Kannada NewsKarnataka NewsLatest

*40 ವರ್ಷ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿದ್ದ ಆರೋಪಿ*: *‘ಬಾಬಾ’ ಆಗಿ ಬದುಕುತ್ತಿದ್ದವ ಕೊನೆಗೂ ಅರೆಸ್ಟ್!*

ಪ್ರಗತಿವಾಹಿನಿ ಸುದ್ದಿ: ಹೆಸರು ಬದಲಿಸಿಕೊಂಡು, ವೇಷ ಬದಲಿಸಿಕೊಂಡು ಬರೋಬ್ಬರಿ ನಾಲ್ಕು ದಶಕಗಳ ಕಾಲ ಪೊಲೀಸರ ಕಣ್ತಪ್ಪಿಸಿದ್ದ ಆರೋಪಿ ಕೊನೆಗೂ ಸಿಕ್ಕಿಬಿದ್ದಿದ್ದಾನೆ. ದರೋಡೆ ಮತ್ತು ಕೊಲೆ ಯತ್ನ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾಗಿದ್ದ ವ್ಯಕ್ತಿ, ಇಷ್ಟು ವರ್ಷಗಳ ಕಾಲ ಸಾಧುವಿನ ವೇಷದಲ್ಲಿ ಆಶ್ರಮ ನಡೆಸುತ್ತಿದ್ದ ಎಂಬುದು ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

1986ರಲ್ಲಿ ದರೋಡೆ ಮತ್ತು ಕೊಲೆ ಯತ್ನ ಪ್ರಕರಣದಲ್ಲಿ 70 ವರ್ಷದ ರಾಮಪ್ರಕಾಶ್‌ಗೆ 10 ವರ್ಷ ಜೈಲು ಶಿಕ್ಷೆ ವಿಧಿಸಲಾಗಿತ್ತು. ಬಳಿಕ ಹೈಕೋರ್ಟ್‌ನಿಂದ ಜಾಮೀನು ಪಡೆದು ಹೊರಬಂದ ರಾಮಪ್ರಕಾಶ್, ನ್ಯಾಯಾಲಯಕ್ಕೆ ಮತ್ತೆ ಹಾಜರಾಗದೆ ತಲೆಮರೆಸಿಕೊಂಡಿದ್ದ.

ಆ ಬಳಿಕ ಸುಮಾರು 40 ವರ್ಷಗಳ ಕಾಲ ರಾಮಪ್ರಕಾಶ್ ಪೊಲೀಸರಿಗೆ ಸಿಗದೆ ಜೀವನ ನಡೆಸಿದ್ದ. ಈ ಅವಧಿಯಲ್ಲಿ ಬರೆಲಿಯ ಗಜ್ನೇರಾ ಗ್ರಾಮದ ಬಳಿಯ ಅರಣ್ಯ ಪ್ರದೇಶದಲ್ಲಿ ಆಶ್ರಮ ಮಾಡಿಕೊಂಡು ವಾಸಿಸುತ್ತಿದ್ದ.

ಅಲ್ಲಿ ತನ್ನ ಗುರುತನ್ನೇ ಬದಲಿಸಿಕೊಂಡಿದ್ದ ರಾಮಪ್ರಕಾಶ್, ‘ಪಾಗಲ್ದಾಸ್ ಬಾಬಾ’ ಎಂಬ ಹೆಸರಿನಲ್ಲಿ ಸಾಧುವಿನ ವೇಷ ಧರಿಸಿದ್ದ. ಸುತ್ತಮುತ್ತಲಿನ ಗ್ರಾಮಗಳಲ್ಲೂ ಈತನಿಗೆ ಅನುಯಾಯಿಗಳಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಆದರೆ ಇಷ್ಟು ವರ್ಷಗಳ ಬಳಿಕ ಹಳೆಯ ಪ್ರಕರಣದ ಸುಳಿವು ಸಿಕ್ಕಿದ್ದು ಸಾಮಾಜಿಕ ಜಾಲತಾಣದ ಮೂಲಕ. ರಾಮಪ್ರಕಾಶ್‌ನ ಹಳೆಯ ಪರಿಚಯಸ್ಥರಿಂದ ಮಾಹಿತಿ ಪಡೆದ ಪೊಲೀಸರು ಆತನ ಚಲನವಲನದ ಬಗ್ಗೆ ಪರಿಶೀಲನೆ ಆರಂಭಿಸಿದ್ದರು.

ಈ ವೇಳೆ ಸಾಮಾಜಿಕ ಜಾಲತಾಣದಲ್ಲಿ ‘ಪಾಗಲ್ದಾಸ್ ಬಾಬಾ’ ಹೆಸರಿನಲ್ಲಿ ಹರಿದಾಡುತ್ತಿದ್ದ ವಿಡಿಯೋ ಪೊಲೀಸರ ಗಮನ ಸೆಳೆದಿದೆ. ವಿಡಿಯೋದಲ್ಲಿದ್ದ ವ್ಯಕ್ತಿಯ ಗುರುತು ಮತ್ತು ಹಳೆಯ ಪ್ರಕರಣದ ಆರೋಪಿಯ ಮಾಹಿತಿಯನ್ನು ಹೋಲಿಕೆ ಮಾಡಿದ ಬಳಿಕ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ.

ತನಿಖೆಯ ನಂತರ ಬರೆಲಿಯಲ್ಲಿರುವ ಆಶ್ರಮದ ಸ್ಥಳವನ್ನು ಪತ್ತೆಹಚ್ಚಿದ ಪೊಲೀಸರು ಕಾರ್ಯಾಚರಣೆ ನಡೆಸಿ ರಾಮಪ್ರಕಾಶ್‌ನನ್ನು ಬಂಧಿಸಿದ್ದಾರೆ. ಬಳಿಕ ಕಾನೂನು ಪ್ರಕ್ರಿಯೆ ಮುಂದುವರಿಸಿ ಕಾನ್ಪುರಕ್ಕೆ ಕರೆತಂದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ನಾಲ್ಕು ದಶಕಗಳ ಕಾಲ ಹೆಸರು ಮತ್ತು ವೇಷ ಬದಲಿಸಿಕೊಂಡು ಪೊಲೀಸರಿಂದ ತಪ್ಪಿಸಿಕೊಂಡಿದ್ದ ಆರೋಪಿಯ ಪತ್ತೆಗೆ ಸಾಮಾಜಿಕ ಜಾಲತಾಣದ ವಿಡಿಯೋ ಪ್ರಮುಖ ಸುಳಿವಾಗಿ ಪರಿಣಮಿಸಿದೆ. 1986ರಿಂದ ಬಾಕಿ ಉಳಿದಿದ್ದ ಪ್ರಕರಣ ಇದೀಗ ಮತ್ತೆ ನ್ಯಾಯಾಂಗ ಪ್ರಕ್ರಿಯೆಗೆ ಬಂದಿದೆ.

*ನಂದಿನಿ ಹಾಲಿನ ದರ ಏರಿಕೆಗೆ ಸಂಪುಟ ಸಮ್ಮತಿ*: *ಅ.27ರ ಬಳಿಕ ಹೊಸ ದರ ಜಾರಿ ಸಾಧ್ಯತೆ* – Pragati Vahini

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button