ಸದೃಢ ದೇಹ, ಸದೃಢ ಮನಸ್ಸು ಎರಡೂ ಮುಖ್ಯ -ಲಕ್ಷ್ಮಿ ಹೆಬ್ಬಾಳಕರ್
ಮುಚ್ಚಂಡಿ ವಲಯ ಮಟ್ಟದ ಪ್ರೌಢ ಶಾಲೆಗಳ ಕ್ರೀಡಾಕೂಟ
ಮನುಷ್ಯನ ಸರ್ವಾಂಗೀಣ ಅಭಿವೃದ್ಧಿಗೆ ಸದೃಢ ದೇಹ ಮತ್ತು ಸದೃಢವಾದ ಮನಸ್ಸು ಎರಡೂ ಮುಖ್ಯ ಎಂದು ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಹೇಳಿದ್ದಾರೆ.
ಸುಳೇಬಾವಿ ಪ್ರೌಢಶಾಲೆಯಲ್ಲಿ ಮಂಗಳವಾರ ಮುಚ್ಚಂಡಿ ವಲಯ ಮಟ್ಟದ ಪ್ರೌಢ ಶಾಲೆಗಳ ಕ್ರೀಡಾಕೂಟ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಪಾಲಕರು ತಮ್ಮ ಮಕ್ಕಳನ್ನು ಅವರವರ ಆಸಕ್ತಿಗೆ ಅನುಗುಣವಾಗಿ ಉತ್ತೇಜಿಸಿ, ಪ್ರೋತ್ಸಾಹಿಸಬೇಕು. ಪ್ರತಿಯೊಬ್ಬ ವ್ಯಕ್ತಿಯ ಸದೃಢ ದೇಹ ಮತ್ತು ಸದೃಢ ಮನಸ್ಸಿನ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸುವ ಕ್ರೀಡೆಗಳನ್ನು ಜೀವನದ ಭಾಗವಾಗಿ ಅಳವಡಿಸಿ ಕೊಳ್ಳುವುದು ಉತ್ತಮ ಎಂದು ಅವರು ಹೇಳಿದರು.
ವಿದ್ಯಾರ್ಥಿಗಳು ಕೇವಲ ಪಠ್ಯದಲ್ಲಷ್ಟೇ ತೊಡಗಿಕೊಂಡರೆ ಸಾಲದು. ಪಠ್ಯೇತರ, ಕ್ರೀಡಾ ಚಟುವಟಿಕೆಗಳೂ ಅವರ ಸರ್ವತೋಮುಖ ಅಭಿವೃದ್ಧಿಗೆ ಅಗತ್ಯ. ಎರಡನ್ನೂ ಜೊತೆ ಜೊತೆಯಾಗಿಯೇ ತೆಗೆದುಕೊಂಡು ಹೋಗಬೇಕು. ಎರಡಕ್ಕೂ ಸಮಯ ಮೀಸಲಿಡಬೇಕು ಎಂದು ಹೆಬ್ಬಾಳಕರ್ ಸಲಹೆ ನೀಡಿದರು.
ಕ್ರೀಡಾಕೂಟದ ಈ ಸಂದರ್ಭದಲ್ಲಿ ಶಂಕರಗೌಡ ಪಾಟೀಲ, ನಾನಪ್ಪ ಪಾರ್ವತಿ, ಎಸ್ ಡಿ ಎಮ್ ಸಿ ಅಧ್ಯಕ್ಷ ಅಪ್ಪಾಜಿ ಪಾರ್ವತಿ, ಗ್ರಾಮ ಪಂಚಾಯತ್ ಅಧ್ಯಕ್ಷೆ ಸವಿತಾ ಬಡಿಗೇರ, ಮಹಾಲಕ್ಷ್ಮಿ ದೇವಸ್ಥಾನದ ಕಮೀಟಿಯ ದೇವಣ್ಣ ಬಂಗ್ಗೆಣ್ಣವರ, ದತ್ತಾ ಬಂಡಿಗೇನಿ, ಮಹೇಶ, ವಿಠ್ಠಲ, ಶಾಲಾ ವಿದ್ಯಾರ್ಥಿಗಳು, ಶಾಲೆಯ ಸಿಬ್ಬಂದಿ ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ