ಮೊಟ್ಟ ಮೊದಲ ಬಾರಿ ಬೆಳಕು ಕಂಡ ಕುಗ್ರಾಮ: ಜನರ ಮುಖದಲ್ಲಿ ನಗು ತರಿಸಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್


ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ಜಿಲ್ಲೆ – ಮಹಾರಾಷ್ಟ್ರ ಗಡಿ ಪ್ರದೇಶದಲ್ಲಿರುವ ಕುಗ್ರಾಮ ದಾಮನೆ ಎಸ್ ಬೈಲೂರು ಗ್ರಾಮದ ದನಗರವಾಡಿ ವಸತಿ ಪ್ರದೇಶಕ್ಕೆ ಇದೇ ಮೊದಲ ಬಾರಿಗೆ ವಿದ್ಯುತ್ ಸೌಲಭ್ಯ ಕಲ್ಪಿಸಲಾಗಿದೆ.
ಕ್ಷೇತ್ರದ ಶಾಸಕರೂ ಆಗಿರುವ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರ ನಿರಂತರ ಪ್ರಯತ್ನದ ಫಲವಾಗಿ ಗ್ರಾಮಕ್ಕೆ ಸೌರ ಹಾಗೂ ಪವನ ವಿದ್ಯುತ್ ಸೌಲಭ್ಯ ಕಲ್ಪಿಸಲಾಗಿದೆ. ಗುರುವಾರ ಇಂದನ ಸಚಿವ ಕೆ.ಜೆ.ಜಾರ್ಜ್ ಅವರು ಗ್ರಾಮಕ್ಕೆ ತೆರಳಿ ವಿದ್ಯುತ್ ಸೌಲಭ್ಯಕ್ಕೆ ಚಾಲನೆ ನೀಡುವ ಮೂಲಕ ಗ್ರಾಮದ ಜನರ ಮೊಗದಲ್ಲಿ ಮಂದಹಾಸ ಮೂಡಿಸಿದರು.

ಸ್ವತಂತ್ರ ಸಿಕ್ಕಿ ಇಷ್ಟು ವರ್ಷಗಳಾದರೂ ಈ ಗ್ರಾಮಕ್ಕೆ ವಿದ್ಯುತ್ ಇಲ್ಲ ಎಂದು ಲಕ್ಷ್ಮೀ ಹೆಬ್ಬಾಳಕರ್ ಗಮನಕ್ಕೆ ತಂದರು. ತಕ್ಷಣ ನಮ್ಮ ಅಧಿಕಾರಿಗಳೊಂದಿಗೆ ಚರ್ಚಿಸಿ, ನಮಗೆ ಸಿಕ್ಕಿರುವ ಅವಕಾಶದಿಂದ ಗ್ರಾಮದ ಸೇವೆ ಮಾಡಬೇಕೆಂದು ನಿರ್ಧರಿಸಿ ಕ್ರಮ ತೆಗೆದುಕೊಂಡಿದ್ದೇವೆ. ದೊಡ್ಡ ದೊಡ್ಡ ಕೆಲಸವನ್ನು ಎಲ್ಲರೂ ಮಾಡಬಹುದು. ಆದರೆ ಇಲ್ಲಿನ ಜನ ಕಷ್ಟದಲ್ಲಿದ್ದಾರೆ. ಈ ಒಂದು ಸಣ್ಣ ಕೆಲಸದಿಂದ ಜನರ ಮುಖದಲ್ಲಿ ನಗು ನೋಡಬಹುದು ಎನ್ನುವ ಕಾರಣಕ್ಕಾಗಿ ಈ ಯೋಜನೆ ರೂಪಿಸಲಾಯಿತು ಎಂದು ಜಾರ್ಜ್ ಈ ಸಂದರ್ಭದಲ್ಲಿ ತಿಳಿಸಿದರು.

ಇದರ ಜೊತೆಗೆ, ಶಾಶ್ವತವಾಗಿ ಗ್ರಾಮಕ್ಕೆ ವಿದ್ಯುತ್ ಕಲ್ಪಿಸುವ ಕೆಲಸವನ್ನೂ ಆದಷ್ಟು ಶೀಘ್ರವಾಗಿ ಮಾಡಲಾಗುವುದು. ಅರಣ್ಯ ಇಲಾಖೆಯಿಂದ ಅನುಮತಿ ಪಡೆದು ಲೈನ್ ಹಾಕಿ ನಿರಂತರ ವಿದ್ಯುತ್ ನೀಡುವ ಕೆಲಸ ಮಾಡಲಾಗುವುದು ಎಂದೂ ಸಚಿವರು ಭರವಸೆ ನೀಡಿದರು.

ಈ ವೇಳೆ ಮಾತನಾಡಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್, ಚುನಾವಣೆಗೂ ಪೂರ್ವ ನಾನು ಗ್ರಾಮ ಜನರಿಗೆ ಭರವಸೆ ನೀಡಿದ್ದೆ. ಅದರಂತೆ ಎಷ್ಟೇ ಕಷ್ಟವಾದರೂ ಬಿಡದೆ ಗರಾಮಕ್ಕೆ ಬೆಳಕು ನೀಡುವ ಕೆಲಸ ಮಾಡಿದ್ದೇನೆ. ನಿಮ್ಮ ಮುಖದಲ್ಲಿ ನಗು ಕಂಡರೆ ನನಗೆ ಅದಕ್ಕಿಂತ ಖುಷಿಯ ವಿಚಾರ ಬೇರೆ ಇಲ್ಲ ಎಂದರು.

ಇಲ್ಲಿನ ಜನರು ನನ್ನನ್ನು ಅತ್ಯಂತ ಪ್ರೀತಿಯಿಂದ ಬೆಳೆಸಿದ್ದಾರೆ. ಹಾಗಾಗಿ ಜನರ ಪ್ರತಿಯೊಂದು ಕೆಲಸವನ್ನೂ ಕಾಳಜಿಯಿಂದ ಮಾಡುತ್ತಿದ್ದೇನೆ. ಇಲ್ಲಿನ ಜನರ ಸೇವೆ ಮಾಡುವುದನ್ನು ನೋಡಿ ಪಕ್ಕದ ಮಹಾರಾಷ್ಟ್ರದ ಜನರೂ ನಮಗೂ ಇಂತಹ ಶಾಸಕರು ಇರಬೇಕು ಎನ್ನುತ್ತಿದ್ದಾರೆ. ಜನರ ಸಹಕಾರಕ್ಕೆ ನಾನು ಧನ್ಯವಾದ ಸಲ್ಲಿಸುತ್ತೇನೆ ಎಂದರು.

ನನ್ನ ಬೇಡಿಕೆಗೆ ಸ್ಪಂದಿಸಿ ಇಲ್ಲಿಗೆ ವಿದ್ಯುತ್ ಸೌಲಭ್ಯ ಕಲ್ಪಿಸಿದ ಹಿರಿಯ ಸಚಿವರಾದ ಕೆ.ಜೆ.ಜಾರ್ಜ್ ಮತ್ತು ಎಲ್ಲ ಅಧಿಕಾರಿಗಳಿಗೆ ಗ್ರಾಮದ ಜನರ ಪರವಾಗಿ ಧನ್ಯವಾದಗಳನ್ನು ಸಲ್ಲಿಸುತ್ತೇನೆ ಎಂದೂ ಹೆಬ್ಬಾಳಕರ್ ತಿಳಿಸಿದರು.
ಹುಬ್ಬಳ್ಳಿ ವಿದ್ಯುತ್ ಪ್ರಸರಣ ನಿಗಮದ ವ್ಯವಸ್ಥಾಪಕ ನಿರ್ದೇಶಕ ಮೊಹ್ಮದ್ ರೋಷನ್, ಮುಖ್ಯ ಎಂಜಿನಿಯರ್ ಪ್ರಕಾಶ, ಸ್ಥಳೀಯ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರು ಇದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ