ಪ್ರಗತಿವಾಹಿನಿ ಸುದ್ದಿ: ಅರಣ್ಯ ಇಲಾಖೆ ಸಿಬ್ಬಂದಿಗಳ ಕೈಯಿಂದ ತಪ್ಪಿಸಿಕೊಂಡು ಓಡಿ ಹೋಗುತ್ತಿದ್ದ ಚಿರತೆಯನ್ನು ಯುವಕನೊಬ್ಬ ಅದರ ಬಾಲದಿಂದ ಹಿಡಿದು ಬೋನಿಗೆ ಹಾಕಿರುವ ಘಟನೆ ತುಮಕೂರಿನಲ್ಲಿ ನಡೆದಿದೆ. ಇದರ ವಿಡಿಯೋ ಬಾರೀ ವೈರಲ್ ಆಗುತ್ತಿದ್ದು ಯುವಕನ ಧೈರ್ಯಕ್ಕೆ ಅರಣ್ಯ ಇಲಾಖೆ ಸಿಬ್ಬಂದಿಗಳೇ ಶಾಕ್ ಆಗಿದ್ದಾರೆ.
ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನ ರಂಗಾಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ. ರಂಗಾಪುರ ಗ್ರಾಮದ ಸುತ್ತಮುತ್ತ ಇತ್ತೀಚೆಗೆ ಚಿರತೆ ಕಾಣಿಕೊಳ್ಳುತ್ತಿದ್ದು ಇದರಿಂದ ಹಲವು ದಿನಗಳಿಂದ ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಯಾಗಿತ್ತು.
ಇಂದು ಪುರಲೇಹಳ್ಳಿ ರಸ್ತೆಯಲ್ಲಿರುವ ಕುಮಾರ್ ಎಂಬುವವರ ಮನೆಯ ಬಳಿ ಚಿರತೆ ಕಾಣಿಸಿಕೊಂಡಿದೆ. ಮಾಹಿತಿ ಪಡೆದ ಅರಣ್ಯ ಇಲಾಖೆ ಸಿಬ್ಬಂದಿ ತಕ್ಷಣ ಚಿರತೆಯನ್ನು ಸೆರೆ ಹಿಡಿಯಲು ಸಕಲ ಸಲಕರಣೆಗಳೊಂದಿಗೆ ಸ್ಥಳಕ್ಕೆ ಆಗಮಿಸಿದ್ದಾರೆ. ಸಿಬ್ಬಂದಿ ಬಲೆ ಬಿಟ್ಟು ಚಿರತೆಯನ್ನು ಸೆರೆ ಹಿಡಿಯಲು ಮುಂದಾದರೂ ಯಾವುದೇ ಪ್ರಯೋಜನ ಆಗಲಿಲ್ಲ. ಚಿರತೆಯನ್ನು ಸೆರೆಹಿಡಿಯುವಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಗಳು ವಿಫಲರಾಗಿದ್ದು ಕೈಚೆಲ್ಲಿದ್ದರು.
ಅಷ್ಟರಲ್ಲಿ ಗ್ರಾಮದ ಆನಂದ್ ಎಂಬ ಯುವಕ ಓಡಿ ಹೋಗುತ್ತಿದ್ದ ಚಿರತೆಯ ಬಾಲವನ್ನು ಹಿಡಿದು ಬೋನಿಗೆ ಹಾಕಿದ್ದಾನೆ. ಆನಂದ್ ಸಾಹಸಕ್ಕೆ ಇಡೀ ಸುತ್ತಮುತ್ತಲಿನ ಗ್ರಾಮಸ್ಥರು ಖುಷಿಪಟ್ಟಿದ್ದಲ್ಲದೇ ನಿಟ್ಟುಸಿರು ಬಿಟ್ಟಿದ್ದಾರೆ. ಆನಂದ್ ಸಾಹಸ ಕಂಡು ಅರಣ್ಯ ಇಲಾಖೆ ಸಿಬ್ಬಂದಿಗಳು ಕೂಡಾ ಶಾಕ್ ಆಗಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ