Kannada NewsKarnataka NewsLatest

*ನಂದಿನಿ ಹಾಲಿನ ದರ ಏರಿಕೆಗೆ ಸಂಪುಟ ಸಮ್ಮತಿ*: *ಅ.27ರ ಬಳಿಕ ಹೊಸ ದರ ಜಾರಿ ಸಾಧ್ಯತೆ*

ಪ್ರಗತಿವಾಹಿನಿ ಸುದ್ದಿ: ರಾಜ್ಯದ ಜನತೆಗೆ ಮತ್ತೊಂದು ಬೆಲೆ ಏರಿಕೆಯ ಹೊರೆ ಬೀಳುವ ಸಾಧ್ಯತೆ ಎದುರಾಗಿದೆ. ಕೆಎಂಎಫ್‌ ನಂದಿನಿ ಹಾಲಿನ ದರ ಹೆಚ್ಚಳಕ್ಕೆ ರಾಜ್ಯ ಸಚಿವ ಸಂಪುಟ ಸಮ್ಮತಿ ನೀಡಿದ್ದು, ಸದ್ಯ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ಅಕ್ಟೋಬರ್ 27ರ ಬಳಿಕ ಪರಿಷ್ಕೃತ ದರ ಜಾರಿಗೆ ಬರುವ ಸಾಧ್ಯತೆ ಇದೆ.

ಮಂಗಳವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ನಂದಿನಿ ಹಾಲಿನ ದರ ಏರಿಕೆ ಸೇರಿದಂತೆ ಹಲವು ವಿಚಾರಗಳ ಕುರಿತು ಚರ್ಚೆ ನಡೆದಿದೆ. ಹಾಲು ಒಕ್ಕೂಟಗಳು ದರ ಹೆಚ್ಚಳಕ್ಕೆ ಹಲವು ಹಂತಗಳಲ್ಲಿ ಮನವಿ ಸಲ್ಲಿಸಿದ್ದವು.

ಕರ್ನಾಟಕದ 16 ಹಾಲು ಒಕ್ಕೂಟಗಳು ಹಾಲಿನ ದರ ಹೆಚ್ಚಳಕ್ಕೆ ಪ್ರಸ್ತಾವನೆ ಸಲ್ಲಿಸಿವೆ. ಹೈನುಗಾರಿಕೆ ವೆಚ್ಚ, ಪಶು ಆಹಾರದ ದರ ಹಾಗೂ ಹಾಲು ಸಂಗ್ರಹಣೆಯ ವೆಚ್ಚ ಹೆಚ್ಚಳ ಸೇರಿದಂತೆ ವಿವಿಧ ಕಾರಣಗಳನ್ನು ಉಲ್ಲೇಖಿಸಿ ದರ ಪರಿಷ್ಕರಣೆಗೆ ಒತ್ತಾಯಿಸಲಾಗಿದೆ.

ಸದ್ಯ ಒಕ್ಕೂಟಗಳ ಬೇಡಿಕೆ ಪ್ರತಿ ಲೀಟರ್‌ಗೆ ಸುಮಾರು 8ರಿಂದ 10 ರೂಪಾಯಿ ಹೆಚ್ಚಳದತ್ತ ಇದೆ. ಈ ಕುರಿತು ಅಂತಿಮವಾಗಿ ಎಷ್ಟು ಹೆಚ್ಚಳ ಮಾಡಬೇಕು ಎಂಬ ನಿರ್ಧಾರವನ್ನು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ವಿವೇಚನೆಗೆ ಬಿಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ಹಾಲಿನ ದರ ಏರಿಕೆ ಕುರಿತು ಈ ಹಿಂದೆ ಮಾತನಾಡಿದ್ದ ಸಿಎಂ, ಹಾಲು ಒಕ್ಕೂಟಗಳು ₹12ರಷ್ಟು ಹೆಚ್ಚಳಕ್ಕೆ ಮನವಿ ಮಾಡಿವೆ ಎಂದು ತಿಳಿಸಿದ್ದರು. ರೈತರು ಹಾಗೂ ಹಾಲು ಒಕ್ಕೂಟಗಳ ಆರ್ಥಿಕ ಒತ್ತಡವನ್ನು ಗಮನದಲ್ಲಿಟ್ಟುಕೊಂಡು ಸಂಪುಟದಲ್ಲಿ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳುವುದಾಗಿ ಹೇಳಿದ್ದರು.

ಇದೀಗ ಸಿಎಂ ₹8ರಷ್ಟು ಹೆಚ್ಚಳಕ್ಕೆ ಒಲವು ಹೊಂದಿದ್ದಾರೆ ಎಂಬ ಮಾಹಿತಿ ಹರಿದಾಡುತ್ತಿದೆ. ಆದರೆ ಅಂತಿಮವಾಗಿ ಎಷ್ಟು ರೂಪಾಯಿ ದರ ಹೆಚ್ಚಳವಾಗಲಿದೆ ಎಂಬುದು ಸರ್ಕಾರದ ಅಧಿಕೃತ ನಿರ್ಧಾರದ ಬಳಿಕವಷ್ಟೇ ಸ್ಪಷ್ಟವಾಗಲಿದೆ.

ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವ ಕಾರಣ ತಕ್ಷಣವೇ ಹೊಸ ದರ ಜಾರಿಗೆ ತರುವ ಸಾಧ್ಯತೆ ಕಡಿಮೆ. ನೀತಿ ಸಂಹಿತೆ ಮುಗಿದ ಬಳಿಕ ಅಕ್ಟೋಬರ್ 27ರ ನಂತರ ಪರಿಷ್ಕೃತ ದರ ಜಾರಿಗೆ ಬರುವ ಸಾಧ್ಯತೆ ಇದೆ. ನಂದಿನಿ ಹಾಲಿನ ದರ ಏರಿಕೆಯಾದರೆ ಗ್ರಾಹಕರಿಗೆ ಹೆಚ್ಚುವರಿ ಹೊರೆ ಬೀಳಲಿದ್ದು, ಮತ್ತೊಂದೆಡೆ ಹೈನುಗಾರರಿಗೆ ಹೆಚ್ಚಿನ ದರ ನೀಡುವ ಮೂಲಕ ಹಾಲು ಸಂಗ್ರಹಣೆಯನ್ನು ಹೆಚ್ಚಿಸುವ ಉದ್ದೇಶ ಸರ್ಕಾರದ ಮುಂದಿದೆ. ಅಂತಿಮ ದರದ ಘೋಷಣೆಗಾಗಿ ಇದೀಗ ಗ್ರಾಹಕರು ಹಾಗೂ ಹೈನುಗಾರರ ಗಮನ ಸರ್ಕಾರದತ್ತ ನೆಟ್ಟಿದೆ.

*‘ನಾನೇ ಹ್ಯಾಂಡಲ್ ಮಾಡ್ತೀನಿ ಎಂದ ಮೇಲೆ ನಾವೇಕೆ ಹೇಳಬೇಕು?’*: *ಎಸ್‌ಪಿಗೆ ನೋಟಿಸ್ ವಿಚಾರದಲ್ಲಿ ರೇವಣ್ಣ ಲೇವಡಿ* – Pragati Vahini

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button