Kannada NewsKarnataka NewsLatest

52 ವರ್ಷದ ವ್ಯಕ್ತಿಯ ಹೃದಯ 17 ವರ್ಷದ ಯುವಕನ ದೇಹದಲ್ಲಿ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಕೆಎಲ್ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದಲ್ಲಿ 52 ವರ್ಷದ ವ್ಯಕ್ತಿಯ ಹೃದಯವನ್ನು 17 ವರ್ಷದ ಯುವಕನ ದೇಹದಲ್ಲಿ ಮರುಜೋಡಣೆ ಮಾಡಲಾಗಿದೆ.

ಹೃದಯ ಪಡೆದ ರೋಗಿಯ ಇತಿಹಾಸ : ಅತ್ಯಂತ ಆರ್ಥಿಕ ಹಾಗೂ ಸಾಮಾಜಿಕವಾಗಿ ಹಿಂದುಳಿದಿದ್ದ ಸುಮಾರು 17 ವರ್ಷದ ಯುವಕನೋರ್ವ ಡಯಲೇಟೆಡ್ ಕಾರ್ಡಿಯೋಮಯೊಪಥಿ ಎಂಬ ಹೃದಯ ಖಾಯಿಲೆಯಿಂದ ಬಳಲುತ್ತಿದ್ದ. ಇದರಿಂದ ಯುವಕನ ಹೃದಯವು ಅಶಕ್ತವಾಗಿ ರಕ್ತವನ್ನು ಪಂಪ್ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಉಸಿರಾಟದ ತೊಂದರೆಯುಂಟಾಗಿ ಆಮ್ಲಜನಕದ ಸಹಾಯ ಪಡೆಯುತ್ತಿದ್ದ. ಕೆಲವೇ ಅಡಿಗಳಷ್ಟು ನಡೆದರೂ ಕೂಡ ಕಾಲುಗಳಲ್ಲಿ ಭಾವು ಕಾಣಿಸಿಕೊಳ್ಳುತ್ತಿತ್ತು. ತೀವ್ರ ತೊಂದರೆ ಅನುಭವಿಸುತ್ತಿದ್ದ.

ಯುವಕ ತಪಾಸಣೆಗಾಗಿ ಕೆಎಲ್ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆಗೆ ಧಾವಿಸಿ ಬಂದು, 8ನೇ ಫೆಬ್ರುವರಿ 2021ರಂದು ದಾಖಲಾದ. ಆಸ್ಪತ್ರೆಯ ಚಿಕ್ಕಮಕ್ಕಳ ಹೃದಯ ತಜ್ಞ ಡಾ. ವಿರೇಶ ಮಾನ್ವಿ, ಮುಖ್ಯ ಶಸ್ತ್ರಚಿಕಿತ್ಸಕರಾದ ಡಾ. ರಿಚರ್ಡ ಸಾಲ್ಢಾನಾ ಹಾಗೂ ಅವರ ತಂಡವು ಸಮಗ್ರವಾಗಿ ತಪಾಸಿಸಿ ನೋಡಲಾಗಿ ಹೃದಯವು ನಿಷ್ಕ್ರೀಯಗೊಂಡಿದ್ದು, ಹೃದಯ ಕಸಿ (ಮರುಜೋಡನೆ) ಯೊಂದೆ ಪರಿಹಾರ ಎಂದು ತಿಳಿಸಿದರು. ರಾಜ್ಯ ಸರಕಾರದ ಅಂಗಾಂಗ ಕಸಿ ಪ್ರಾಧಿಕಾರದ ಜೀವಸಾರ್ಥಕತೆಯಲ್ಲಿ ರೋಗಿಯ ಹೆಸರನ್ನು ನೊಂದಾಯಿಸಿಕೊಂಡಿದ್ದರು.

ಹೃದಯ ದಾನಿಯ ಇತಿಹಾಸ : ಅದೇ ಸಂದರ್ಭದಲ್ಲಿ ಪಾಶ್ರ್ವವಾಯುವಿನಿಂದ ಬಳಲುತ್ತಿದ್ದ 52 ವ್ಯಕ್ತಿಯೋರ್ವರು ಹಿರಿಯ ತಜ್ಞವೈದ್ಯರಾದ ಡಾ. ವಿ ಕೋಠಿವಾಲೆ ಅವರ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿ ಮೆದುಳು ತನ್ನ ಕಾರ್ಯವನ್ನು ನಿಲ್ಲಿಸಿತು. ರೋಗಿಯ ಸಂಬಂಧಿಗಳಿಗೆ ಆಪ್ತಸಮಾಲೋಚನೆ ನಡೆಸಿ, ಹೃದಯ ದಾನ ಮಾಡಲು ಸಮ್ಮತಿಸಿದರು. ನರರೋಗ ತಜ್ಞವೈದ್ಯರಾದ ಡಾ. ರವಿಶಂಕರ ನಾಯಕ ಹಾಗೂ ತೀವ್ರ ನಿಗಾ ತಜ್ಞವೈದ್ಯರಾದ ಡಾ. ಅಂಬರೀಶ ನೇರ್ಲಿಕರ ಅವರು, ಹೃದಯವು ಸುಗಮವಾಗಿ ಕಾರ್ಯನಿರ್ವಹಿಸುತ್ತಿದ್ದು, ಮೆದಳು ಮೃತಗೊಂಡಿದ್ದನ್ನು ಧೃಡೀಕರಿಸಿದರು. ನಂತರ ಬೆಂಗಳೂರಿನ ಜೀವಸಾರ್ಥಕತೆಯು ಹೃದಯ ಕಸಿ ಮಾಡಲು ಸಮ್ಮತಿ ನೀಡಿದರು.

ಹೃದಯ ಕಸಿ: 26 ಫೆಬ್ರುವರಿ 2021ರಂದು ತಡರಾತ್ರಿ ದಾನಿಯ ಹೃದಯವನ್ನು ತೆಗೆದು 17 ವರ್ಷದ ಯುವಕನಿಗೆ ಕಸಿ ಮಾಡಲಾಯಿತು. ಅರ್ಥೊಟಾಪಿಕ್ ಹೃದಯ ಕಸಿ ಎಂಬ ತಂತ್ರಜ್ಞಾನವನ್ನು ಉಪಯೋಗಿಸಿ ಹೃದಯ ಜೋಡಿಸಲಾಗಿದೆ. ನಿಗದಿತ ಸ್ಥಳಕ್ಕೆ ಹೃದಯವನ್ನು ಜೋಡಿಸಿ ರಕ್ತನಾಳಗಳನ್ನು ಸಂಪರ್ಕಕ್ಕೆ ತರಲಾಯಿತು. ಮರುಜೋಡನೆಗೊಂಡ ಹೃದಯವು ತಕ್ಷಣವೇ ತನ್ನ ಕಾರ್ಯವನ್ನು ಪ್ರಾರಂಭಿಸಿತು. ಮರುಜೋಡನೆಗೊಂಡ ನಂತರ ತಜ್ಞಶಸ್ತ್ರಚಿಕಿತ್ಸಕರ ತಂಡ, ಅರವಳಿಕೆ ತಜ್ಞರು, ನೆಪ್ರೊಲಾಜಿಸ್ಟ ಅವರು ನಿರ್ವಹಿಸಿದರು. ಹೃದಯ ಸ್ವೀಕರಿಸಿದ ರೋಗಿಯ ದೇಹವು ದಾನಿಯ ಹೃದಯವನ್ನು ಸ್ವೀಕರಿಸಿದ್ದು, ಈಗ ಅವರು ಆರೋಗ್ಯವಾಗಿದ್ದಾರೆ.

ಹೃದಯ ಕಸಿ ತಂಡ: ಹೃದಯ ಕಸಿ ಶಸ್ತ್ರಚಿಕಿತ್ಸೆಯನ್ನು ರಾತ್ರಿ 11 ಗಂಟೆಯಿಂದ ಬೆಳಗ್ಗೆ 5 ಗಂಟೆಯವರೆಗೆ ನೆರವೇರಿಸಲಾಯಿತು. ಆಸ್ಪತ್ರೆಯ ಹೃದಯ ಶಸ್ತ್ರಚಿಕಿತ್ಸಾ ವಿಭಾಗದ ಡಾ. ರಿಚರ್ಡ ಸಾಲ್ಡಾನಾ, ಡಾ. ಮೋಹನ ಗಾನ, ಡಾ. ಪ್ರವೀಣ ತಂಬ್ರಳ್ಳಿಮಠ, ಡಾ. ಕಿರಣ ಕುರುಕುರೆ, ಡಾ. ರವಿ ಘಟ್ನಟ್ಟಿ, ಡಾ. ದರ್ಶನ ಡಿ ಎಸ್., ಡಾ. ಅಭಿಷೇಕ, ಅರವಳಿಕೆ ತಜ್ಞವೈದ್ಯರಾದ ಡಾ. ಆನಂದ ವಾಗರಾಳಿ, ಡಾ. ಶರಣಗೌಡಾ ಪಾಟೀಲ ಡಾ. ಅಭಿಜೀತ ಶಿತೋಳೆ, ಡಾ. ಜಬ್ಬಾರ ಮೊಮಿನ, ಡಾ. ಚೇತನಾ, ಡಾ. ಪೃತ್ವಿ, ಡಾ. ಶ್ವೇತಾ, ಪಫ್ರ್ಯೂಸನ್ ತಂಡ ಆನಂದ ಘೊರ್ಪಡೆ, ಅವಿನಾಶ, ಸುನಿಲ, ನಿಯಾಜ ಹಾಗೂ ಮರಿಯಾ ಶಸ್ತ್ರಚಿಕಿತ್ಸೆಯ ಸಹಾಯ ನೀಡಿದರು. 6 ಗಂಟೆಗಳ ಕಾಲ ನಿರಂತರವಾಗಿ ಶಸ್ತ್ರಚಿಕಿತ್ಸೆಯ ಮೂಲಕ ದಾನಿಯ ಹೃದಯವನ್ನು ತೆಗೆದು ಮತ್ತೊಬ್ಬ ರೋಗಿಗೆ ಮರುಜೋಡನೆಯನ್ನು ಯಶಸ್ವಿಯಾಗಿ ನೇರವೇರಿಸಿದರು

ಹೃದಯ ಕಸಿ ನೆರವೇರಿಸಿ ಇಂದು 21ನೇ ದಿನವಾಗಿದ್ದು, ರೋಗಿಯು ಗುಣಮುಖಗೊಂಡು ಆರೋಗ್ಯಯುತನಾಗಿದ್ದಾನೆ. ನಡೆದಾಡುತ್ತಿದ್ದುಹೃದಯಕಾರ್ಯವು ಸಹಜತೆಯಿಂದ ಕೂಡಿ ಕಾರ್ಯಚಟುವಟಿಕೆಗಳನ್ನು ನಡೆಸುತ್ತಿದೆ.

ಹೃದಯ ಪಡೆದ ಯುವಕ ಅದೃಷ್ಟವಂತ: ಶಸ್ತ್ರಚಿಕಿತ್ಸೆ ನೆರವೇರಿಸುವ ಒಂದು ಗಂಟೆ ಮುಂಚೆ ರೋಗಿಯು ತೀವ್ರ ಹೃದಯಾಘಾತಕ್ಕೆಳಗಾಗಿ ಜೀವನ್ಮರಣದ ನಡುವೆ ಹೋರಾಟ ನಡೆಸುತ್ತಿದ್ದ, ತಕ್ಷಣವೇ ಡಾ. ರವಿ ಘಟ್ನಟ್ಟಿ ಹಾಗೂ ಡಾ ಅಭಿಜಿತ ಶಿತೋಳೆ ಅವರು ತೀವ್ರ ನಿಗಾ ಘಟಕಕ್ಕೆ ಸ್ಥಳಾಂತರಿಸಿ, ಜೀವ ಉಳಿಸುವ ಸಾಧನಗಳನ್ನು ಅಳವಡಿಸಿ ಆತನ ಜೀವವನ್ನು ಉಳಿಸಿದರು.

ಮಾನವೀಯತೆಯಿಂದ ಹೃದಯವನ್ನು ನಿಸ್ವಾರ್ಥದಿಂದ ತ್ಯಾಗ ಮಾಡಿ ಇನ್ನೊಬ್ಬ ಯುವಕನ ಜೀವ ಉಳಿಸಿದ ಕುಟುಂಬದ ಕಾರ್ಯವನ್ನು ಕೆಎಲ್ ಸಂಸ್ಥೆಯ ಕಾರ್ಯಾಧ್ಯಕ್ಷರಾದ ಡಾ. ಪ್ರಭಾಕರ ಕೋರೆ ಹಾಗೂ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ ಡಾ. ಎಂ ವಿ ಜಾಲಿ ಅವರು ಶ್ಲಾಘಿಸಿದ್ದಾರೆ

ಮೂಡನಂಬಿಕೆಯಿಂದ ಹೊರಬನ್ನಿ : ನಂತರ ಡಾ. ಪ್ರಭಾಕರ ಕೋರೆ ಅವರು ಮಾತನಾಡಿ, ದಾನಿಗಳ ಕುಟುಂಬವು ಮಾದರಿಯಾಗಿದ್ದು, ಉತ್ತರ ಕರ್ನಾಟಕದಲ್ಲಿಯೇ ಹೃದಯ ದಾನ ಮಾಡಿ ಇನ್ನೊಬ್ಬರಿಗಾಗಿ ಮಿಡಿದಿದೆ. ಅಂಗಾಂಗಳನ್ನು ದಾನ ಮಾಡಲು ಜನರು ಮುಂದೆ ಬರಬೇಕು. ನಮ್ಮ ಆಸ್ಪತ್ರೆಯೊಂದರಲ್ಲಿಯೇ ಸುಮಾರು 20ಕ್ಕೂ ಅಧಿಕ ಜನರು ಹೃದಯಕ್ಕಾಗಿ ಕಾಯತ್ತಿದ್ದರು, ಆದರೆ ಹೃದಯ ಸಿಗದೇ ಅದರಲ್ಲಿ 13 ಜನರು ಸಾವನ್ನಪ್ಪಿದರು. ಆದ್ದರಿಂದ ಪುನರ್ಜನ್ಮ ಎನ್ನುವ ಮೂಡನಂಬಿಕೆಯಿಂದ ಹೊರಬಂದು ಅಂಗಾಂಗಳ ದಾನ ಮಾಡಬೇಕು. ಮಹಾನಗರಗಳಲ್ಲಿ ಅತ್ಯಧಿಕ ವೆಚ್ಚವಾಗುತ್ತದೆ. ಆದರೆ ಬೆಳಗಾವಿಯ ಕೆಎಲ್ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆಯಲ್ಲಿ ಅತೀ ಕಡಿಮೆ ದರದಲ್ಲಿ ಅಂಗಾಂಗಳ ಕಸಿ ನೆರವೇರಿಸಲಾಗುತ್ತಿದೆ. ಯಶಸ್ವೀ ಹೃದಯ ಕಸಿ ಮಾಡಿದ ತಜ್ಞವೈದ್ಯರ ತಂಡವನ್ನು ಪ್ರಶಂಸಿಸಿದ್ದಾರೆ. ಡಾ. ರಿಚರ್ಡ ಸಾಲ್ಡಾನಾ ಹಾಗೂ ಅವರ ತಂಡದ ಕಾರ್ಯ ಅತ್ಯಂತ ಶ್ರಮದಾಯಕ ಮತ್ತು ಮಾದರಿಯಾಗಿದೆ ಎಂದು ಹೇಳಿದರು.

  ನಂತರ ಮಾತನಾಡಿದ ಸಾಲ್ಡಾನಾ ಅವರು, ಕೆಎಲ್ ಸಂಸ್ಥೆಯ ಹೃದಯ ಕೇಂದ್ರದಲ್ಲಿರುವ ಮೂಲಭೂತ ಸೌಲಭ್ಯಗಳು ವಿಶ್ವಮಟ್ಟದ್ದಾಗಿವೆ. ದೇಶದಲ್ಲಿ ಸುಮಾರು 50 ಸಾವಿರ ಜನರು ಹೃದಯ ಕಸಿಗಾಗಿ ಕಾಯುತ್ತಿದ್ದಾರೆ. ಆದರೆ ಕಳೆದ ಒಂದು ದಶಕದಲ್ಲಿ ಕೇವಲ 350-400 ಜನರಿಗೆ ಮಾತ್ರ ಹೃದಯ ಮರುಜೋಡನೆ ಮಾಡಲಾಗಿದೆ. ಅಂಗಾಂಗ ದಾನ ಮಾಡಿದ ಕುಟುಂಬದ ಕಣ್ಣಂಚಿನಲ್ಲಿ ನೀರು ತುಂಬಿದ್ದರೆ, ದಾನ ಸ್ವೀಕರಿಸಿದವರಲ್ಲಿ ಆನಂದ ಭಾಷ್ಪ ಮೂಡಿರುತ್ತದೆ. ದಾನಿಗಳ ಕುಟುಂಬದ ಕಾರ್ಯ ಶ್ಲಾಘಿಸಿದ ವೈದ್ಯರು ಹಾಗೂ ಆಸ್ಪತ್ರೆಯ ಸಿಬ್ಬಂದಿಗಳು ಅವರಿಗೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ. ಹೃದಯ ಕಸಿಯು ಎರಡನೇಯದಾಗಿದ್ದು,   ಹಿಂದೆ 20 ಫೆಬ್ರುವರಿ 2018ರಂದು ಭಾಗದಲ್ಲಿಯೇ ಪ್ರಪ್ರಥಮವಾಗಿ ಹೃದಯ ಕಸಿ ನೆರವೇರಿಸಲಾಗಿತ್ತು. ಹೃದಯ ಪಡೆದ ಯುವಕನು ಕಳೆದ 3 ವರ್ಷಗಳಿಂದ ಗುಣಮುಖನಾಗಿದ್ದು, ಬೆಂಗಳೂರಿನ ಸ್ವಯಂ ಸೇವಾ ಸಂಸ್ಥೆಯೊಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದಾನೆ.

  ಹೃದಯ ಕಸಿ ಶಸ್ತ್ರಚಿಕಿತ್ಸೆಯನ್ನು ಆರೋಗ್ಯ ಕರ್ನಾಟಕಆಯುಷ್ಯಮಾನ ಭಾರತ ಯೋಜನೆಯಡಿ ಸಂಪೂರ್ಣ ಉಚಿತವಾಗಿ ನೆರವೇರಿಸಲಾಗಿದ್ದು, ಡಾ. ಎಂ ವಿ ಜಾಲಿ ಅವರು ರಾಜ್ಯ ಸರಕಾರ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button