ಜಯಶ್ರೀ ಜೆ. ಅಬ್ಬಿಗೇರಿ
ನಾನು ಈಗ ಹೇಳ ಹೊರಟಿರುವ ಕಥೆ ಬಹು ಹಿಂದಿನದಾದರೂ ಇಂದಿನ ವಾಸ್ತವಿಕ ಸಮಾಜಕ್ಕೆ ಪ್ರಸ್ತುತವೆನಿಸುತ್ತದೆ. ಆಧುನಿಕತೆಯ ಹೆಸರಿನಲ್ಲಿ ಗಡಿಬಿಡಿ ಜೀವನದಲ್ಲಿ ಏನನ್ನು ಕಳೆದುಕೊಳ್ಳುತ್ತಿದ್ದೇವೆ, ಯಾರನ್ನು ನಿರ್ಲಕ್ಷಿಸುತ್ತಿದ್ದೇವೆ ಎನ್ನುವುದರ ಮೇಲೆ ಬೆಳಕು ಚೆಲ್ಲುತ್ತದೆ. ತಿಳಿಯಲು ಕುತೂಹಲವೇ? ಹಾಗದಾರೆ ಮುಂದಕ್ಕೆ ಓದಿ.
ಒಮ್ಮೆ ಕೌಶಿಕನೆಂಬ ಬ್ರಾಹ್ಮಣನು ತಪಸ್ಸಿನಲ್ಲಿ ತಲ್ಲಿನನಾಗಿದ್ದ. ಅದೇ ಸಮಯದಲ್ಲಿ ಮರದಲ್ಲಿ ಕುಳಿತ ಕಾಗೆಯೊಂದು ಆತನ ತಲೆಯ ಮೇಲೆ ಮಲ, ಮೂತ್ರ ಮಾಡಿತು. ತನ್ನ ತಪಸ್ಸಿಗೆ ಭಂಗ ತಂದಿತೆಂದು ಕೌಶಿಕನು ಕೋಪೋದ್ರಿಕ್ತನಾಗಿ ಕಾಗೆಯೆಡೆಗೆ ದುರುಗುಟ್ಟಿದನು. ಆತನ ಕೋಪದ ಬೆಂಕಿ ಅದೆಷ್ಟು ಉಗ್ರವಾಗಿತ್ತೆಂದರೆ ಕೋಪದ ದಗೆಯಲ್ಲಿ ಕಾಗೆಯ ಗರಿಗಳು ಉರಿದು ಬೂದಿಯಾಗಿ ಆತನ ಮುಂದೆಯೇ ಬಿದ್ದವು. ಆದರೆ ಕೌಶಿಕ ಅದನ್ನು ಗಣನೆಗೆ ತೆಗೆದುಕೊಳ್ಳದೇ ತಪಸ್ಸನ್ನು ಮುಂದುವರೆಸಿದನು. ಎಂದಿನಂತೆ ಸಂಜೆ ಭಿಕ್ಷಾಟನೆಗೆ ಹೋದ. ಗೃಹಿಣಿಯ ಮನೆಯ ಮುಂದೆ ನಿಂತು ಭಿಕ್ಷಾಂದೇಹಿ ಎಂದು ಬೇಡಿದ. ಆಕೆ ಗಂಡನ ಸೇವೆಯಲ್ಲಿ ನಿರತಳಾಗಿದ್ದಳು. ಹೀಗಾಗಿ ಬ್ರಾಹ್ಮಣನಿಗೆ ಭಿಕ್ಷೆ ನೀಡಲು ತಡವಾಯಿತು. ಆಗ ಕೌಶಿಕ ಆಕೆಯನ್ನು ದುರುಗುಟ್ಟಿಸಿ ಶಾಪ ನೀಡಬೇಕೆಂದುಕೊಳ್ಳುತ್ತಿದ್ದನು. ಸೂಕ್ಷ್ಮ ಮತಿಯಾದ ಗೃಹಿಣಿ ಅಯ್ಯಾ! ಬ್ರಾಹ್ಮಣ, ನಿನ್ನ ರೋಷದ ಅಗ್ನಿಗೆ ಕಾಗೆ ಸುಟ್ಟು ಕರಕಲಾದದ್ದು ನಾನು ಬಲ್ಲೆ. ಆದರೆ ನನ್ನನ್ನು ಏಕೆ ಕೋಪದಿಂದ ನೋಡುತ್ತಿರುವೆ ಎಂದು ತಿಳಿಯಲಿಲ್ಲ. ನಾನೇನೂ ನಿನಗೆ ತೊಂದರೆ ಮಾಡಿಲ್ಲ ನನ್ನ ಕರ್ತವ್ಯವನ್ನು ನಿರ್ವಂಚನೆಯಿಂದ ಮಾಡಿದ್ದೇನೆ. ಇದು ನಿನಗೆ ಅರ್ಥವಾಗುತ್ತಿಲ್ಲ. ನಿನಗೆ ಧರ್ಮ ರಹಸ್ಯವು ತಿಳಿಯದು. ಬ್ರಾಹ್ಮಣನು ಜಿತೇಂದ್ರೀಯನಾಗಿರಬೇಕು. ಅಷ್ಟೇ ಅಲ್ಲ ಬ್ರಾಹ್ಮಣನಿಗೆ ಕೋಪ ಸಲ್ಲದು. ನಿಮಗೆ ಈ ವಿಷಯದಲ್ಲಿ ಹೆಚ್ಚು ಜ್ಞಾನವಿದ್ದಂತೆ ತೋರದು. ಇಲ್ಲಿಂದ ಮುಂದೆ ಸ್ವಲ್ಪ ದೂರದಲ್ಲಿ ಮಿಥಿಲೆ ಎಂಬ ಊರಿದೆ. ಅಲ್ಲಿ ಧರ್ಮವ್ಯಾಧನೆಂಬ ಆದರ್ಶ ಪುರುಷನಿದ್ದಾನೆ. ಆತ ಯಾವ ವೇದ ಪಾರಂಗತನಿಗೂ ಕಡಿಮೆ ಇಲ್ಲ. ಆತನ ಬಳಿ ಹೋಗು ನಿನಗೆ ಸೂಕ್ತ ಮಾರ್ಗದರ್ಶನ ನೀಡುತ್ತಾನೆ ಎಂದಳು.
ನೆತ್ತಿಗೇರಿದ್ದ ಸಿಟ್ಟನ್ನು ಹೇಗೋ ಕಡಿಮೆ ಮಾಡಿಕೊಂಡು ಮಿಥಿಲೆಯತ್ತ ಹೆಜ್ಜೆ ಹಾಕಿದ. ಧರ್ಮವ್ಯಾಧನನ್ನು ಹುಡುಕುತ್ತ ಆತನಿದ್ದಲ್ಲಿಗೆ ತಲುಪಿದಾಗ. ಕೌಶಿಕನಿಗೆ ಪರಮಾಶ್ಚರ್ಯವಾಯಿತು. ಆ ಗೃಹಿಣಿ ಹೇಳಿದ ವ್ಯಕ್ತಿ ಒಬ್ಬ ಬೇಡನಾಗಿದ್ದನು. ಮಾಂಸ ಮಾರುತ್ತಿದ್ದನು. ಮಾರಲು ಇಟ್ಟಿದ್ದ ಕುರಿಯ ತಲೆಗಳು, ಪೋಣಿಸಿಟ್ಟಿದ್ದ ಮೀನುಗಳು, ಕತ್ತರಿಸಿದ ಪ್ರಾಣಿಗಳ ದೇಹ ಖಂಡಗಳನ್ನು ಕಂಡು ಈ ಕಟುಕನಿಗೆ ಜೀತೇಂದ್ರೀಯದ ಕುರಿತು ಹೇಗೆ ಗೊತ್ತಿರಲು ಸಾಧ್ಯ ಎಂದು ಯೋಚಿಸುತ್ತ ನಿಂತ. ಕೌಶಿಕನನ್ನು ಗಮನಿಸಿದ ಧರ್ಮವ್ಯಾಧ ತಾನೇ ಮುಂದಾಗಿ, ಬನ್ನಿ ಸ್ವಾಮಿ ಬನ್ನಿ ನಾನು ತಮಗಾಗಿಯೇ ಕಾಯುತ್ತಿದ್ದೆ. ನಿಮ್ಮ ರೋಷದುರಿಗೆ ಆ ಬಡಪಕ್ಷಿ ಸುಟ್ಟು ಕರಕಲಾದುದನ್ನು ನಾನು ಬಲ್ಲೆ. ಆ ಪತಿವ್ರತಾ ಶಿರೋಮಣಿ ತಮ್ಮನ್ನು ಇಲ್ಲಿಗೆ ಕಳುಹಿಸರಬೇಕಲ್ಲವೇ? ಇದು ತಮ್ಮಂಥವರು ಓಡಾಡುವ ಜಾಗವಲ್ಲ. ಬನ್ನಿ ಮನೆಗೆ ಹೋಗೋಣ ಎಂದ. ಕೌಶಿಕನಿಗೆ ಇದೆಲ್ಲ ಅಚ್ಚರಿಯೆನಿಸಿತು. ಧರ್ಮವ್ಯಾಧನನ್ನು ಹಿಂಬಾಲಿಸಿದನು.
ಎಲೈ ವ್ಯಾಧನೇ, ಈ ರೀತಿ ಪ್ರಾಣಿ ಹಿಂಸೆ ಮಾಡಿ ಮಾರುವುದು ಪಾಪದ ಕೆಲಸವೆಂದು ನಿನಗೆ ತಿಳಿದಿಲ್ಲವೇ? ಇದು ಅನ್ಯಾಯವಲ್ಲವೇ? ಇಂಥ ಹೀನ ಕೃತ್ಯದಲ್ಲಿ ಏಕೆ ನಿರತನಾಗಿರುವೆ? ಎನ್ನುತ್ತ ಆಕ್ಷೇಪಣೆಯ ಧ್ವನಿಯಲ್ಲಿ ಮೂದಲಿಸಿದನು. ಅದಕ್ಕೆ ಬೇಡನು ಒಂದಿನಿತೂ ಬೇಸರಿಸಿಕೊಳ್ಳಲಿಲ್ಲ. ನಾನು ನನ್ನ ಸಂಸಾರದ ಪಾಲನೆಗಾಗಿ ಮಾಂಸವನ್ನು ಮಾರುತ್ತೇನೆ. ಇದು ನನ್ನ ವೃತ್ತಿಧರ್ಮ. ನನ್ನ ತಂದೆ, ತಾಯಿ, ಮಕ್ಕಳನ್ನು ಕಾಪಾಡಬೇಕಾದುದು ನನ್ನ ಕರ್ತವ್ಯ. ಅಲ್ಲದೇ ಈ ಉದ್ಯೋಗವು ನನ್ನ ಜಾತಿ ಧರ್ಮ. ಹೀಗಾಗಿ ಇದನ್ನು ಪಾಲಿಸುತ್ತಿದ್ದೇನೆ. ಅಷ್ಟೇ ಅಲ್ಲ ಸತ್ತ ಪ್ರಾಣಿಗಳನ್ನು ತಂದು ಮಾರುತ್ತೇನೆಯೇ ಹೊರತು ಪ್ರಾಣಿಗಳನ್ನು ಕೊಲ್ಲುವುದಿಲ್ಲವೆಂದ.
ನನ್ನ ದೃಷ್ಟಿಯಲ್ಲಿ ಪಾಪವೆಂದರೆ ಧರ್ಮ ಕರ್ಮಗಳಿಗೆ ಚ್ಯುತಿ ತರುವಿಕೆ, ಸ್ವ ಪ್ರಶಂಸೆ, ಅತ್ಯಾಚಾರ, ಪರರ ಸಂಪತ್ತನ್ನು ದೋಚುವುದು, ಪರ ಸ್ತ್ರೀ ವ್ಯಸನ ಎಂದ. ನಂತರ ತನ್ನ ತಂದೆ ತಾಯಿಗಳನ್ನು ತೋರಿಸುತ್ತ ಇವರೇ ನನ್ನ ದೇವರುಗಳು. ಇವರ ಸೇವೆಯೇ ನನ್ನ ಪರಮ ಸಂತೋಷ. ನೀನು ನಿನ್ನ ವೃದ್ಧ ತಂದೆ ತಾಯಿಗಳನ್ನು ಮನೆಯಲ್ಲಿ ಬಿಟ್ಟು ಬಂದಿದ್ದಿಯಾ ಮನೆಗೆ ಹಿಂದುರಿಗಿ ಅವರ ಸೇವೆಯಲ್ಲಿ ನಿರತನಾಗು. ಹೆತ್ತವರ ಸೇವೆಗಿಂತ ಮಿಗಿಲಾದ ತಪಸ್ಸು ಮತ್ತೊಂದಿಲ್ಲ. ಹೆತ್ತವರ ಸೇವೆಯೇ ನಿಜವಾದ ತಪಸ್ಸು ಎಂದನು. ಧರ್ಮವ್ಯಾಧನ ಉಪದೇಶವನ್ನು ಕೇಳಿದ ಕೌಶಿಕನಿಗೆ ತನ್ನ ತಪ್ಪಿನ ಅರಿವಾಯಿತು. ಇಷ್ಟೊಂದು ತಪಸ್ಸು ಮಾಡಿಯೂ ಕೋಪವನ್ನು ಜಯಿಸಲಾಗಲಿಲ್ಲ. ನಿಜವಾದ ತಪಸ್ಸನ್ನು ಅರ್ಥ ಮಾಡಿಕೊಳ್ಳಲು ಆಗಲಿಲ್ಲವಲ್ಲ ಎಂದು ಪಶ್ಚಾತ್ತಾಪ ಪಡುತ್ತ ಹೆತ್ತವರ ಸೇವೆಗೆ ತೊಡಗಲು ತನ್ನ ಊರಿನತ್ತ ಹೆಜ್ಜೆ ಹಾಕಿದ. ನಾವೂ ನಿಜವಾದ ತಪಸ್ಸಿನಲ್ಲಿ ನಮ್ಮನ್ನು ತೊಡಗಿಸಿಕೊಳ್ಳುವುದು ಒಳಿತಿಲ್ಲವೇ?
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ