಣವಾಗಿ ವಿವಿಧ ಕ್ರೀಡೆಗಳನ್ನು ಗುರುತಿಸಲಾಗಿದ್ದು, ಕರ್ನಾಟಕದಲ್ಲಿ ಪ್ರಾಶಸ್ತ್ಯದ ಕ್ರೀಡೆಗಳಾಗಿ ಈಜು (ಸ್ವಿಮ್ಮಿಂಗ್), ಅಥ್ಲೆಟಿಕ್ಸ್ ಮತ್ತು ಶೂಟಿಂಗ್ ಚಟುವಟಿಕೆಗಳನ್ನು ಉತ್ತೇಜಿಸಲು ಯೋಜಿಸಲಾಗಿದೆ ಎಂದು ತಿಳಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ