ರಾಜಕಾರಣಿಗಳನ್ನು ಹತ್ತಿರದಿಂದ ನೋಡುತ್ತ ಬಂದಿದ್ದೇನೆ:
ಭ್ರಷ್ಟಾಚಾರದಿಂದ ಬೇಸತ್ತು ರಾಜೀನಾಮೆ ನೀಡಿದ್ದೇನೆ
ಪ್ರಗತಿ ವಾಹಿನಿ ಸುದ್ದಿ ಬೆಂಗಳೂರು –
ಐಪಿಎಸ್ ಅಧಿಕಾರಿಯಾಗಿ ಕಳೆದ ೩೦ ವರ್ಷಗಳಿಂದ ರಾಜಕಾರಣಿಗಳನ್ನು ಅತೀ ಹತ್ತಿರದಿಂದ ನೋಡುತ್ತ ಬಂದವನು ನಾನು, ಮೇಲೆ ನಯವಾಗಿ ಮಾತನಾಡುವ ಎಷ್ಟೋ ರಾಜಕಾರಣಿಗಳು ಕೋಟ್ಯಾಂತರ ರೂ. ಭ್ರಷ್ಟಾಚಾರ ಮಾಡುತ್ತಿದ್ದಾರೆ. ಚುನಾವಣೆಯಲ್ಲಿ ಕೋಟಿಗಟ್ಟಲೆ ಹಣ ಖರ್ಚು ಮಾಡುತ್ತಾರೆ, ಆದರೆ ಜನರ ಸ್ಥಿತಿ ಮಾತ್ರ ಸುಧಾರಿಸಿಲ್ಲ. ಎಲ್ಲರ ಬಂಡವಾಳ ಬಿಚ್ಚಿಡುತ್ತೇನೆ ಎಂದು ಉನ್ನತ ಪೊಲೀಸ್ ಅಧಿಕಾರಿ ಹುದ್ದೆ ತ್ಯಜಿಸಿ ಆಮ್ ಆದ್ಮಿ ಪಾರ್ಟಿ ಸೇರಿರುವ ಭಾಸ್ಕರ್ ರಾವ್ ಗುಡುಗಿದ್ದಾರೆ.
ಬೆಂಗಳೂರು ಪ್ರೆಸ್ ಕ್ಲಬ್‌ನಲ್ಲಿ ಮಾತನಾಡಿದ ಅವರು, ಸ್ವಚ್ಛ ಪಾರದರ್ಶಕ ಆಡಳಿತವನ್ನು ಯಾರೂ ಕೊಟ್ಟಿಲ್ಲ. ಒಂದೊಂದು ಹುದ್ದೆಗೂ ಕೋಟ್ಯಾಂತರ ರೂ. ಹಣ ಕೊಡಬೇಕು. ಕರ್ನಾಟಕದಲ್ಲಿ ಭ್ರಷ್ಟಾಚಾರ ಮಿತಿ ಮೀರಿದೆ. ಒಳ್ಳೆಯ ಅಧಿಕಾರಿಗಳಿಗೆ ಇಲ್ಲಿ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ. ಪ್ರಾಮಾಣಿಕ ಅಧಿಕಾರಿಗಳು ಕರ್ನಾಟಕವನ್ನೇ ಬಿಟ್ಟು ಹೋಗುತ್ತಿದ್ದಾರೆ. ನಾನೂ ಸಹ ವ್ಯವಸ್ಥೆಯಲ್ಲಿರುವ ಭ್ರಷ್ಟಾಚಾರದಿಂದ ಬೇಸತ್ತು ರಾಜೀನಾಮೆ ನೀಡಿದ್ದೇನೆ ಎಂದು ಹೇಳಿದರು.
ಸರಕಾರಿ ಅಧಿಕಾರಿಯಾಗಿದ್ದರಿಂದ ಸರಕಾರದ ವಿರುದ್ಧ ಮಾತಾಡಲು ಸಾಧ್ಯವಾಗದೆ ಸುಮ್ಮನಿದ್ದೆ. ಆದರೆ ಈಗ ಎಲ್ಲರ ಬಂಡವಾಳ ಬಹಿರಂಗಗೊಳಿಸುತ್ತೇನೆ ಎಂದರು.
ಹಿಜಾಬ್, ಹಲಾಲ್ ಎನ್ನುತ್ತ ಸಣ್ಣ ಸಣ್ಣ ವಿಷಯಗಳಿಗೆ ವಿವಾಧ ಸೃಷ್ಟಿಸುತ್ತಿದ್ದಾರೆ. ಅಭಿವೃದ್ಧಿಯ ಬಗ್ಗೆ ಯಾರೂ ಚರ್ಚೆ ಮಾಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಜನತೆಯ ಗಮನವನ್ನು ಬೇರೆಡೆಗೆ ಸೆಳೆಯಲು ಇಂಥಹ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಆದರೆ ಜನ ಎಲ್ಲವನ್ನೂ ಗಮನಿಸುತ್ತಿದ್ದಾರೆ ಎಂದ ಅವರು ಯಾವುದೇ ಕ್ಷಣದಲ್ಲಿ ಬೇಕಾದರೂ ಚುನಾವಣೆಗೆ ನಾವು ಸಿದ್ಧರಾಗಿದ್ದೇವೆ ಎಂದರು.
ಈ ಸಂದರ್ಭದಲ್ಲಿ ಆಪ್‌ನ ರಾಜ್ಯ ಚುನಾವಣಾ ಉಸ್ತುವಾರಿ ದಿಲೀಪ್ ಪಾಂಡೆ, ಆಪ್ ಅಧ್ಯಕ್ಷ ಪೃಥ್ವಿ ರೆಡ್ಡಿ ಇತರರು ಇದ್ದರು.
ACB ದಾಳಿ : ಬಿಇಒ ಕಚೇರಿ ಎಸ್ ಡಿಸಿ ಆರೆಸ್ಟ್
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ