
ಪ್ರಗತಿವಾಹಿನಿ, ಸುದ್ದಿ: ಕಲಬುರಗಿಯ ಖಾಜಾ ಬಂದೇ ನವಾಜ್ ದರ್ಗಾದಲ್ಲಿ ನಡೆಯುತ್ತಿದ್ದ ಧಾರ್ಮಿಕ ಕಾರ್ಯಕ್ರಮಕ್ಕೆ ಬಾಗಲಕೋಟೆಯಿಂದ ಆಗಮಿಸುತ್ತಿದ್ದವರ ವಾಹನವೊಂದು ಅಪಘಾತಕ್ಕೀಡಾಗಿ ಐದು ಮಂದಿ ಸಾವನ್ನಪ್ಪಿದ್ದಾರೆ. 15 ಕ್ಕೂ ಹೆಚ್ಚು ಮಂದಿ ಇದ್ದ ಟಿಟಿ ವಾಹನದಲ್ಲಿ ಹಲವರು ಗಾಯಗೊಂಡಿದ್ದಾರೆ.
ಮಾಲನ್ (52), ವಾಜೀದ್ (20), ಮೆಹಬೂಬ್ ಬೀ(53), ಮೆಹಬೂಬ್ (29) ಹಾಗೂ ಪ್ರಿಯಾಂಕಾ (13) ಮೃತ ದುರ್ದೈವಿಗಳು. ಪಂಚರ್ ಆಗಿ ರಸ್ತೆ ಬದಿಯಲ್ಲಿ ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದು ಈ ಅವಘಡ ಸಂಭವಿಸಿದೆ. ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದು ಓರ್ವರು ಆಸ್ಪತ್ರೆಗೆ ಕೊಂಡೊಯ್ಯುವ ಮಾರ್ಗಮಧ್ಯದಲ್ಲಿ ಮೃತಪಟ್ಟಿದ್ದಾರೆ.
ಗಾಯಗೊಂಡವರನ್ನು ಕಲಬುರಗಿ ಹಾಗೂ ಜೇವರ್ಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ನೆಲೋಗಿ ಠಾಣೆಯ ಪೊಲೀಸರು ಸ್ಥಳಕ್ಕೆ ಆಗಮಿಸಿ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.