Latest

ಲಾಕ್ ಡೌನ್ ಸಂದರ್ಭದಲ್ಲಿ ಬಡವರಿಗೆ ಉಚಿತ ಊಟ ನೀಡಿಲ್ಲ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಸಮ್ಮಿಶ್ರ ಸರ್ಕಾರವನ್ನು ಬೀಳಿಸಿ ಅಧಿಕಾರಕ್ಕೆ ಬಂದ ದಿನದಿಂದ ಇಂದಿರಾ ಕ್ಯಾಂಟೀನ್ ಮುಚ್ಚಲು ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಹವಣಿಸುತ್ತಿದೆ. ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಇದಕ್ಕೆ ಕುಮ್ಮಕ್ಕು ನೀಡುತ್ತಿದ್ದು ಬಡವರ ಪಾಲಿನ ಅನ್ನ ಕಸಿಯುತ್ತಿದೆ ಎಂದು ಆಮ್ ಆದ್ಮಿ ಪಕ್ಷದ ಮಾಧ್ಯಮ ಸಂಚಾಲಕ ಜಗದೀಶ್ ವಿ ಸದಂ ಆರೋಪಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರು ನಗರದಾದ್ಯಂತ ಇರುವ 174 ಕ್ಯಾಂಟೀನ್ ಹಾಗೂ 15 ಮೊಬೈಲ್ ಕ್ಯಾಂಟೀನ್‌ಗಳಿಗೆ ಮೂಲ ಸೌಕರ್ಯಗಳನ್ನು ಒದಗಿಸದೆ, ಗುತ್ತಿಗೆದಾರರಿಗೆ ಹಣ ಪಾವತಿ ಮಾಡದೆ ನಿರ್ಲಕ್ಷ್ಯದಿಂದ ನೋಡಲಾಗುತ್ತಿದೆ ಎಂದರು.

ಲಾಕ್‌ಡೌನ್ ಸಂದರ್ಭದಲ್ಲಿ ಬಡವರಿಗೆ, ವಲಸೆ ಕಾರ್ಮಿಕರಿಗೆ ಊಟ ನೀಡಿ ಎಂದು ಆಮ್ ಆದ್ಮಿ ಪಕ್ಷ ಎಷ್ಟೇ ಒತ್ತಾಯಿಸಿದರೂ, ಉಚಿತವಾಗಿ ಊಟ ನೀಡಲಿಲ್ಲ. ದೆಹಲಿಯಲ್ಲಿ ಇಷ್ಟು ಸುಸಜ್ಜಿತವಾದ ವ್ಯವಸ್ಥೆ ಇಲ್ಲದಿದ್ದರೂ ಪ್ರತಿದಿನ 13 ಲಕ್ಷ ಜನರಿಗೆ ಊಟ ನೀಡಲಾಗುತ್ತಿತ್ತು. ಆದರೆ ನಮ್ಮ ರಾಜ್ಯದಲ್ಲಿ ವ್ಯವಸ್ಥಿತವಾಗಿ ಇರುವ ಯೋಜನೆಯನ್ನು ಉಪಯೋಗಿಸಿಕೊಳ್ಳದೆ ಬಡವರನ್ನು ಹಸಿವಿನಲ್ಲೆ ಮಲಗಿಸಿದ್ದೇ ಬಿಜೆಪಿ ಸರ್ಕಾರದ ಸಾಧನೆ, ಮುಖ್ಯಮಂತ್ರಿಗಳಿಗೆ, ಸಚಿವ ಸುರೇಶ್ ಕುಮಾರ್ ಅವರಿಗೆ ನಾಚಿಕೆ ಆಗಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಚಿವರಾದ ಸುರೇಶ್ ಕುಮಾರ್, ಅಶ್ವಥ್ ನಾರಾಯಣ ಅವರು ಮೊದಲಿನಿಂದಲೂ ಒಂದಲ್ಲ ಒಂದು ರೀತಿಯಲ್ಲಿ ಇಂದಿರಾ ಕ್ಯಾಂಟೀನ್ ಮುಚ್ಚಲು ಚಿತಾವಣೆ ನಡೆಸುತ್ತಿದ್ದಾರೆ. ಇದಕ್ಕೆ ಸಾಕಷ್ಟು ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ವಾಮಮಾರ್ಗದ ಮೂಲಕ ಮೂಲ ಸೌಕರ್ಯಗಳಿಗೆ ಕತ್ತರಿ ಹಾಕುವ ಮೂಲಕ ಹಾಗೂ ಸರಿಯಾಗಿ ಬಿಲ್‌ ಗಳನ್ನು ಬಿಡುಗಡೆ ಮಾಡದೆ ಉಸಿರುಗಟ್ಟಿಸಲಾಗುತ್ತಿದೆ. ಬಡವರ ಅನ್ನ ಕಿತ್ತುಕೊಳ್ಳುವುದಕ್ಕೆ ನೇರ ಕಾರಣ ಸಚಿವ ಸುರೇಶ್ ಕುಮಾರ್ ಎಂದರು.

Home add -Advt

ಇಂದಿರಾ ಕ್ಯಾಂಟೀನ್‌ ಊಟದ ಗುತ್ತಿಗೆ ಪಡೆದಿರುವ ಚೆಫ್ ಟಾಕ್ ಮತ್ತು ರಿವಾಡ್ರ್ಸ್ ಎಂಬ ಸಂಸ್ಥೆಗಳ ವಿರುದ್ದ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಬಿಬಿಎಂಪಿ ಹಣಕಾಸು ವಿಭಾಗದ ಜಂಟಿ ಆಯುಕ್ತ ವೆಂಕಟೇಶ್ ಅವರು ಸಾಕಷ್ಟು ಅವ್ಯವಹಾರ ನಡೆದಿದೆ ಎಂದು ದೂರು ದಾಖಲಿಸಿದ್ದರು, ಈ ಬಗ್ಗೆಯೂ ತನಿಖೆ ನಡೆಸಿಲ್ಲ, ಗುತ್ತಿಗೆದಾರರನ್ನು ಬದಲಾಯಿಸಲಾಗುವುದು ಎಂದು ಹೇಳಿ ಆ ಕೆಲಸವನ್ನೂ ಮಾಡದೆ ಏಕೆ ವಿಳಂಬ ಮಾಡುತ್ತಿದ್ದೀರಿ? ಬಡವರ, ಕೂಲಿ ಕಾರ್ಮಿಕರ, ನಿರ್ಗತಿಕರ ಪಾಲಿನ ಅನ್ನಕ್ಕೂ ಕನ್ನ ಹಾಕುವ ಬಿಜೆಪಿಯ ಈ ನಡೆಯನ್ನು ತೀವ್ರವಾಗಿ ಖಂಡಿಸಿದರು.

ಈ ಕೂಡಲೇ ಇಂದಿರಾ ಕ್ಯಾಂಟೀನ್‌ಗೆ ಬಾಕಿ ಉಳಿಸಿಕೊಂಡಿರುವ ಎಲ್ಲಾ ಬಿಲ್‌ಗಳನ್ನು ಹಾಗೂ ಮೂಲ ಸೌಕರ್ಯ ಅಭಿವೃದ್ಧಿಗೆ ಸರ್ಕಾರ ಗಮನ ಹರಿಸಬೇಕು ಎಂದು ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ವಸಂತ ನಗರ ವಾರ್ಡ್ ಅಧ್ಯಕ್ಷೆ ಜನನಿ ಭರತ್ ಉಪಸ್ಥಿತರಿದ್ದರು.

Related Articles

Back to top button