ಅಕಾಡೆಮಿ, ಪ್ರಾಧಿಕಾರಕ್ಕೆ ಅಗತ್ಯವಿರುವ ಅನುದಾನ ನೀಡಿಕೆಗೆ ಸಿದ್ಧ: ಸಚಿವ ಶಿವರಾಜ್ ತಂಗಡಗಿ ಭರವಸೆ
ಪ್ರಗತಿವಾಹಿನಿ ಸುದ್ದಿ: ನೂತನ ಅಕಾಡೆಮಿಗಳ ಅಧ್ಯಕ್ಷರುಗಳಿಗೆ ಕ್ರಿಯಾ ಯೋಜನೆ ಸಿದ್ಧಪಡಿಸಲು ಸೂಚಿಸಲಾಗಿದ್ದು, ಅಕಾಡೆಮಿಗಳಿಗೆ ಅಗತ್ಯವಿರುವ ಅನುದಾನ ನೀಡಲಾಗುವುದು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಶಿವರಾಜ್ ಎಸ್.ತಂಗಡಗಿ ಅವರು ಹೇಳಿದರು.
14 ಅಕಾಡೆಮಿ ಮತ್ತು 4 ಪ್ರಾಧಿಕಾರಕ್ಕೆ ನೂತನವಾಗಿ ನೇಮಕಗೊಂಡ ಅಧ್ಯಕ್ಷರು ಹಾಗೂ ಸದಸ್ಯರ ಜತೆ ಮೊದಲ ಬಾರಿಗೆ ಸಚಿವರು ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಶುಕ್ರವಾರ ಸಮಾಲೋಚನಾ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.
ಚುನಾವಣಾ ನೀತಿ ಸಂಹಿತೆ ಜಾರಿಯಾದ ಕಾರಣ ಅಕಾಡೆಮಿ, ಪ್ರಾಧಿಕಾರದ ನೂತನ ಅಧ್ಯಕ್ಷರು ಮತ್ತು ಸದಸ್ಯರ ಸಭೆ ನಡೆಸಿರಲಿಲ್ಲ. ಇದೀಗ ಎಲ್ಲರೊಂದಿಗೆ ಸಭೆ ನಡೆಸಿದ್ದೇನೆ. ಪ್ರತಿ ತಿಂಗಳು ಎರಡು ಅಕಾಡೆಮಿಗಳ ಕಾರ್ಯ ಪ್ರಗತಿ ಪರಿಶೀಲನೆ ಸಭೆ ನಡೆಸಲಾಗುತ್ತದೆ. ಅಲ್ಲದೆ, ಅಕಾಡೆಮಿಗಳು ಹಾಗೂ ಪ್ರಾಧಿಕಾರಗಳು ಕಲ್ಯಾಣ ಕರ್ನಾಟಕ ಭಾಗಗಳಲ್ಲಿ ಹೆಚ್ಚು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಸಾಮಾಜಿಕ ನ್ಯಾಯ ಪಾಲನೆಯನ್ನು ಎತ್ತಿ ಹಿಡಿಯುವ ನಿಟ್ಟಿನಲ್ಲಿ ಮುಕ್ತವಾಗಿ ಕಾರ್ಯ ನಿರ್ವಹಿಸುವಂತೆ ಸೂಚಿಸಿದ್ದೇನೆ ಎಂದು ತಿಳಿಸಿದರು.
ಕನ್ನಡ ಭಾಷೆ ಮತ್ತು ಸಂಸ್ಕೃತಿ ಬೆಳವಣಿಗೆಯಲ್ಲಿ ಪ್ರಾಧಿಕಾರ ಮತ್ತು ಅಕಾಡೆಮಿಗಳು ರಾಜೀಯಾಗದೆ ಕೆಲಸ ಮಾಡಬೇಕು ಎಂಬುದು ನಮ್ಮ ಆಶಯ. ಒಟ್ಟಾರೆ ಎಲ್ಲಾ ಅಕಾಡೆಮಿಗಳು ಚುರುಕಾಗಿ ಕೆಲಸ ಮಾಡಬೇಕೆಂದು ಸೂಚಿಸಲಾಗಿದೆ ಎಂದು ಸಚಿವರು ವಿವರಿಸಿದರು.
ಸಭೆಯಲ್ಲಿ ಹಲವು ಹಿರಿಯರು ಸಲಹೆಗಳನ್ನು ನೀಡಿದ್ದು, ಎಲ್ಲರನ್ನು ಒಟ್ಟಾಗಿ ಕರೆದೊಯ್ಯಲಾಗುವುದು. ಎಲ್ಲರೂ ಇಲಾಖೆ ಮತ್ತು ಸರ್ಕಾರದ ಘನತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕೆಲಸ ಮಾಡಲಿದ್ದಾರೆ ಎಂಬ ವಿಶ್ವಾಸವಿದೆ ಎಂದರು.
ಪ್ರತಿ ಸರ್ಕಾರದಲ್ಲೂ ಕೂಡ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರು ಅಕಾಡೆಮಿ ಹಾಗೂ ಪ್ರಾಧಿಕಾರದ ಅಧ್ಯಕ್ಷರ ಸಭೆ ನಡೆಸಿ ಬಳಿಕ ಅಲ್ಲಿಗೆ ಕೈ ಬಿಡುತ್ತಾರೆ ಎಂಬ ಆರೋಪ ಇದೆಯಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಹಿಂದಿನ ಸರ್ಕಾರದಲ್ಲಿ ಯಾವ ಮಂತ್ರಿ ಕೂಡ ಈ ರೀತಿ ಸಭೆ ನಡೆಸಿಲ್ಲ. ಇದು ಮುಂದೆಯೂ ಮುಂದುವರೆಯಲಿದೆ. ಎರಡು ವರ್ಷಗಳ ಕಾಲ ಹಿಂದಿನ ಸರ್ಕಾರದ ಅವಧಿಯಲ್ಲಿ ಯಾವುದೇ ಚಟುವಟಿಕೆ ನಡೆದಿಲ್ಲ. ನಮ್ಮ ಸರ್ಕಾರದ ಬಂದ ಚಟುವಟಿಕೆಗಳು ವೇಗ ಪಡೆದುಕೊಂಡಿದೆ ಎಂದು ಉತ್ತರಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉತ್ತರ ಕರ್ನಾಟಕ ಭಾಗಕ್ಕೆ ಆದ್ಯತೆ ಕೊಡುವುದಿಲ್ಲ ಎನ್ನುತ್ತಾರಲ್ಲ ಎಂಬ ಪ್ರಶ್ನೆಗೆ ನಾನು ಕಲ್ಯಾಣ ಕರ್ನಾಟಕ ಭಾಗದವನಾಗಿದ್ದು, ಈ ಭಾರಿ ಅಕಾಡೆಮಿ ಮತ್ತು ಪ್ರಾಧಿಕಾರದಲ್ಲಿ ಕಲ್ಯಾಣ ಕರ್ನಾಟಕ ಭಾಗಕ್ಕೆ ಹೆಚ್ಚು ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದರು.
ಶೀಘ್ರ ಸಮನ್ವಯ ಸಮಿತಿ ರಚನೆ
ಬಸವಣ್ಣ ಅವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಣೆ ಮಾಡಿದ ಹಿನ್ನೆಲೆಯಲ್ಲಿ ಅವರ ತತ್ವ ಸಿದ್ದಾಂತವನ್ನು ಪ್ರಚಾರಪಡಿಸಲು ಹಾಗೂ ಕರ್ನಾಟಕ ಎಂದು ಹೆಸರಿಟ್ಟು 50 ವರ್ಷದ ತುಂಬಿದ ಹಿನ್ನೆಲೆಯಲ್ಲಿ ಅನುಷ್ಠಾನಗೊಳಿಸಬೇಕಾದ ಕಾರ್ಯಕ್ರಮಗಳನ್ನು ರೂಪಿಸಲು ಅಕಾಡೆಮಿಗಳ ಅಧ್ಯಕ್ಷರು ಹಾಗೂ ಸದಸ್ಯರನ್ನೊಳಗೊಂಡ ಸಮನ್ವಯ ಸಮಿತಿ ರಚನೆ ಮಾಡಲಾಗುವುದು ಎಂದು ಇದೇ ವೇಳೆ ಸಚಿವ ಶಿವರಾಜ್ ತಂಗಡಗಿ ಅವರು ಹೇಳಿದರು.
ಸಭೆಯಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಮಾನಸ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ್ ಬಿಳಿಮಲೆ, ಗಡಿ ಅಭಿವೃದ್ಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನ ಮರದ, ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಅಧ್ಯಕ್ಷ ಚನ್ನಪ್ಪ ಕಟ್ಟಿ, ನಾಟಕ ಅಕಾಡೆಮಿ ಅಧ್ಯಕ್ಷ ಕೆ.ವಿ.ನಾಗರಾಜ್ ಮೂರ್ತಿ, ಇಲಾಖಾ ಕಾರ್ಯದರ್ಶಿ ಅಜಯ್ ನಾಗಭೂಷಣ್, ನಿರ್ದೇಶಕಿ ಡಾ.ಧರಣಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು.
ಸಚಿವರ ನಡೆಗೆ ಸಾಹಿತಿಗಳಿಂದ ಶ್ಲಾಘನೆ
ಅಕಾಡೆಮಿ ಮತ್ತು ಪ್ರಾಧಿಕಾರಿಗಳ ನೂತನ ಅಧ್ಯಕ್ಷರು ಹಾಗೂ ಸದಸ್ಯರ ಸಭೆ ಕರೆದು ಅಭಿನಂದನೆ ಸಲ್ಲಿಸಿ ಸಮಾಲೋಚನಾ ಸಭೆ ನಡೆಸಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರ ನಡೆಗೆ ಸಾಹಿತಿಗಳು ಒಕ್ಕೊರಲಿನಿಂದ ಶ್ಲಾಘನೆ ವ್ಯಕ್ತಪಡಿಸಿದರು.
ನಾಟಕ ಅಕಾಡೆಮಿ ಅಧ್ಯಕ್ಷ ಕೆ.ವಿ.ನಾಗರಾಜ್ ಮೂರ್ತಿ ಅವರು ಮಾತನಾಡಿ, ಯಾವುದೇ ಸರ್ಕಾರ ಅಥವಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾದವರೂ ಅಕಾಡೆಮಿ ಅಧ್ಯಕ್ಷರು ನೇಮಕವಾದ ಬಳಿಕ ಈ ರೀತಿ ಸಭೆ ಕರೆದಿಲ್ಲ. ಈ ರೀತಿ ನಮ್ಮನ್ನು ಕರೆದು ಸಭೆ ನಡೆಸುವ ಮೂಲಕ ಹೊಸ ಕಳೆ ತಂದು ಕೊಡುವ ಕೆಲಸ ಮಾಡಿದ್ದೀರಿ. ಸಾಂಸ್ಕೃತಿಕ ನೀತಿ ನಿಮ್ಮ ಅವಧಿಯಲ್ಲಿ ಜಾರಿಯಾಗಲಿ ಎಂದು ಹೇಳಿದರು.
ಇನ್ನು ತುಳು ಅಕಾಡೆಮಿ ಅಧ್ಯಕ್ಷ ತಾರನಾಥ್ ಮಾತನಾಡಿ, ಇಷ್ಟು ಜನರನ್ನು ಒಟ್ಟಿಗೆ ಸೇರಿಸಿರುವುದು ಸಚಿವರು ಎಷ್ಟು ಮುಕ್ತ ಹಾಗೂ ಗಟ್ಟಿ ಇದ್ದಾರೆ ಎಂಬುದಕ್ಕೆ ಸಾಕ್ಷಿ. ಈ ರೀತಿ ಎಲ್ಲರನ್ನೂ ಒಂದೆಡೆ ಸೇರಿಸಿದ ಸಚಿವರಿಗೆ ಧನ್ಯವಾದ ತಿಳಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ