ಪ್ರಗತಿವಾಹಿನಿ ವಿಶೇಷ: ಮನುಷ್ಯನೊಂದೇ ಅಲ್ಲ, ಪ್ರಾಣಿಗಳನ್ನು ಒಳಗೊಂಡಂತೆ ನೀರು ಅತ್ಯವಶ್ಯಕವಾಗಿ ಬೇಕಾದದ್ದು. ಜಗದ ಜೀವರಾಶಿಗಳಿಗೆಲ್ಲ ಅತ್ಯಮೂಲ್ಯವಾದದು. ನಾಗರಿಕತೆಗಳು ಬೆಳೆದು ಬರಲು ಸಹಾಯಕವಾಗಿದೆ. ಜಗತ್ತಿನ ಎಲ್ಲಾ ನಾಗರಿಕತೆಗಳಿಗೂ ಮೂಲಾಧಾರವೇ ಪಂಚಭೂತಗಳಲ್ಲಿ ಒಂದಾದ ನೀರು. ಭಾರತೀಯ ಸಂಸ್ಕೃತಿಯಲ್ಲಿ ನೀರನ್ನು ‘ತಾಯಿ’ ಎಂದು ಪರಿಗಣಿಸಿ ಪೂಜಿಸಲಾಗುತ್ತದೆ. ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸುವಾಗ ಮದುವೆ, ಮುಂಜಿವೆ, ಹಬ್ಬ ಹರಿದಿನಗಳು,ಜಾತ್ರೆ, ಉತ್ಸವಗಳಲ್ಲಿ’ಗಂಗೆ’ ಎಂದು ನೀರನ್ನು ಪೂಜೆ ಮಾಡಲಾಗುತ್ತದೆ. ಇಂದಿಗೂ ಪಾದರಕ್ಷೆಗಳನ್ನು ನೀರಿಗೆ ತಾಕಿಸಲು, ನೀರಿನ ಸಂಗ್ರಹದ ಜಾಗಗಳಲ್ಲಿ ಪ್ರವೇಶಿಸಲು ಇಚ್ಚಿಸದ ಸಂಪ್ರದಾಯಸ್ಥರಿದ್ದಾರೆ. ಮನೆಗೆ ಬಂದ ಅತಿಥಿ ಸತ್ಕಾರದ ಮೊದಲ ಭಾಗವೇ ಕುಡಿಯಲು ನೀರಿಡುವುದು. ಭಾರತೀಯರು ಇದಕ್ಕೆ ನೀಡಿದ ಮಹತ್ವ ಅವಿಸ್ಮರಣೀಯವಾದದ್ದು.
ಜಗತ್ತಿನ ಮೊದಲ ನಾಗರಿಕತೆ ಎಂದು ಪರಿಗಣಿಸಲ್ಪಟ್ಟ ಈಜಿಪ್ಟ್ ನಾಗರಿಕತೆ ನೈಲ್ ನದಿಯ ತಟದಲ್ಲಿ. ಸಿಂಧೂ ನಾಗರಿಕತೆ ಸಿಂಧೂ ಸರಸ್ವತಿ ನದಿಗಳ ತಟದಲ್ಲಿ, ಮೆಸೊಪಟೋಮಿಯಾ ನಾಗರಿಕತೆ ಟೈಗ್ರಿಸ್ ಮತ್ತು ಯುಪ್ರಟೀಸ್ ನದಿ ತಟದಲ್ಲಿ, ಚೀನಾ ನಾಗರಿಕತೆ ಹೊಯಾಂಗ್ ಹೋ, ಯಾಂಗ್ ಸಿಕಿ ಯಾಂಗ್ ಎಂಬ ನದಿಗಳ ತಟದಲ್ಲಿ ಬೆಳೆದು ಬಂದಿವೆ. ಇಂಕಾ ನಾಗರೀಕತೆ ಟಿಟಿಕಾಕಾ ಸರೋವರದ ದಡದಲ್ಲಿ ಹೀಗೆ ಕಾಣಬರುವ ನಾಗರಿಕತೆಗಳಿಗೆ ಆಶ್ರಯ ಒದಗಿಸಿದ್ದೆ ನದಿಗಳು.
ನೀರು ಮುಖ್ಯವಾಗಿ ಕುಡಿಯಲು, ದೈನಂದಿನ ಜೀವನಕ್ಕೆ,ಅದರಲ್ಲೂ ಅತ್ಯವಶ್ಯಕವಾಗಿ ಬೇಕಾದದ್ದು ಕೃಷಿಗೆ. ಮನುಷ್ಯ ತನ್ನ ಆಹಾರದ ಅವಶ್ಯಕತೆಯನ್ನು ಪೂರೈಸಿಕೊಳ್ಳಲು ನದಿಗಳನ್ನು ಅವಲಂಬಿಸಿದನು. ಹಾಗಾಗಿಯೇ ನದಿ ಪಾತ್ರಗಳೇ ಅವನ ಮೂಲ ನೆಲೆಯಾಯಿತು. ಅಂದಿನಿಂದಲೇ ನಾಗರೀಕತೆಯ ಸ್ವರೂಪ ಪಡೆದ ಸಮೂಹ ಜೀವನ ಇಲ್ಲಿಯ ತನಕ ನಡೆದುಕೊಂಡು ಬಂದಿದೆ.
ಗುಂಪು ಗುಂಪಾಗಿ ವಾಸಿಸುವ ಪಕ್ಷಿ, ಪ್ರಾಣಿಗಳಲ್ಲಿಯೂ ಕೂಡ ಈ ತರಹದ ನಡೆವಳಿಕೆ ಕಂಡು ಬರುತ್ತದೆ. ನದಿಗಳು, ಕೊಳ ಕೆರೆಗಳ ಸಮೀಪ ಇರುವಂತಹ ಪ್ರದೇಶಗಳನ್ನೇ ಅವು ತಮ್ಮ ವಾಸಸ್ಥಾನಗಳನ್ನಾಗಿ ಮಾಡಿಕೊಳ್ಳುತ್ತವೆ. ಅದಕ್ಕೆ ಉದಾಹರಣೆ ಎಂದರೆ ಪಶ್ಚಿಮ ಬಂಗಾಳದ ಸುಂದರ್ ಬನ್, ಕಾಜಿರಂಗ, ಗಿರ್, ಜಿಮ್ ಕಾರ್ಬೆಟ್, ನೀಲಗಿರಿ, ವಂಡಲೂರು ಹಾಗೂ ನೂರಾರು ಕಾಡುಗಳಲ್ಲಿ ಪ್ರಾಣಿಗಳು ಅಧಿಕವಾಗಿವೆ. ಅದರಂತೆಯೇ ಕರ್ನಾಟಕದ ಬಂಡೀಪುರ, ನಾಗರಹೊಳೆ, ದಾಂಡೇಲಿ, ಅಣಶಿ, ಕುದುರೆಮುಖ ಅರಣ್ಯ ಪ್ರದೇಶಗಳಲ್ಲಿಯೂ ವಾಸಿಸುತ್ತವೆ.
ಭೂಮಿಯ ಮೇಲೆ ಸಿಹಿ ನೀರಿನ ಪ್ರಮಾಣ ಕಡಿಮೆಯಿದೆ. ಒಟ್ಟು ಭೂಮಿಯ ಮೇಲೆ ನೀರು 70% ರಷ್ಟಿದ್ದರೂ, ಸಿಹಿ ನೀರು ಕೇವಲ 2 5% ರಷ್ಟು ಮಾತ್ರವೇ! ಹಾಗಾಗಿ ವ್ಯವಸ್ಥಿತವಾಗಿ ಬಳಸಬೇಕಾಗಿದೆ. ಕೆಲವು ನದಿಗಳು ಕಣ್ಮರೆಯಾಗಿವೆ ಎಂದು ಹೇಳುವುದುಂಟು. ಅದೆಷ್ಟು ಘೋರ ದುರಂತ ಎಂಬುದನ್ನು ಅರ್ಥೈಸಿಕೊಳ್ಳಬೇಕು. ಕೆಲವು ನದಿಗಳಂತೂ ಮಲೀನಗೊಂಡ ಬಗೆ ತಿಳಿದಾಗ ಮನುಷ್ಯನ ಅಜ್ಞಾನಕ್ಕೆ ಹಿಡಿದ ಕನ್ನಡಿಯಾಗಿದೆ. ಭಾರತದ ಪುಣ್ಯ ನದಿ ಗಂಗೆ ಮಲಿನಗೊಂಡು ಸ್ನಾನವಿರಲಿ, ಕುಡಿಯಲು ಯೋಗ್ಯವಿಲ್ಲದಂಥ ಸ್ಥಿತಿ ತಲುಪುತ್ತಿದೆಯೆಂದರೆ, ಇದಕ್ಕಿಂತ ದುರಂತ ಮತ್ತೊಂದಿರಲಿಕ್ಕಿಲ್ಲ. ಅದರಂತೆ ಹಲವು ನದಿಗಳಿಗೆ ಕೈಗಾರಿಕೆಗಳ ತ್ಯಾಜ್ಯ ಸೇರಿಸಿ ಮಲಿನಗೊಳಿಸಲಾಗುತ್ತಿದೆ.
ಬೆಂಗಳೂರಿನಲ್ಲಿ ಒಂದು ಕಾಲಕ್ಕೆ ಹರಿಯುತ್ತಿದ್ದ ಸ್ವಚ್ಛ ಸುಂದರ ನದಿ ವೃಷಭಾವತಿ, ಇಂದು ಬೃಹತ್ ಬೆಂಗಳೂರು ನಗರದ ಚರಂಡಿಯಾಗಿದೆ. ಅದರಲ್ಲಿ ಮನೆಯ ಹೊಲಸು ನೀರು ಸೇರಿದಂತೆ, ಕೈಗಾರಿಕೆಗಳ ರಾಸಾಯನಿಕ ಪದಾರ್ಥಗಳ ಕಾಲುವೆಯಾಗಿದೆ. ಅದೇ ಸರ್ಕಾರ ಪಠ್ಯ ಪುಸ್ತಕದಲ್ಲಿ ಪರಿಸರ ಮಾಲಿನ್ಯದ ಬಗ್ಗೆ ಬೋಧಿಸಲು ಮುಂದಾಗುತ್ತದೆ. ಕಾರಣ ಪರಿಣಾಮಗಳನ್ನು ವಿಶ್ಲೇಷಿಸುತ್ತದೆ. ಪರಿಹಾರ ಕ್ರಮಗಳೆಂಬುದು ಬೋಧನೆಗೆ,ಭಾಷಣ, ಉಪನ್ಯಾಸಗಳಿಗೆ, ಪ್ರಬಂಧ ಬರೆಹಗಳಿಗೆ ಸೀಮಿತವಾಗಿದೆ. ಇದಕ್ಕೆ ಹೇಳಬಹುದೇನೋ ! ” ಬಂದಿದ್ದಲ್ಲ ಬಾರಿಸಿದ್ದಲ್ಲ” !!!
ಕೃಷಿಗಾಗಿ ನದಿಗಳಿಗೆ ಆಯಾಕಟ್ಟಿನ ಜಾಗೆಗಳನ್ನು ಗುರುತಿಸಿ, ಬೃಹತ್ ಮತ್ತು ಮಧ್ಯಮ ಆಣೆಕಟ್ಟುಗಳನ್ನು ಕಟ್ಟುತ್ತಾರೆ. ವಿಶೇಷವಾಗಿ ಕಣಿವೆಗಳಿರುವಲ್ಲಿ, ಎರೆಡೂ ಬದಿ ನೈಸರ್ಗಿಕ ತಡೆಗೋಡೆಯಾಗುವ ಬೆಟ್ಟ ಗುಡ್ಡಗಳ ನಡುವೆ ಕಟ್ಟುವುದು ವಾಡಿಕೆ. ಆ ಮೂಲಕ ನೀರು ಸಂಗ್ರಹಿಸಿ, ಕಾಲ ಕಾಲಕ್ಕೆ ನೀರು ಹರಿಸುವ ಪರಿಪಾಠವಿದೆ. ವಿವಿಧೋದ್ದೇಶ ನದಿ ಯೋಜನೆಗಳು ಭಾರತದ ಪಂಚವಾರ್ಷಿಕ ಯೋಜನೆಗಳ ಮೂಲಕ ಮೈ ತಳೆದ ಕಥೆ ರೋಚಕವಾಗಿದೆ. ಅಷ್ಟೇ ಅಲ್ಲದೇ ಜಲ ವಿದ್ಯುತ್ ಉತ್ಪಾದನೆಯಂತೂ ಮೈ ನವಿರೇಳಿಸುವಂತಿದೆ. ಇದೀಗ ಅದಕ್ಕೆ ಒಂದು ಶತಮಾನ ದಾಟಿದೆ.
ನದಿಗಳು ಹಲವು ಸ್ವರೂಪಗಳಿಂದ ಕೂಡಿದ್ದು, ನಾನಾ ಬಗೆಗಳಲ್ಲಿ ಹರಿಯುವುದುಂಟು. ನೈರುತ್ಯ ಯು ಎಸ್ ಎ ಮತ್ತು ಮೆಕ್ಸಿಕೊ ದಲ್ಲಿ ಹರಿಯುವ ನದಿ ಕೊಲೆರಾಡೊ, ಕೆಂಪು ಕಲ್ಲುಗಳ ನಡುವೆ ಹರಿದು ಗಲ್ಫ್ ಆಫ್ ಕ್ಯಾಲಿಫೋರ್ನಿಯಾದಲ್ಲಿ ಕೊನೆಗೊಳ್ಳುತ್ತದೆ. ಅದು ಕೆಂಪು ನದಿ. ಭಾರತದಲ್ಲಿ ಕಾಳಿ ನದಿಯು ಕಪ್ಪು ಕಲ್ಲು ನೆಲದಲ್ಲಿ ಹರಿದು, ಕಪ್ಪಾಗಿ ಕಾಣಿಸುತ್ತದೆ. ಚೀನಾದಲ್ಲಿ ಹೊಯಾಂಗ್ ಹೊ ನದಿಯು ಹಳದಿ ಮಣ್ಣಿನಲ್ಲಿ ಹರಿದು, ಹಳದಿಯಾಗಿ ಕಾಣಿಸುತ್ತದೆ. ಸರಸ್ವತಿ ನದಿ, ಕರ್ಣಾಟಕದ ಶಾಲ್ಮಲೆ ಗುಪ್ತಗಾಮಿನಿಯಾಗಿವೆ. ಎಲ್ಲೋ ಜನಿಸಿ, ಎಲ್ಲೋ ಕಾಣಿಸಿಕೊಳ್ಳುತ್ತವೆ. ಇವು ಕೆಲವೇ ಉದಾಹರಣೆಗಳು. ನದಿಗಳ ವಿಶೇಷತೆಗಳನೇಕ.
ಇಡೀ ವಿಶ್ವದಲ್ಲೇ ಭಾರತ ಒಂದು ವಿಶಿಷ್ಟ ಭೂಮಿ. ಇಲ್ಲಿ ನದಿಗಳು ಹುಟ್ಟಿ ಹರಿದಷ್ಟು ಜಗತ್ತಿನ ಯಾವ ಭಾಗದಲ್ಲೂ ಹರಿದಿಲ್ಲ.ಬ್ರಹ್ಮಪುತ್ರ, ಗಂಗ, ಯಮುನೆ, ಸಿಂಧೂ, ಸರಸ್ವತಿ, ಸರಯೂ,ರವಿ, ಜೀಲಂ, ಕೋಸಿ,ಮಹಾನದಿ, ನರ್ಮದಾ, ಗೋದಾವರಿ,ಕಾವೇರಿ, ಕೃಷ್ಣ,ತಪತಿ, ತುಂಗಭದ್ರಾ, ಕಪಿಲ, ಘಟಪ್ರಭಾ, ಮಲಪ್ರಭಾ, ಭೀಮ, ನೇತ್ರಾವತಿ, ಶರಾವತಿ, ಹೇಮಾವತಿ, ಸೌಪರ್ಣಿಕಾ, ವೇದಾವತಿ, ಅಘನಾಶಿನಿ ಹೀಗೆ ಹತ್ತಿರತ್ತಿರ ಸಾವಿರ ನದಿಗಳ ಉಲ್ಲೇಖ ಮಾಡಬಹುದು.ಜಲಪಾತಗಳು,ಕೆರೆ, ಕೊಳಗಳು,ಸರೋವರಗಳು ಯಥೇಚ್ಛವಾಗಿವೆ.
ನಮ್ಮ ಜನಪದರು ಕೆರೆ,ನದಿ,ಹಳ್ಳ ಕೊಳ್ಳಗಳ ಮೇಲೆ ಸುಂದರ ಸುಲಲಿತ ಪದಗಳನ್ನು ಕಟ್ಟಿ ಹಾಡಿದ್ದಾರೆ. ಅವರ ಅವಿನಾಭಾವ ನುಡಿಪುಷ್ಪಗಳಂತೂ ಮನ ಮೋಹಕವಾಗಿವೆ. ಅವರ ಬದುಕಿನುದ್ದಕ್ಕೂ ನೀರಿಗೆ ನೀಡಿದಷ್ಟು ಪ್ರಾಧಾನ್ಯತೆ ಮತ್ತೊಂದಕ್ಕೆ ನೀಡಿದ್ದೇ ಇಲ್ಲ. ಕೆಲ ತಪಸ್ವಿಗಳಂತೂ ಆಹಾರವಿಲ್ಲದೇ ಜಲಪಾನದ ಮೂಲಕವೇ ಎಷ್ಟೋ ದಿನಗಳವರೆಗೆ ಬದುಕು ಸಾಗಿಸುತ್ತಿದ್ದರೆಂದು ಹಿರಿಯರ ಅಂಬೋಣ.
ಹೀಗಾಗಿ ನಾವು ನೀರನ್ನು ಸಮರ್ಪಕವಾಗಿ, ಅವಶ್ಯಕತೆ ಇರುವಷ್ಟೇ ಮಿತವಾಗಿ ಬಳಸೋಣ. ನಾವೆಲ್ಲರೂ ಸೇರಿ ಹನಿ ಉಳಿಸಿದಲ್ಲಿ ಮುಂಬರುವ ಜನಾಂಗಕ್ಕೆ ಕೊಡುಗೆಯಾಗುತ್ತದೆ. ಮನಸೋ ಇಚ್ಚೆ ವ್ಯಯಿಸುವುದು ಬೇಡ. ಮಳೆಗಾಲದಲ್ಲಿ ಇಂಗು ಗುಂಡಿಗಳನ್ನು ಮಾಡಿ,ಅಂತರ್ಜಲ ಹೆಚ್ಚಿಸಲು ಪ್ರಯತ್ನ ಮಾಡಬೇಕಾಗಿದೆ. ಅನಾವಶ್ಯಕವಾಗಿ ಹರಿದು ಹೋಗುವುದನ್ನು ತಡೆಯಬೇಕಾಗಿದೆ. ಇದು ನಮ್ಮ ಗುರುತರವಾದ ಜವಾಬ್ದಾರಿ.
ಲೇಖನ : ರವಿ ಕರಣಂ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ