ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ನಾಳೆ ರಾಜ್ಯಕ್ಕೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಆಗಮನ ಹಿನ್ನಲೆಯಲ್ಲಿ ಸಚಿವ ಸಂಪುಟ ವಿಸ್ತರಣೆ ನಿಟ್ಟಿನಲ್ಲಿ ಸಿಎಂ ಬಿ ಎಸ್ ಯಡಿಯೂರಪ್ಪ ಚರ್ಚೆ ನಡೆಸುವ ಸಾಧ್ಯತೆ ದಟ್ಟವಾಗಿದೆ. ಈ ಹಿನ್ನಲೆಯಲ್ಲಿ ಸಚಿವಾಕಾಂಕ್ಷಿಗಳು ಸಿಎಂ ಮನೆಗೆ ದೌಡಾಯಿಸಿದ್ದು, ಸಚಿವ ಸ್ಥಾನಕ್ಕಾಗಿ ಕೊನೇ ಹಂತದ ಲಾಬಿ ನಡೆಸಿದ್ದಾರೆ.
ಮಹಾಲಕ್ಷ್ಮಿ ಲೇಔಟ್ ಶಾಸಕ ಗೋಪಾಲಯ್ಯ, ಉಮೇಶ್ ಕತ್ತಿ, ಹೊಳಲ್ಕೆರೆ ಶಾಸಕ ಚಂದ್ರಪ್ಪ, ಎಂಟಿಬಿ ನಾಗರಾಜ್ ಸೇರಿದಂತೆ ಹಲವು ಶಾಸಕರು ಸಚಿವ ಸ್ಥಾನಕ್ಕಾಗಿ ಸಿಎಂ ಯಡಿಯೂರಪ್ಪ ಮೇಲೆ ಕೊನೆ ಹಂತದ ಒತ್ತಡ ಹೇರುತ್ತಿದ್ದಾರೆ.
ನಾಳೆ ಮಧ್ಯಾಹ್ನ 12.15ಕ್ಕೆ ಅಮಿತ್ ಶಾ ದೆಹಲಿಯಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿಯಲಿದ್ದಾರೆ. ನಂತರ ಬೆಂಗಳೂರಿನ ಮೈದಾನದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಬಳಿಕ ಸಂಜೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಸೇರಿದಂತೆ ಪ್ರಮುಖ ರಾಜ್ಯ ನಾಯಕರೊಂದಿಗೆ ಮಾತುಕತೆ ನಡೆಸಲಿದ್ದಾರೆ. ನಂತರ ಹುಬ್ಬಳ್ಳಿಯಲ್ಲಿ ಆಯೋಜಿಸಲಾಗಿರುವ ಪೌರತ್ವ ಕಾಯ್ದೆ ಕುರಿತಾದ ಜನಜಾಗೃತಿ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ ಎನ್ನಲಾಗುತ್ತಿದೆ.
ಶನಿವಾರ ಸಂಜೆ ಬೆಂಗಳೂರಿನ ಖಾಸಗಿ ಹೋಟೆಲ್ವೊಂದರಲ್ಲಿ ಪ್ರಸಕ್ತ ರಾಜಕೀಯ ವಿದ್ಯಮಾನಗಳ ಬಗ್ಗೆ ರಾಜ್ಯ ಬಿಜೆಪಿ ನಾಯಕರೊಂದಿಗೆ ಮಾತುಕತೆ ನಡೆಸಲಿದ್ದಾರೆ. ಪ್ರಮುಖವಾಗಿ ಸಿಎಂ ಯಡಿಯೂರಪ್ಪ ಜತೆ ಸಂಪುಟ ವಿಸ್ತರಣೆ ಬಗ್ಗೆ ಚರ್ಚೆ ನಡೆಸಲಿದ್ದಾರೆ. ಒಟ್ಟಾರೆ ಹಲವು ದಿನಗಳಿಂದ ನೆನೆಗುದಿಗೆ ಬಿದ್ದಿರುವ ಸಚಿವ ಸಂಪುಟ ವಿಸ್ತರಣೆಗೆ ಹೈಕಮಾಂಡ್ ನಾಳೆ ಹಸಿರು ನಿಶಾನೆ ತೋರಲಿದೆಯೇ ಕಾದುನೋಡಬೇಕಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ