*ಮಹಿಳೆಗೆ ಸಂಘರ್ಷವಿಲ್ಲದ ಬದುಕಿಲ್ಲ, ಆದರೂ ಎಲ್ಲ ಕ್ಷೇತ್ರಗಳಲ್ಲಿ ಮುಂಚೂಣಿ; ಸಚಿವೆ ಲಕ್ಷ್ಮೀ ಹೆಬ್ಬಾಳ್‍ಕರ್*
ಪ್ರಗತಿವಾಹಿನಿ ಸುದ್ದಿ, ದಾವಣಗೆರೆ; ಮಹಿಳೆ ಎಲ್ಲಾ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದ್ದರೂ ಸಹ ಸಂಘರ್ಷವಿಲ್ಲದೇ ಸುಲಭವಾಗಿ ಏನು ಪಡೆದುಕೊಳ್ಳಲು ಸಾಧ್ಯವಾಗಿಲ್ಲ, ಈ ನಿಟ್ಟಿನಲ್ಲಿ ಮಹಿಳೆಯರಿಗೆ ಸಮಾನ ಅವಕಾಶ ಕಲ್ಪಿಸಿದ ಬಸವಣ್ಣ ಮತ್ತು ಡಾ; ಬಿ.ಆರ್.ಅಂಬೇಡ್ಕರ್ ಅವರನ್ನು ನೆನೆಯಬೇಕೆಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಸಚಿವರಾದ ಲಕ್ಷ್ಮಿ ಹೆಬ್ಬಾಳ್ಕರ್ ತಿಳಿಸಿದರು.
ಅವರು ಮಂಗಳವಾರ ನಗರದ ಗುಂಡಿ ಮಹಾದೇವಪ್ಪ ಕಲ್ಯಾಣ ಮಂಟಪದಲ್ಲಿ ಆತ್ಮಿ ಅಸೋಸಿಯೇಷನ್ ಹಮ್ಮಿಕೊಂಡಿದ್ದ `ಸತ್ವಸಂಗಮ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಹಿಂದಿನ ದಿನಮಾನಗಳಿಗೆ ಹೋಲಿಸಿದರೆ ಇಂದು ಮಹಿಳೆ ಸ್ವಾವಲಂಬಿಯಾಗಿದ್ದಾಳೆ. ಮಹಿಳೆ ಮುಂದೆ ಬರಬೇಕು ಎಂದು ಎಲ್ಲರೂ ಹೇಳುತ್ತಾರೆ. ಆದರೆ, ಸಾಕಷ್ಟು ಶ್ರಮವಹಿಸಿ ಮುಂದೆ ಬಂದರೂ ಹಿಂದೆ ತಳ್ಳುತ್ತಾರೆ. ಇದಕ್ಕೆ ಸರಿಸಮಾನರಾಗಿ ನಿಲ್ಲಬೇಕಾಗಿದೆ ಎಂದರು.
ಇಂದು ತಾಂತ್ರಿಕತೆಯಲ್ಲಿ ಸಾಕಷ್ಟು ಮುಂದೆ ಇದೆ, ಆದರೆ ಮನುಷ್ಯತ್ವ ರೂಪಿಸಲು ತಾಂತ್ರಿಕತೆಯಿಂದ ಸಾಧ್ಯವಾಗುವುದಿಲ್ಲ. ಮನುಷ್ಯತ್ವದಿಂದ ಮನುಷ್ಯರಿಗಾಗಿ ಸೇವೆ ಮಾಡುವ ಇಲಾಖೆ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯಾಗಿದ್ದು ಇಲ್ಲಿ ಮಗು ಗರ್ಭಾವಸ್ಥೆಯಿಂದ ಜನನವಾಗಿ ಬೆಳೆದು ಮರಣ ಹೊಂದುವವರೆಗೂ ಇಲಾಖೆ ಸೇವೆ ಮಾಡುತ್ತದೆ. ಈ ನಿಟ್ಟಿನಲ್ಲಿ ಇಲಾಖೆ ಕಾರ್ಯಕ್ರಮದ ಜವಾಬ್ದಾರಿ ಹೆಚ್ಚಿರುತ್ತದೆ ಎಂದರು.
ದೇಶ ಕಟ್ಟುವ, ಸುಭದ್ರವಾಗಿಸುವ ಜವಾಬ್ದಾರಿ ಮಹಿಳೆಯರ ಹೆಗಲ ಮೇಲಿದೆ. ಮಕ್ಕಳಿಗೆ ಜನ್ಮ ನೀಡುವ ಮಹಿಳೆಯರು ಅವರಿಗೆ ಉತ್ತಮ ಶಿಕ್ಷಣ, ಸಂಸ್ಕಾರ ನೀಡುವ ಜತೆಗೆ ಅವರನ್ನು ಆರೋಗ್ಯವಂತರನ್ನಾಗಿ ಬೆಳೆಸುವ ಮೂಲಕ ದೇಶದ ಭವಿಷ್ಯವನ್ನು ಭದ್ರಗೊಳಿಸುತ್ತಿದ್ದಾರೆ.ಇದರಿಂದ ದೇಶವನ್ನು ಸಮೃದ್ದಿಯತ್ತ ತೆಗೆದುಕೊಂಡು ಹೋಗಲು ಸಾಧ್ಯವಾಗುತ್ತದೆ ಎಂದರು.
ವಿಶೇಷಚೇತನರಿಗೆ ಶೇ 5 ರಷ್ಟು ಅನುದಾನ; ಎಲ್ಲಾ ಇಲಾಖೆಗಳಲ್ಲಿ ವಿಶೇಷಚೇತನರ ಕಲ್ಯಾಣ ಕಾರ್ಯಕ್ರಮಗಳಿಗಾಗಿ ಶೇ 5 ರಷ್ಟು ಅನುದಾನ ಮೀಸಲಿರಿಸಲಾಗುತ್ತದೆ. ವಿಶೇಷಚೇತನರಿಗೆ ಬೇಕಾದ ಸೌಲಭ್ಯಗಳನ್ನು ಎಲ್ಲಾ ಇಲಾಖೆಗಳು ಕಲ್ಪಿಸಿಕೊಡಬೇಕಾಗಿರುವುದು ಅವರ ಜವಾಬ್ದಾರಿಯಾಗಿದೆ ಎಂದರು.
ಸ್ವಾವಲಂಬಿ ಬದುಕಿಗಾಗಿ ಪಂಚ ಗ್ಯಾರಂಟಿ; ಸರ್ಕಾರ ನೀಡಿದ 5 ಗ್ಯಾರಂಟಿಗಳಿಂದ ಮಹಿಳೆ ಇಂದು ಸ್ವಾವಲಂಬಿಯಾಗಿ ಬದುಕಲು ಸಾಧ್ಯವಾಗುತ್ತಿದೆ. ಏಕೆಂದರೆ ಮನೆಯ ಖರ್ಚುವೆಚ್ಚಗಳು ಕಡಿಮೆಯಾಗಿದ್ದು ಮನೆ ನಿರ್ವಹಣೆ ಸುಲಭವಾಗಿದೆ.
ಗೃಹಲಕ್ಷ್ಮಿ ಯೋಜನೆಯ ಮೂಲಕ ಯಜಮಾನಿಗೆ ವರ್ಷಕ್ಕೆ 24 ಸಾವಿರ ರೂ.ಗಳ ಜೊತೆಗೆ ಉಚಿತ ಸಾರಿಗೆ ವ್ಯವಸ್ಥೆ, ವಿದ್ಯುತ್ ಉಚಿತ, ಅನ್ನಭಾಗ್ಯ ಮತ್ತು ಪದವಿ, ಡಿಪ್ಲಮೋ ಮಕ್ಕಳಿದ್ದಲ್ಲಿ ಯುವನಿಧಿ ಸಿಗಲಿದ್ದು ಇದರಿಂದ ಆರ್ಥಿಕವಾಗಿ ಮುಂದೆ ಬರಲು ಸಾಧ್ಯವಾಗುತ್ತದೆ ಎಂದರು.
ಶಾಸಕರಾದ ಡಾ; ಶಾಮನೂರು ಶಿವಶಂಕರಪ್ಪ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿ ಮಹಿಳೆಯರ ಸಂಕಷ್ಟಗಳನ್ನು ಅರಿತಿದ್ದ ಬಸವಣ್ಣನವರು ಅವರಿಗೆ ಅನುಭವ ಮಂಟಪದಲ್ಲಿ ಪುರುಷರಿಗೆ ಸಮಾನವಾದ ಸ್ಥಾನಮಾನ ಹಾಗೂ ಸಂಪೂರ್ಣ ಸ್ವಾತಂತ್ರ್ಯ ನೀಡಿದ ಮೊದಲ ವ್ಯಕ್ತಿಯಾಗಿದ್ದರು. ಇಂದು ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲೂ ಮುಂಚೂಣಿಯಲ್ಲಿದ್ದಾರೆ.
ಮಹಿಳೆಯರಿಗೆ ಎಲ್ಲಾ ಕ್ಷೇತ್ರಗಳಲ್ಲಿ ಸಮಾನ ಅವಕಾಶ, ಹಕ್ಕುಗಳಿದ್ದು ಮಹಿಳೆಯರಿಗೆ ಮಾನಸಿಕ, ದೈಹಿಕ ಹಿಂಸೆ ನೀಡಿದವರಿಗೆ ನ್ಯಾಯಾಲಯಗಳು ಇನ್ನೂ ಹೆಚ್ಚಿನ ಕಠಿಣ ಶಿಕ್ಷೆ ನೀಡಬೇಕೆಂದರು.
ಸಮಾರಂಭದಲ್ಲಿ ಎಸ್.ಎಸ್. ಕೇರ್ ಟ್ರಸ್ಟ್ ಆಜೀವ ಟ್ರಸ್ಟಿ ಡಾ. ಪ್ರಭಾ ಮಲ್ಲಿಕಾರ್ಜುನ್ ಮಾತನಾಡಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ವಾಸಂತಿ ಉಪ್ಪಾರ್, ವಿಕಲಚೇತನರ ಇಲಾಖೆ ಅಧಿಕಾರಿ ಕೆ.ಕೆ. ಪ್ರಕಾಶ್, ರಾಷ್ಟ್ರ ಪ್ರಶಸ್ತಿ ವಿಜೇತ ವಿಕಲಚೇತನ ಘನಶ್ಯಾಮ್ ಟಿ. ಬಾಂಡಗೆ, ಬಿ.ಎಸ್ಸಿ ಸಂಸ್ಥೆಯ ಬಿ.ಸಿ. ಚಂದ್ರಶೇಖರ್, ಆತ್ಮಿ ಅಧ್ಯಕ್ಷೆ ಬಿ. ಪ್ರಸನ್ನ, ಕಾರ್ಯದರ್ಶಿ ಶೋಭಾ ಶಿವರಾಜ್ ಇತರರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ