ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲೇ ಮೂವರು ಮಕ್ಕಳಿಗೆ ಫಿನಾಲ್ ಕುಡಿಸಿ ತಾನೂ ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ
ಸಾಲಗಾರರ ಕಾಟದಿಂದ ಬೇಸತ್ತು ಕಠಿಣ ನಿರ್ಧಾರ ತಳೆದ ಮಹಿಳೆ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಸಾಲಗಾರರ ಕಿರುಕುಳ ತಾಳಲಾರದೆ ಮಹಿಳೆಯೊಬ್ಬರು ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ತಮ್ಮ ಮೂವರು ಮಕ್ಕಳಿಗೆ ಜ್ಯೂಸ್ ಎಂದು ಹೇಳಿ ಫಿನಾಲ್ ಕುಡಿಸಿ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ಬೆಳಗಾವಿ ನಗರದ ಅನಗೋಳ ನಿವಾಸಿ ಸರಸ್ವತಿ ಹಂಪಣ್ಣವರ ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ. ಕ್ಷೌರದಂಗಡಿಯಲ್ಲಿ ಕೆಲಸ ಮಾಡಿಕೊಂಡಿದ್ದ ಅವರ ಪತಿ ಅದೃಶ್ಯಪ್ಪ ಲಕ್ಷಾಂತರ ರೂ. ಸಾಲ ಮಾಡಿ ಹಿಂದಿರುಗಿಸದೆ ಊರು ಬಿಟ್ಟಿದ್ದ. ಇತ್ತ ಸಾಲಿಗರು ತಮ್ಮ ಹಣ ನೀಡುವಂತೆ ಮಹಿಳೆಯನ್ನು ಒಂದೇ ಸಮನೆ ಪೀಡಿಸತೊಡಗಿದ್ದರು.
ಇವರ ಕಾಟಕ್ಕೆ ಬೇಸತ್ತು ಮೂವರು ಮಕ್ಕಳೊಂದಿಗೆ ಸಹಾಯ ಕೋರಿ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ್ದ ಸರಸ್ವತಿಯವರಿಗೆ ಜಿಲ್ಲಾಧಿಕಾರಿ ನಿತೇಶಕುಮಾರ್ ಅವರನ್ನು ಭೇಟಿ ಮಾಡುವುದು ಸಾಧ್ಯವಾಗಲಿಲ್ಲ. ಇದರಿಂದ ಬೇಸತ್ತ ಅವರು ಜಿಲ್ಲಾಧಿಕಾರಿ ಕಚೇರಿ ಹೊರಗೆ ಮಕ್ಕಳಿಗೆ ಜ್ಯೂಸ್ ಎಂದು ಹೇಳಿ ಫಿನಾಲ್ ಕುಡಿಸಿ ತಾವೂ ಸೇವಿಸಿದರು.
ಕೂಡಲೆ ಎಚ್ಚೆತ್ತುಕೊಂಡ ಜಿಲ್ಲಾಧಿಕಾರಿ ಕಚೇರಿ ಸಿಬ್ಬಂದಿ ತಾಯಿ ಮತ್ತು ಮಕ್ಕಳನ್ನು ಬಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದು, ತಾಯಿ ಮತ್ತು ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಮಹಿಳೆ, ಮಕ್ಕಳಿಗೆ ಉತ್ತಮ ಚಿಕಿತ್ಸೆ ನೀಡಲು ವೈದ್ಯರಿಗೆ ಸೂಚನೆ
ಕೌಟುಂಬಿಕ ಸಮಸ್ಯೆಯ ಕಾರಣಕ್ಕೆ ಮಹಿಳೆಯೊಬ್ಬರು ಮೂರು ಮಕ್ಕಳೊಂದಿಗೆ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಬುಧವಾರ ಜಿಲ್ಲಾಧಿಕಾರಿ ಕಚೇರಿ ಎದುರಿನ ಬಸ್ ತಂಗುದಾಣದಲ್ಲಿ ನಡೆದಿದ್ದು, ಅವರನ್ನು ತಕ್ಷಣವೇ ಆಸ್ಪತ್ರೆಗೆ ಸೇರಿಸಲಾಗಿದೆ. ತಾಯಿ ಮತ್ತು ಮಕ್ಕಳು ಚೇತರಿಸಿಕೊಂಡಿದ್ದು, ಯಾವುದೇ ಅಪಾಯವಿಲ್ಲ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ತಿಳಿಸಿದ್ದಾರೆ.
ಜಿಲ್ಲಾಧಿಕಾರಿ ಕಚೇರಿಯ ಅವರಣದಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂಬ ಸುದ್ದಿಗಳು ಕೆಲವು ಮಾಧ್ಯಮಗಳಲ್ಲಿ ವರದಿಯಾಗಿರುತ್ತದೆ. ಆದರೆ ಈ ಘಟನೆಯು ಜಿಲ್ಲಾಧಿಕಾರಿ ಕಚೇರಿಯ ಎದುರಿಗೆ ಹೊರಭಾಗದಲ್ಲಿರುವ ಬಸ್ ತಂಗುದಾಣದಲ್ಲಿ ನಡೆದಿರುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅತ್ಯುತ್ತಮ ಚಿಕಿತ್ಸೆ ನೀಡಲು ಸೂಚನೆ:
ಆದಾಗ್ಯೂ ಮಾಧ್ಯಮಗಳ ವರದಿ ಗಮನಕ್ಕೆ ಬಂದ ತಕ್ಷಣವೇ ಜಿಲ್ಲಾ ಸರ್ಜನ್ ಜತೆ ಮಾತನಾಡಿದ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು, ಮಹಿಳೆ ಮತ್ತು ಮಕ್ಕಳಿಗೆ ಯಾವುದೇ ತೊಂದರೆಯಾಗದಂತೆ ಅತ್ಯುತ್ತಮ ಚಿಕಿತ್ಸೆ ನೀಡಬೇಕು ಎಂದು ಸೂಚನೆಯನ್ನು ನೀಡಿದರು.
ಸಂಪೂರ್ಣ ಆರೋಗ್ಯ ಸುಧಾರಣೆಯಾಗುವವರೆಗೆ ಆಸ್ಪತ್ರೆಯಲ್ಲಿ ಇರಿಸಿಕೊಂಡು ನಿಗಾ ವಹಿಸಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿರುತ್ತಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ