ಎಸಿಬಿ ಬಲೆಗೆ ಬಿದ್ದ ಮುರಗೋಡದ ಸಬ್ ರಿಜಿಸ್ಟ್ರಾರ್ ಮತ್ತು ಬಾಂಡ್ ರೈಟರ್
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಪಿತ್ರಾರ್ಜಿತ ಆಸ್ತಿ ಪರಭಾರೆಗೆ ಸಂಬಂಧಪಟ್ಟ ದಾಖಲಾತಿಗಳನ್ನು ನೀಡಲು ರೂ.೪,೦೦೦ ಲಂಚ ಕೇಳಿದ ಸವದತ್ತಿ ತಾಲೂಕು ಮುರಗೋಡದ ಸಬ್ ರಿಜಿಸ್ಟ್ರಾರ್ ಮತ್ತು ಲಂಚವನ್ನು ಸ್ವೀಕರಿಸಿದ ಬಾಂಡ್ ರೈಟರ್ ಇಬ್ಬರೂ ಬುಧವಾರ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ)ದ ಬಲೆಗೆ ಬಿದ್ದಿದ್ದಾರೆ.
ಆರೋಪಿಗಳಾದ ಸಬ್ ರಿಜಿಸ್ಟ್ರಾರ್ ಸಂಜೀವ ವೀರಭದ್ರ ಕಪಾಲಿ ಹಾಗೂ ಸ್ಥಳೀಯ ಬಾಂಡ್ ರೈಟರ್ ಶಿವಯೋಗಿ ಶಂಕರಯ್ಯ ಮಲ್ಲಯ್ಯನವರ ಇಬ್ಬರನ್ನೂ ಎಸಿಬಿ ವಶಕ್ಕೆ ಪಡೆದು ಮುಂದಿನ ತನಿಖೆ ಕೈಗೊಂಡಿದೆ.
ಮೊದಲ ಆರೋಪಿ ಸಂಜೀವ ಕಪಾಲಿ ದಾಖಲೆ ಪತ್ರಗಳನ್ನು ನೀಡಲು ವಿನಾಕಾರಣ ವಿಳಂಬ ಧೋರಣೆ ಅನುಸರಿಸುತ್ತಿದ್ದಲ್ಲದೆ, ಕೇಳಿದಾಗ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈ ಕುರಿತಂತೆ ಶಿವಪ್ಪ ವರಗಣ್ಣವರ ಎಂಬವರು ಎಸಿಬಿಗೆ ದೂರು ನೀಡಿದ್ದರು.
ದೂರಿನ ಆಧಾರದಲ್ಲಿ ದಾಳಿ ನಡೆಸಿದ ಅಧಿಕಾರಿಗಳು, ಲಂಚ ಪಡೆಯುವ ಸಂದರ್ಭದಲ್ಲಿ ರೆಡ್ ಹ್ಯಾಂಡ್ ಆಗಿ ಆರೋಪಿಗಳನ್ನು ಹಿಡಿದು ಬಂಧಿಸಿದ್ದಾರೆ. ಎಸಿಬಿ (ಉತ್ತರ ವಲಯ) ಎಸ್ಪಿ ಬಿ.ಎಸ್.ನೇಮಗೌಡ ಮಾರ್ಗದರ್ಶನದಲ್ಲಿ ಮತ್ತು ಡಿವೈಎಸ್ಪಿ ಕರುಣಾಕರಶೆಟ್ಟಿ ನೇತೃತ್ವದಲ್ಲಿ ಇನಸ್ಪೆಕ್ಟರ್ ಎ.ಎಸ್.ಗುದಿಗೊಪ್ಪ ಮತ್ತು ಸಿಬ್ಬಂದಿಯಿಂದ ದಾಳಿಯನ್ನು ನಡೆಸಲಾಯಿತು.
ಬೆಳಗಾವಿ: ಭೂಸ್ವಾಧೀನ ಅಧಿಕಾರಿಗಳ ಕಚೇರಿ ಮೇಲೆ ಎಸಿಬಿ ದಾಳಿ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ