ಬೆಳಗಾವಿ: ಅಪಹರಣವಾದ ಮಗು ನಾಲ್ಕೇ ದಿನದಲ್ಲಿ ಪತ್ತೆ; ಅಪಹರಣಕ್ಕೆ ಕಾರಣವೇ ವಿಚಿತ್ರ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಅಥಣಿ ತಾಲೂಕಿನ ಸಂಕೋನಟ್ಟಿಯಲ್ಲಿ 2 ವರ್ಷದ ಮಗುವನ್ನು ಅಪಹರಿಸಿದ್ದ ಖತರನಾಕ್ ಗ್ಯಾಂಗ್ ನ್ನು ನಾಲ್ಕೇ ದಿನದಲ್ಲಿ ಪೊಲೀಸರು ಪತ್ತೆ ಮಾಡಿ ಮಗುವನ್ನು ರಕ್ಷಿಸಿದ್ದಾರೆ. ಮಗುವನ್ನು ಅಪಹರಿಸಿದ ಕಾರಣವೇ ವಿಚಿತ್ರವಾಗಿದೆ.
ಸಂಕೋನಟ್ಟಿಯ ಸದಾಶಿವ ಪಾರ್ಕ್ ಹತ್ತಿರ ಜೋಪಡಿಪಟ್ಟಿಯಲ್ಲಿ ವಾಸಿಸುತ್ತಿರುವ ಹುಸೇನವ್ವ ಚಿನ್ನಪ್ಪ ಬಹುರೂಪಿ ಅಲಿಯಾಸ ಬಾದಗಿ ಎನ್ನುವವರ 2 ವರ್ಷದ ಮಗು ಕಾಣೆಯಾಗಿರುವ ಕುರಿತು ಫೆ.6ರಂದು ಅಥಣಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಎಸ್ಪಿ ಲಕ್ಷ್ಮಣ ನಿಂಬರಗಿ, ಹೆಚ್ಚುವರಿ ಎಸ್ಪಿ ಅಮರನಾಥ ರಡ್ಡಿ, ಅಥಣಿ ಡಿಎಸ್ಪಿ ಎಸ್.ವಿ.ಗಿರೀಶ್, ಸಿಪಿಐ ಶಂಕರಗೌಡ ಬಸನಗೌಡರ್ ಉಸ್ತುವಾರಿಯಲ್ಲಿ ವಿಶೇಷ ತಂಡಗಳನ್ನು ರಚಿಸಲಾಗಿತ್ತು.
ಅಥಣಿ ಪಿಎಸ್ಐ ಕುಮಾರ ಹಾಡಕರ್, ಐಗಳಿ ಪಿಎಸ್ಐ ಶಿವರಾಜ ನಾಯ್ಕೋಡಿ, ಕಾಗವಾಡ ಪಿಎಸ್ಐ ಹಣಮಂತ ಧರ್ಮಟ್ಟಿ ನೇತೃತ್ವ ವಹಿಸಿದ್ದರು. ಸಿಬ್ಬಂದಿಗಳಾದ ಎ ಎ ಈರಕರ್, ಪಿ ಬಿ ನಾಯ್ಕ್, ಪಿ ಎನ್ ಕುರಿ, ಬಿ ವೈ ಮನ್ನಾಪುರ, ಜಿ.ಎಚಿ.ಹೊನವಾಡ, ಆರ್.ಸಿ.ಹಾದಿಮನಿ, ಕೆ ಬಿ ಶಿರಗೂರ, ಶಿವಕುಮಾರ ದೊಡಮನಿ, ಎಸ್ ಬಿ ಪಾಟೀಲ ತಂಡದಲ್ಲಿದ್ದರು.
ಅಪಹರಣದ ಬಗ್ಗೆ ಯಾವುದೇ ಸುಳಿವು ಇಲ್ಲದಿದ್ದರೂ ವೈಜ್ಞಾನಿಕ ತಂತ್ರಜ್ಞಾನ ಅಳವಡಿಸಿಕೊಂಡು ಮಾಹಿತಿ ಸಂಗ್ರಹಿಸಿ ಈ ಕಾರ್ಯಾಚರಣೆ ನಡೆಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಅಪಹರಣಕ್ಕೊಳಗಾದ ಬಾಲಕನನ್ನು ಸುರಕ್ಷಿತವಾಗಿ ರಕ್ಷಿಸಿದ್ದಲ್ಲದೇ ಆರೋಪಿತರಾದ ಅಥಣಿಯ ಪ್ರಶಾಂತ ಪರಸಪ್ಪ ತಂದೆ ಕೇದಾರಿ ಬಡಕಂಬಿ, ಜ್ಯೋತಿಬಾ ಸಿದ್ದಲಿಂಗಪ್ಪ ಬಂಗಿ, అనిల ರಾಮು ಬಡಕಂಬಿ, ಅವರಖೋಡದ ಜಂಬುಸಾಗರ ಅಪ್ಪಣ್ಣ ನಾಡಗೌಡ, ದೇವರಹಟ್ಟಿಯ ಕುಮಾರ ಅರ್ಜುನ ಹಿರೇಮನಿ ಇವರನ್ನು ಬಂಧಿಸಲಾಗಿದೆ.
ಕಾರಣ ಏನು?
ಅಥಣಿ ತಾಲೂಕಿನ ಮಹಿಳೆಯೊಬ್ಬರು ತನಗೆ ಗಂಡು ಮಕ್ಕಳಿಲ್ಲ, ಅನಾಥಾಶ್ರಮದಿಂದ ಮಗುವನ್ನು ತಂದುಕೊಡಿ ಎಂದು ವಿನಂತಿ ಮಾಡಿಕೊಂಡಿದ್ದರು. ಇದಕ್ಕಾಗಿ ಆರೋಪಿಗಳು 4 ಲಕ್ಷ ರೂ. ಬೇಡಿಕೆ ಇಟ್ಟಿದ್ದರು. ಕೊನೆಗೆ 2 ಲಕ್ಷ ರೂ.ಗಳಿಗೆ ಒಪ್ಪಿಕೊಂಡು ಇವರು ಮಗುವನ್ನು ಅಪಹರಿಸಿ ಆ ಮಹಿಳೆಗೆ ಒಪ್ಪಿಸಿದ್ದರು. ಅನಾಥಾಶ್ರಮದಿಂದ ಮಗುವನ್ನು ತಂದಿದ್ದಾಗಿ ಮಹಿಳೆಗೆ ತಿಳಿಸಿದ್ದರು. 2 ಲಕ್ಷ ರೂಗಳನ್ನು ಎಲ್ಲರೂ ಹಂಚಿಕೊಂಡಿದ್ದರು.
ಆರೋಪಿಗಳಿಂದ ಹಣದ ಪೈಕಿ 60500 ರೂ ಹಾಗೂ ಕೃತ್ಯಕ್ಕೆ ಬಳಸಿದ ಸ್ವಿಫ್ಟ್ ಕಾರು (ನಂ ಕೆಎ 05 ಎಎಫ್ 5098) ಹಾಗೂ ಎರ್ಟಿಗಾ ಕಾರ್ ( ನಂ ಕೆಎ 53 8 2242 ) ಇವುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಮಗುವನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳ ಸಮ್ಮುಖದಲ್ಲಿ ಹೆತ್ತ ತಾಯಿಗೆ ಒಪ್ಪಿಸಲಾಗಿದೆ.
ಅಪಹರಣವಾಗಿ ನಾಲ್ಕೇ ದಿನದಲ್ಲಿ ಪತ್ತೆ ಮಾಡಿದ್ದಕ್ಕೆ ತನಿಖಾ ತಂಡಕ್ಕೆ ಎಸ್ಪಿ ಬಹುಮಾನ ಘೋಷಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ