CrimeKannada NewsKarnataka NewsPolitics

*ಕ್ರಿಮಿನಲ್ ಪ್ರಕರಣ ಕೈಬಿಡಲು ಲಂಚ ಸ್ವೀಕಾರ: ಲೋಕಾ ಬಲೆಗೆ ಬಿದ್ದ ಇನ್ಸ್‌ಪೆಕ್ಟರ್*

ಪ್ರಗತಿವಾಹಿನಿ ಸುದ್ದಿ: ಕ್ರಿಮಿನಲ್ ಪ್ರಕರಣವೊಂದರ ಆರೋಪಿಗಳನ್ನು ಬಂಧಿಸದಿರಲು ಮತ್ತು ಪ್ರಕರಣದಿಂದ ಕೈಬಿಡಲು ಹಣಕ್ಕೆ ಬೇಡಿಕೆಯಿಟ್ಟು ಹಣ ಪಡೆಯುವ ವೇಳೆ ಇನ್ಸ್‌ಪೆಕ್ಟರ್ ರೆಡ್ ಹ್ಯಾಂಡೆಡ್ ಆಗಿ ಲೋಕಾಯುಕ್ತ ಬಲೆಗೆ ಬಿದ್ದಿರುವ ಘಟನೆ ನಡೆದಿದೆ.

ಯಾದಗಿರಿ ಜಿಲ್ಲೆಯ ಗುರುಮಠಕಲ್ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ವೀರಣ್ಣ ದೊಡ್ಡಮನಿ ಕ್ರಿಮಿನಲ್ ಪ್ರಕರಣವೊಂದರ ಆರೋಪಿಗಳನ್ನು ಬಂಧಿಸದಿರಲು ಮತ್ತು ಪ್ರಕರಣದಿಂದ ಕೈಬಿಡಲು ಹಣಕ್ಕೆ ಬೇಡಿಕೆಯಿಟ್ಟಿದ್ದ ಸಂದರ್ಭದಲ್ಲಿ ಈ ದಾಳಿ ನಡೆದಿದೆ. ಇನ್ಸ್‌ಪೆಕ್ಟರ್ ಒಬ್ಬರು​ ಬರೋಬ್ಬರಿ ಒಂದು ಲಕ್ಷ ರೂ. ಲಂಚ ಪಡೆಯುವಾಗ ರೆಡ್​ ಹ್ಯಾಂಡೆಡ್ ಆಗಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.

Home add -Advt

ಗುರುಮಠಕಲ್ ತಾಲೂಕಿನ ಗೋಪಾಳಪುರ ಗ್ರಾಮದ ಆನಂದ್ ಎಂಬುವವರ ವಿರುದ್ಧ ಜಾತಿ ನಿಂದನೆ ಪ್ರಕರಣವೊಂದು ದಾಖಲಾಗಿತ್ತು. ಈ ಕೇಸ್​ನಲ್ಲಿ ಅವರನ್ನು ಬಂಧಿಸದೆ ಇರಲು ಮತ್ತು ಇನ್ನೊಂದು ಕೇಸ್‌ನಲ್ಲಿ ಅವರ ಹೆಸರನ್ನು ಕೈಬಿಡಲು ಪಿಐ ವೀರಣ್ಣ ದೊಡ್ಡಮನಿ ಅವರು ಲಂಚಕ್ಕೆ ಬೇಡಿಕೆಯಿಟ್ಟಿದ್ದರು ಎಂದು ಆನಂದ್ ದೂರು ನೀಡಿದ್ದಾರೆ. 

ಈ ಎರಡು ಪ್ರಕರಣಗಳ ಇತ್ಯರ್ಥಕ್ಕಾಗಿ ಒಟ್ಟು ಒಂದು ಲಕ್ಷ ರೂಪಾಯಿ ಹಣವನ್ನು ಪಡೆಯುವ ಒಪ್ಪಂದವಾಗಿತ್ತು ಎಂದು ಅವರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಗುರುಮಠಕಲ್‌ನ ಪೊಲೀಸ್ ವಸತಿ ಗೃಹದಲ್ಲಿ ಆನಂದ್ ಅವರಿಂದ ಒಂದು ಲಕ್ಷ ರೂಪಾಯಿ ಲಂಚದ ಹಣವನ್ನು ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಅಧಿಕಾರಿಗಳು ಹಠಾತ್ ದಾಳಿ ನಡೆಸಿದ್ದಾರೆ. ಲಂಚದ ಹಣದೊಂದಿಗೆ ಇನ್ಸ್‌ಪೆಕ್ಟರ್ ವೀರಣ್ಣ ಬಲೆಗೆ ಬೀಳಿಸುವಲ್ಲಿ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ. 

ಲೋಕಾಯುಕ್ತ ಡಿವೈಎಸ್‌ಪಿ ಜಾಕೀರ್ ಇನಾಂದಾರ್ ಅವರ ನೇತೃತ್ವದ ತಂಡ ಈ ದಾಳಿಯನ್ನು ನಡೆಸಿದೆ. ಸದ್ಯ ಆರೋಪಿ ಇನ್ಸ್‌ಪೆಕ್ಟರ್ ವೀರಣ್ಣ ದೊಡ್ಡಮನಿಯನ್ನು ವಶಕ್ಕೆ ಪಡೆಯಲಾಗಿದ್ದು, ಭ್ರಷ್ಟಾಚಾರ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಳ್ಳಲಾಗಿದೆ.

Related Articles

Back to top button