-ವಿಶ್ವಾಸ. ಸೋಹೋನಿ.
ಬ್ರಹ್ಮಾಕುಮಾರಿಸ್, ಮೀಡಿಯಾ ವಿಂಗ್,
9483937106.
1993 ರ ಮೇ 15 ರಂದು ವಿಶ್ವಸಂಸ್ಥೆಯು ತನ್ನ ಜನರಲ್ ಅಸೆಂಬ್ಲಿಯಲ್ಲಿ ಅಂತಾರಾಷ್ಟ್ರೀಯ ಕುಟುಂಬ ದಿನಾಚರಣೆಯನ್ನು ಆಚರಿಸುವ ಒಂದು ಮಹತ್ವದ ನಿರ್ಧಾರ ತೆಗೆದುಕೊಂಡಿತು. ಅಂದಿನಿಂದ ಮೇ 15 ರಂದು ಇಡೀ ವಿಶ್ವ ಕುಟುಂಬ ದಿನವನ್ನಾಗಿ ಅಚರಿಸಲಾಗುತ್ತದೆ. ವಸುಧೈವ ಕುಟುಂಬಕಂ ಎಂಬುದು ಭಾರತೀಯರ ಆದರ್ಶ. ಅಂದರೇ ಇಡೀ ವಿಶ್ವವೇ ನಮ್ಮ ಕುಟುಂಬ. ಇದು ಕುಟುಂಬದ ಮಹತ್ವವನ್ನು ಸಾರುತ್ತದೆ. ಈ ಕುಟುಂಬ ಎಂಬ ಪರಿಕಲ್ಪನೆ ತುಂಬಾ ಪವಿತ್ರ ಹಾಗೂ ಮಹತ್ವವಾದದ್ದು. ಪ್ರತಿಯೋರ್ವ ವ್ಯಕ್ತಿ ಮತ್ತು ಸಮಾಜವನ್ನು ಒಂದೆಡೆ ಕೇಂದ್ರೀಕರಿಸುವ ಈ ವ್ಯವಸ್ಥೆ ಭಾರತದಲ್ಲಿ ಹೊಸದೇನಲ್ಲ. ಇದು ನಮ್ಮ ಪ್ರಾಚೀನ ಕಾಲದಿಂದ ನಡೆದುಕೊಂಡು ಬಂದಿದೆ.
ಬಹುಶ: ಕುಟುಂಬವೆಂಬ ಪರಿಕಲ್ಪನೆ ಇಲ್ಲದಿದ್ದರೆ ಜಗತ್ತನ್ನು ಊಹಿಸಿಕೊಳ್ಳಲು ಅಸಾಧ್ಯ. ಇಲ್ಲಿ ಅಜ್ಜ-ಅಜ್ಜಿ, ಅಪ್ಪ-ಅಮ್ಮ, ಚಿಕ್ಕಪ್ಪ-ಚಿಕ್ಕಮ್ಮ, ದೊಡ್ಡಪ್ಪ-ದೊಡ್ಡಮ್ಮ, ಅತ್ತೆ-ಮಾವ, ಅಕ್ಕ-ತಂಗಿ, ಅಣ್ಣ-ತಮ್ಮ, ಹೀಗೆ ಪ್ರತಿಯೋರ್ವ ವ್ಯಕ್ತಿಯೂ ಒಂದೇ ಸೂರಿನಡಿಯಲ್ಲಿ ಒಗ್ಗಟ್ಟಾಗಿ ಬಾಳುವ ಒಂದು ಸುಮಧುರ ಸಂಬಂಧವೇ ಕುಟುಂಬ. ಈ ರೀತಿಯ ಒಟ್ಟು ಕುಟುಂಬಗಳು ಒಂದೆಡೆ ಇರುವುದರಿಂದ ಸಮಾಜವನ್ನು ಕೇಂದ್ರೀಕರಿಸುವ ಈ ವ್ಯವಸ್ಥೆ ಪ್ರಾಚೀನ ಕಾಲದಿಂದ ಬಂದಿದೆ. ಆದರೆ ಇಂದು ಪಾಶ್ಚಾತ್ಯೀಕರಣದ ಫಲವಾಗಿ ಅವಿಭಕ್ತ ಕುಟುಂಬಗಳೆಲ್ಲವೂ ಛಿದ್ರವಾಗಿ ಹೋಗಿ ಕುಟುಂಬ ದಿನವನ್ನು ಆಚರಿಸುವಂತಹ ದುಸ್ಥಿತಿ ಬಂದಿರುವುದು ಶೋಚನೀಯವೇ ಸರಿ.
ಮಕ್ಕಳಿರಲವ್ವ ಮನೆ ತುಂಬಾ ಎಂಬ ಮಾತು ಬದಲಾಗಿ ಆರತಿಗೊಬ್ಬ ಮಗಳು, ಕೀರ್ತಿಗೊಬ್ಬ ಮಗ ಎಂಬ ಮಾತು ಹಳೆಯದಾಗಿ, ಹೆಣ್ಣಾಗಲಿ, ಗಂಡಾಗಲಿ ಒಂದು ಮಗುವು ಇರಲಿ ಎಂಬುದು ಬದಲಾಗಿ, ಗಂಡ ಹೆಂಡತಿ ಇದ್ದರೆ ಸಾಕು ಮಕ್ಕಳೇಕೆ ಬೇಕು? ಎನ್ನುವುದೂ ಮರೆಯಾಗಿ, ತಮ್ಮ ವೈಯಕ್ತಿಕ ಚಟವನ್ನು ತೀರುವಷ್ಟು ಸಮಯ ಜೊತೆಯಲ್ಲಿ ಇರೋಣ ಎಂಬ ಕೆಟ್ಟ್ಡ ಪದ್ಧತಿಯಲ್ಲಿ ನಾವಿದ್ದೇವೆ. ಆದರೆ, ಕುಟುಂಬ ಎಂಬ ಪರಿಕಲ್ಪನೆಯೇ ಅತಿ ಸುಂದರ. ಮಗುವಿಗೆ ಮನೆಯೇ ಮೊದಲ ಪಾಠ ಶಾಲೆ. ಪ್ರತಿದಿನ ಮನೆಯ ಆಗು ಹೋಗುಗಳನ್ನೇ ನೋಡಿಕೊಂಡು ಬೆಳೆಯುವ ಮಗು ಅದೇ ಸಂಸ್ಕಾರವನ್ನು ರೂಢಿಸಿಕೊಳ್ಳುತ್ತದೆ. ಚಿಕ್ಕ ಕುಟುಂಬಗಳು ಒಳ್ಳೆಯದೆಸಿದರೂ ಅಲ್ಲಿ ಒಟ್ಟು ಕುಟುಂಬದಲ್ಲಿ ಸಿಗುವ ಖುಷಿ ಹಾಗೂ ಅನುಭವದ ಪಾಠಗಳು ಖಂಡಿತವಾಗಿಯೂ ಸಿಗಲು ಸಾಧ್ಯವೇ ಇಲ್ಲ.
ಹಾಗಾಗಿ ಇಲ್ಲಿ ಅವಿಭಕ್ತ ಕುಟುಂಬದ ವಿಶೇಷತೆಗಳನ್ನು ನೋಡೋಣ
ಒಟ್ಟು ಕುಟುಂಬದಲ್ಲಿ ಎಲ್ಲರೂ ತಮ್ಮದೇ ಆದ ಕೆಲಸದಲ್ಲಿ ವ್ಯಸ್ತರಾಗಿರುವುದರಿಂದ ಮಕ್ಕಳು ತಮ್ಮ ಎಲ್ಲ ಅವಶ್ಯಕತೆಗಳಿಗೆ ಕೇವಲ ತಮ್ಮ ತಂದೆ-ತಾಯಂದಿರನ್ನು ಅವಲಂಬಿಸದೇ, ಮನೆಯಲ್ಲಿ ಸುಲಭವಾಗಿ ಸಿಗುವ ಅಜ್ಜ-ಅಜ್ಜಿ, ಚಿಕ್ಕಪ್ಪ, ಚಿಕ್ಕಮ್ಮ, ಅತ್ತೆ, ಮಾವ ಮುಂತಾದವರ ಸಹಾಯವನ್ನು ಪಡೆಯಬಹುದು. ಹೀಗಾಗಿ ಮಕ್ಕಳಿಗೆ ಎಂದೂ ಒಂಟಿತನವೇ ಕಾಡದು. ಮನೆಯಲ್ಲಿರುವ ಇತರೆ ಮಕ್ಕಳ ಜೊತೆ ಹಂಚಿಕೊಂಡು ಸಹಬಾಳ್ವೆ ನಡೆಸುವುದನ್ನು ಬಾಲ್ಯದಿಂದಲೇ ಮನೆಯಲ್ಲಿಯೆ ಕಲಿಯಬಹುದು. ಹಿರಿಯರು ಮನೆಯಲ್ಲಿ ಇರುವುದರಿಂದ ಆಚಾರ, ವಿಚಾರ, ಸಂಪ್ರದಾಯದ ಆಚರಣೆಗಳಿಗೆ ಬೆಲೆ ಬರುತ್ತದೆ. ಅದನ್ನು ನೋಡಿ ಮಕ್ಕಳು ಕಲಿತುಕೊಳ್ಳುತ್ತಾರೆ.
ವಿದ್ಯೆ ಎಷ್ಟೇ ಕಲಿತರೂ ವಿನಯವಿಲ್ಲದಿದ್ದರೆ ಕಲಿತ ವಿದ್ಯೆಗೆ ಯಾವ ಗೌರವವೂ ಇರುವುದಿಲ್ಲ. ಒಟ್ಟು ಕುಟುಂಬದಲ್ಲಿ ಯಾರೇ ತಪ್ಪು ಮಾಡಿದರೂ ಅದನ್ನು ತಿದ್ದಿ ಹೇಳಲು ಹಿರಿಯರು ಇರುತ್ತಾರೆ. ತಮ್ಮ ಜೀವನದ ಅನುಭವದ ಪಾಠಗಳ ಮೂಲಕ ಯಾವುದು ತಪ್ಪು ಯಾವುದು ಸರಿ ಎಂಬುದನ್ನು ತಿಳಿ ಹೇಳುವ ಮೂಲಕ ಗುರುಹಿರಿಯರಿಗೆ ಗೌರವ ಕೊಡುವುದನ್ನು ಮಕ್ಕಳು ಸಹಜವಾಗಿಯೇ ಕಲಿಯುತ್ತಾರೆ.
ಪುಸ್ತಕವನ್ನು ಓದವುದರಿಂದಲೇ ಎಲ್ಲರೂ ಬುದ್ಧಿವಂತರಾಗುವುದಿಲ್ಲ. ಜೀವನದ ಅನುಭವದ ಪಾಠ ಲೋಕ ಜ್ಞಾನವನ್ನು ಹೆಚ್ಚಿಸುತ್ತದೆ. ಸಹ ಸದಸ್ಯರ ಅನುಭವದ ಮೂಲಕ ಜೀವನದಲ್ಲಿ ಬದುಕಿನ ಪಾಠವನ್ನು ಕಲಿತು ಕಠಿಣ ಸವಾಲಗಳನ್ನು ಎದುರಿಸಲು ಮಕ್ಕಳು ಸಿದ್ದರಾಗುತ್ತಾರೆ.
ಕರೋನ ಸಮಯದಲ್ಲಿ ಲಾಕ್‍ಡೌನ್ ಕುಟುಂಬಸ್ಥರಿಗೆ ವರದಾನವಾಗಿತ್ತು. ತಂದೆ. ತಾಯಿ ಹಾಗೂ ಮಕ್ಕಳನ್ನು ಲಾಕ್‍ಡೌನ್ ಎಲ್ಲರನ್ನು ಒಟ್ಟುಗೂಡಿಸಿತು. ಇಷ್ಟೊಂದು ಮೌಲ್ಯಗಳು ಇರುವ ಕುಟುಂಬ ಎಂಬ ಪರಿಲ್ಪನೆಯೇ ಪಾಶ್ಚಾತ್ಯರಿಗೆ ಇಲ್ಲದಿದ್ದ ಕಾರಣ ಅದನ್ನು ಅನುಭವಿಸುವ ಸಲುವಾಗಿಯೇ ಮೇ 15 ರಂದು ವಿಶ್ವದೆಲ್ಲೆಡೆ ಗ್ಲೋಬಲ್ ಫ್ಯಾಮಿಲಿ ಡೇ ಎಂದು ಆಚರಿಸುವ ಪದ್ಧತಿ ಜಾರಿಗೆ ಬಂತು.
ವಸುಧೈವ ಕುಟುಂಬಕಂ ಎಂದರೆ ವಿಶ್ವವೇ ಒಂದು ಪರಿವಾರ. ಇಲ್ಲಿ ಜಾತಿ, ಮತ, ಕುಲ, ಧರ್ಮ, ಭಾಷೆ, ವರ್ಣಭೇದ ಇರುವುದಿಲ್ಲ. ನಾವೆಲ್ಲರೂ ಆ ಒಬ್ಬ ಭಗವಂತನ ಮಕ್ಕಳು. ಆ ಶಿವನು ನಮಗೆ ತಂದೆ ತಾಯಿ, ಬಂಧು, ಬಳಗ, ಸಖಾ, ಸ್ವ್ವಾಮಿ ಸರ್ವಸ್ವನಾಗಿದ್ದಾನೆ. ಪರಮಾತ್ಮ ಶಿವನು ಅಜನ್ಮ, ಅಯೋನಿಜ, ಅವ್ಯಕ್ತ, ಅಮರ, ಅವಿನಾಶಿ, ಅಭೋಕ್ತ, ಅಶರೀರಿ, ಸರ್ವಶಕ್ತಿವಂತನಾಗಿದ್ದಾನೆ. ಸರ್ವ ಆತ್ಮರ ತಂದೆಯೊಬ್ಬನೇ, ಅವನೇ ನಿರಾಕಾರ ಶಿವನು, ಅವನೇ ಅಲ್ಲಾಹು, ಅವನೇ ಈಶ, ಅವನೇ ಗಾಡ್-ಓಂಕಾರನು, ದೇವನೊಬ್ಬ, ನಾಮ ಹಲವು ಭಕ್ತರೆನಿತೋ ಜಗದೊಳು. ಭಾವ ಒಂದೇ, ಭಾಷೆ ಹಲವು, ನಮ್ಮಲೇಕೆ ನಾನು ಹಿಂದೂ, ನಾನು ಮುಸಲ್ಮಾನ, ಕ್ರೈಸ್ತರೆಂಬ ಭೇದವೂ. ನಾಳೆ ನಾಡನಾಳುವಂತಹ ಮಕ್ಕಳಲ್ಲಿ ಜಗಳವು ಏಕೆ? ಬ್ರಹ್ಮ, ವಿಷ್ಣು, ಬಸವ, ಏಸು, ನಾನಕ ಪೈಗಂಬರೆಲ್ಲ ಒಬ್ಬ ದೇವನ ಮಕ್ಕಳು, ಸರ್ವಧರ್ಮವನ್ನು ಬಿಟ್ಟು, ದೇಹ ಧರ್ಮವನ್ನು ಸುಟ್ಟು, ನಿರಾಕಾರ ಜೋರ್ತಿಬಿಂದು ಶಿವನ ನೆನೆಯುವ.
ಶಿವನು ನಮ್ಮೆಲ್ಲರಿಗೂ ತಂದೆ-ತಾಯಿ ಹಾಗೂ ಸರ್ವ ಸಂಬಂಧಿ ಎಂದು ಶಿವಯೋಗಿ ಬಸವಣ್ಣನವರು ಹೇಳಿದ್ದಾರೆ.
“ತಂದೆ ನೀನು – ತಾಯಿ ನೀನು,
ಬಂಧು ನೀನು – ಬಳಗ ನೀನು,
ನೀನಲ್ಲದೆ ಮತ್ತಾರೂ ಇಲ್ಲವಯ್ಯಾ,
ಕೂಡಲಸಂಗಮದೇವಾ,
ಹಾಲಲದ್ದು – ನೀರಲದ್ದು.
ಸಕಲ ಭುವನಾದಿ ಭುವನಂಗಳಿಗೆ ತಂದೆ,
ಸಕಲ ದೇವಾದಿ ದೇವರ್ಕಗಳಿಗೆ ತಂದೆ,
ಭವ ಭವದಲ್ಲಿ ನೀನೆನ್ನ ತಂದೆ,
ಗುಹೇಶ್ವರ ಅಂಗ ನಿರಾಳದಲ್ಲಿ ನೀನೆನ್ನ ತಂದೆ.”
ಜಾಗತಿಕ ತಾಪಮಾನದಲ್ಲಿ ಏರಿಕೆ ,ಅನೇಕ ವೈರಸ್‍ಗಳು, ಕೋವಿಡ್ ಪ್ರಕರಣಗಳು 13000 ಗಡಿ ದಾಟಿವೆ. ಕೋವಿಡ್ 19 ಹೊಸತಳಿಗಳಾದ ಎಚ್3ಎನ್2 ಮತ್ತು ಇನ್ನು ಅನೇಕ ಕಠಿಣ ಕಾಯಿಲೆಗಳ ಕಠಿಣ ಸಮಯದಲ್ಲಿ ಭವರೋಗ ವೈದ್ಯನಾದ ಶಿವ ಪರಮಾತ್ಮನ ರಕ್ಷಣೆ ಬಹಳ ಅವಶ್ಯಕವಾಗಿದೆ. ಹೀಗೆ ನಾವೆಲ್ಲರೂ ಒಂದೇ ಕುಟುಂಬದವರು ಎಂದು ತಿಳಿದು ಭಗವಂತನ ಶ್ರೀರಕ್ಷೆಯಲ್ಲಿ ಸದಾ ಇದ್ದರೆ ನಮ್ಮ ಜೀವನ ಸಾರ್ಥಕ. ಈ ವಿಶ್ವ ಕುಟುಂಬ ದಿನದಂದು ಈಶ್ವರೀಯ ಪರಿವಾರದ ಸದಸ್ಯರಾಗಲು ಹತ್ತಿರದ ಬ್ರಹ್ಮಾಕುಮಾರಿ ಸಂಸ್ಥೆಗೆ ಭೆಟ್ಟಿ ಕೊಟ್ಟು ಪರಮಾತ್ಮ ತಿಳಿಸುವ ರಾಜಯೋಗ ಹಾಗೂ ಸತ್ಯಜ್ಞಾನವನ್ನು ಉಚಿತವಾಗಿ ಪಡೆಯಿರಿ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ