ಪ್ರಗತಿವಾಹಿನಿ ಸುದ್ದಿ, ಶಿರಸಿ –
ಕರ್ನಾಟಕದ ತಿರುಪತಿ ಎಂದೇ ಹೆಸರಾದ ಮಂಜುಗುಣಿಯ ಶ್ರೀ ವೆಂಕಟರಮಣ ದೇವರ ಮಹಾ ರಥೋತ್ಸವ ಏಪ್ರಿಲ್16 ರಂದು ಮುಂಜಾನೆ 8ಗಂಟೆಗೆ ನಡೆಯಲಿದೆ.
ವಿವಿಧ ಧಾರ್ಮಿಕ ಕಾರ್ಯಕ್ರಮಗಳ ಬಳಿಕ ಬೆಳಿಗ್ಗೆ 7ಕ್ಕೆ ಶ್ರೀದೇವರ ರಥಾರೋಹಣ ನಡೆಯಲಿದ್ದು ಬಳಿಕ 8 ಗಂಟೆಗೆ ಭಕ್ತರ ಹರ್ಷೋದ್ಘಾರದ ನಡುವೆ ರಥೋತ್ಸವ ನಡೆಯಲಿದೆ.
ರಥೋತ್ಸವದ ಬಳಿಕ ಅದೇ ದಿನರಾತ್ರಿ 1ಗಂಟೆಯವರಿಗೆ ರಥಾರೂಢ ಶ್ರೀ ದೇವರ ದರ್ಶನ ನಡೆಯಲಿದೆ. ಏಪ್ರಿಲ್ 2 ರಿಂದ ಮಹಾ ರಥಪೂಜೆಯೊಂದಿಗೆ ರಥೋತ್ಸವದ ಧಾರ್ಮಿಕ ಕಾರ್ಯಕ್ರಮಗಳು ಆರಂಭವಾಗಿ, ಏ.10ಕ್ಕೆ ಪ್ರಾರ್ಥನೆ, ದೇವನಾಂದಿ ಮೂಲಕ ಯಾಗಶಾಲಾ ಪ್ರವೇಶ ಮಾಡಲಾಗಿದ್ದು 11ಕ್ಕೆ ಧ್ವಜ ಪೂಜೆ, ಧ್ವಜ ಬಲಿಗಳು, ರತ್ನ ಮಂಟಪೋತ್ಸವ,12ಕ್ಕೆ ಭೂತರಾಜ ಬಲಿ, ಗಜಯಂತ್ರೋತ್ಸವ, 13ಕ್ಕೆ ಸಿಂಹಯಂತ್ರೋತ್ಸವ ಕಾರ್ಯಕ್ರಮಗಳ ಜರುಗಿವೆ.
ದಿನಾಂಕ 14 ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳ ಜೊತೆ ರಾತ್ರಿ ವಿಶೇಷ ಯಂತ್ರೋತ್ಸವ, 15ಕ್ಕೆ ಶ್ರೀದೇವರ ಪ್ರತಿಷ್ಠಾ ದಿನ ಕೂಡ ಆಗಿದ್ದು, ಅದೇ ದಿನ ರಾತ್ರಿ ವಿಶೇಷ ದಂಡಬಲಿ, ಭೂತರಾಜ ಬಲಿ ಹಾಗೂ ಗರುಡಯಂತ್ರೋತ್ಸವ ನಡೆಯಲಿದೆ. ಹಾಗೂ 16ರ ಬೆಳಿಗ್ಗೆಯೇ ಮಹಾರಥೋತ್ಸವ ನಡೆಯಲಿದೆ ಎಂಬುದು ವಿಶೇಷವಾಗಿದೆ.
ಮುಂಜಾನೆ ರಥ ಶುದ್ದಿ, ರಥ ಪೂಜಾ, ರಥಬಲಿಗಳ ಮೂಲಕ ರಥಾರೋಹಣಗೊಳ್ಳುವ ವೆಂಕಟರಮಣ ದೇವರಿಗೆ ವಿಶೇಷ ಪೂಜೆಗಳೂ ನಡೆಯಲಿವೆ. ಬೆಳಿಗ್ಗೆ ಭಕ್ತರು ರಥಾರೂಢ ದೇವರನ್ನು ಎಳೆಯಲಿದ್ದಾರೆ. ನಂತರ 17ಕ್ಕೆ ಅವಭೃತ ಸ್ನಾನ, 30ಕ್ಕೆ ಸಂಪ್ರೋಕ್ಷಣ್ಯ ನಡೆಯಲಿದೆ ಎಂದು ಮಂಜುಗುಣಿಯ ಪ್ರಧಾನ ಅರ್ಚಕ ಶ್ರೀನಿವಾಸ ಭಟ್ ತಿಳಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ