ಪ್ರಗತಿವಾಹಿನಿ ಸುದ್ದಿ, ಅಥಣಿ- ಕರ್ನಾಟಕದಾದ್ಯಂತ ಇರುವ ಅಸಂಘಟಿತ ವಲಯದ ಮಹಿಳೆಯೆರಿಗೆ ಸಾಲಕೊಟ್ಟು ಅವರನ್ನು ಆರ್ಥಿಕವಾಗಿ ಸಶಕ್ತಗೊಳಿಸುವ ಕಾರ್ಯದಲ್ಲಿ ಧರ್ಮಸ್ಥಳ ಸ್ವಸಹಾಯ ಸಂಘಗಳ ಪಾತ್ರ ದೊಡ್ಡದು. ಮಹಿಳೆಯ ಸಹನೆ ಅವಳ ದೌರ್ಬಲ್ಯವಲ್ಲ, ಅದು ಅವಳ ಧೈರ್ಯ. ಅದಕ್ಕಾಗಿ ಎಲ್ಲಾ ಮಹಿಳೆಯರು ಧೈರ್ಯದಿಂದ ಮುನ್ನುಗ್ಗಿ ಆರ್ಥಿಕ ಸುಸ್ಥಿರತೆಯನ್ನು ಸಾಧಿಸಿ ಎಂದು ಗಚ್ಚಿನ ಮಠದ ಶ್ರೀ ಶಿವಬಸವ ಮಹಾಸ್ವಾಮಿಗಳು ಹೇಳಿದರು.
ಅವರು ಸ್ಥಳೀಯ ಗಚ್ಚಿನಮಠದ ಆವರಣದಲ್ಲಿ ಮಂಗಳವಾರ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ದಿ ಯೋಜನೆ, ಅಥಣಿ ವತಿಯಿಂದ ಜರುಗಿದ ತಾಲೂಕಾ ಮಟ್ಟದ ಪೌಷ್ಟಿಕ ಆಹಾರ ಮೇಳ ಮತ್ತು ೩೦೯೭ನೇ ಸಂಘದ ಉದ್ಘಾಟನಾ ಸಮಾರಂಭದ ಸಾನಿಧ್ಯ ವಹಿಸಿ ಮಾತನಾಡಿದರು.
ಆಧುನಿಕ ಯುಗದಲ್ಲಿ ಸಿರಿಧಾನ್ಯ ಆಹಾರಗಳನ್ನು ಆಹಾರದಲ್ಲಿ ತಿಂದು ಸದೃಢ ದೇಹವನ್ನು ಕಾಪಾಡಿಕೊಳ್ಳುವುದು ಮಖ್ಯವಾಗಿದೆ ಹಾಗೂ ದೇವರು ಕೊಟ್ಟಿರುವಂತಹ ಇಲ್ಲ, ಸಲ್ಲಗಳ ನಡುವೆ ಸಂತೃಪ್ತಿಯ ಬದುಕನ್ನು ಸಾಗಿಸುತ್ತಿರುವ ಮಹಿಳೆ ಆರ್ಥಿಕವಾಗಿ ಸಬಲರಾದಾಗ ಮಾತ್ರ ದೇಶವು ಮುನ್ನಡೆಯಲು ಸಾಧ್ಯ ಎಂದು ಹೇಳಿದರು.
ಅನಂತರ ಮಾತನಾಡಿದ ಉದ್ಘಾಟಕರಾದ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ದಿ ಯೋಜನೆಯ ಪ್ರಾದೇಶಿಕ ನಿರ್ದೇಶಕ ದುಗ್ಗೆಗೌಡ ಅವರು ವಿದೇಶಿ ಆಹಾರದತ್ತವಾಲಿದ ಭಾರತೀಯರು ಸಾಂಪ್ರದಾಯಿಕ ಶೈಲಿಯ ಆಹಾರವನ್ನು ಮರೆತು ನಮ್ಮ ಆರೋಗ್ಯವನ್ನು ಹಾಳು ಮಾಡಿಕೊಳ್ಳುತ್ತಿದ್ದೇವೆ. ಅದಲ್ಲದೆ ಈ ಹಿಂದೆ ಬಡವರು ತಿನ್ನುತಿದ್ದ ಈ ಸಿರಿಧಾನ್ಯ ಆಹಾರವನ್ನು ಶ್ರೀಮಂತರು ಹೆಚ್ಚಿನ ಹಣಕೊಟ್ಟು ತಿನ್ನುತ್ತಿದ್ದರೆ ಬಡವರು ಮಾತ್ರ ಅಸತ್ವಯುತವಾದ ಆಹಾರವನ್ನು ಅವಲಂಬಿಸಿದ್ದಾರೆ ಎಂದರು. ಹಾಗೂ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ದಿ ಯೋಜನೆಯು ಯಾವಾಗಲೂ ಮಹಿಳೆಯರ ಪರವಾಗಿ ಅನೇಕ ವಿನೂತನ ಕಾರ್ಯಕ್ರಮ ಕೈಗೊಂಡು ಅವರ ಅಭಿವೃದ್ದಿಯನ್ನು ಮಾಡುತ್ತಿದ್ದು ವಿರೇಂದ್ರ ಹೆಗ್ಗಡೆಯವರ ಕನಸನ್ನು ನನಸು ಮಾಡುತ್ತಾ ಸಾಗಿದ್ದೇವೆ ಎಂದು ತಿಳಿಸಿದರು.
ಅನಂತರ ಮಾತನಾಡಿದ ಸಭೆಯ ಅಧ್ಯಕ್ಷ ಸಂಜಯ ನಾಡಗೌಡ ಅವರು, ಪ್ರಕೃತಿದತ್ತವಾಗಿ ನಮಗೆ ದೇವರು ಕೊಟ್ಟದೊಡ್ಡ ಆಸ್ತಿಯೆಂದರೆ ಅದು ನಮ್ಮ ದೇಹ. ಅದನ್ನು ಉತ್ತಮ ಸತ್ವಯುಕ್ತವಾದಂತಹ ಆಹಾರ ಸೇವನೆಯ ಮೂಲಕ ಬಹುದಿನಕಾಲ ಕಾಪಾಡಿಕೊಂಡು ಹೋಗೋಣ ಹಾಗೂ ಎಲ್ಲ ಮಹಿಳೆಯರ ಶ್ರಮದ ಫಲವಾಗಿ ಇವತ್ತು ಧರ್ಮಸ್ಥಳ ಗ್ರಾಮೀಣಾಭಿವೃದ್ದಿ ಯೋಜನೆ ಸಂಘಗಳು ಲಾಭದತ್ತ ನಡೆದಿವೆ ಎಂದು ತಿಳಿಸಿದರು.
ಅನಂತರದಲ್ಲಿ ಉಪನ್ಯಾಸಕ ಸಂತೋಷ ಬಡಕಂಬಿ ಹಾಗೂ ಸಿರಿಧಾನ್ಯ ಮತ್ತು ಮೌಲ್ಯವರ್ಧಿತ ಉತ್ಪನ್ನದ ತಯಾರಕರಾದ ಭಾಗ್ಯಶ್ರೀ ಅಕ್ಕಿ ಅವರು ಉಪನ್ಯಾಸ ನೀಡಿದರು. ಈ ಕಾರ್ಯಕ್ರಮದಲ್ಲಿ ಚಿಕ್ಕೋಡಿ ಜಿಲ್ಲಾ ನಿರ್ದೆಶಕರಾದ ಕೃಷ್ಣಾ ಟಿ, ಮುತ್ತಪ್ಪ ಕೊಪ್ಪದ, ತಾಲೂಕಿನ ಯೋಜನಾಧಿಕಾರಿ ರಾಜು ನಾಯಕ, ಜ್ಞಾನವಿಕಾಸ ಸಮನ್ವಯ ಅಧಿಕಾರಿ ದ್ರಾಕ್ಷಾಯಿಣಿ ಬಿಸ್ವಾಗರ, ಸಂಜೀವ ಎಸ್ ಬಿ, ಗೀತಾ ಮಡ್ಡಿ, ಶಂಭುಕೃಷ್ಣ ಪಟಗಾರ, ರಾಮದಾಸಗೌಡ, ಅನೀಲ ಹಡಪದ, ಭೀಮಪ್ಪ ಮರಿಯನ್ನವರ, ಸದಾಶಿವ ಚೌಗಲಾ ಹಾಗೂ ೨೫ ಹೊಸಕೇಂದ್ರದ ಎಲ್ಲ ಸದಸ್ಯರಿದ್ದರು. ದ್ರಾಕ್ಷಾಯಣಿ ಬಿಸ್ವಾಗರ ನಿರೂಪಿಸಿ, ವಂದಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ