Kannada NewsKarnataka NewsLatestPolitics

*ಅಚ್ಛರಿ:ಇದು ನೂತನ ಸಚಿವರ ಪಟ್ಟಿಯೋ? ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ಪಟ್ಟಿಯೋ?*

‎ಪ್ರಗತಿವಾಹಿನಿ ಸುದ್ದಿ, ಬೆಂಗಳೂರು : ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ನೇಮಕ ಎಂದು 20 ಶಾಸಕರ ಪಟ್ಟಿಯೊಂದು ವೈರಲ್ ಆಗಿದ್ದು, ಇದು ಸೋಮವಾರ ಪ್ರಮಾಣ ವಚನ ಸ್ವೀಕರಿಸಲಿರುವ ನೂತನ ಸಚಿವರ ಪಟ್ಟಿಯೇ ಎನ್ನುವ ಅನುಮಾನ ದಟ್ಟವಾಗಿದೆ.

ಆಗಸ್ಟ್ 1, 2026ರಂದು ಕಾಂಗ್ರೆಸ್ ಸಂಘಟನಾ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ ಸಹಿ ಮಾಡಿರುವ ಇಂಡಿಯನ್ ನ್ಯಾಷನಲ್ ಕಾಂಗ್ರೆಸ್‌ನ ಜಿಲ್ಲಾ ಅಧ್ಯಕ್ಷರ ಪಟ್ಟಿ ಎಂದು ಉಲ್ಲೇಖಿಸಲಾಗಿದ್ದು, ಈ ಪಟ್ಟಿಯ ಕುರಿತು ಹಲವು ಅನುಮಾನ ಉಂಟಾಗಿದೆ.

ಇದು ಶನಿವಾರ ಪ್ರಗತಿವಾಹಿನಿ ಪ್ರಕಟಿಸಿರುವ ಸಂಭಾವ್ಯ ಪಟ್ಟಿಯಲ್ಲಿರುವ ಹೆಸರುಗಳನ್ನೇ ಒಳಗೊಂಡಿದೆ. ( https://pragativahini.com/cabinet-expansion-likely-on-monday-opportunity-for-many-new-faces/ )
‎
‎ಈ ಪ್ರಕಟಣೆಯ ಪ್ರಕಾರ, ಕಲಬುರಗಿ ಜಿಲ್ಲೆಗೆ ಧರ್ಮಾಂಗ್, ವಿಜಯಪುರದಲ್ಲಿ ಶಿವಾನಂದ ಪಾಟೀಲ, ಬೆಂಗಳೂರು ಗ್ರಾಮಾಂತರದಲ್ಲಿ ಶರತ್ ಬಚ್ಚೇಗೌಡ, ಬೆಂಗಳೂರಿನಲ್ಲಿ ರಿಜ್ವಾನ್ ಅರ್ಷದ್, ಕೊಡಗಿನಲ್ಲಿ ಎ.ಎಸ್. ಪೊನ್ನಣ್ಣ, ದಾವಣಗೇರೆಯಲ್ಲಿ ಎನ್.ಎನ್. ಮಲ್ಲಿಕಾರ್ಜುನ, ಬೆಳಗಾವಿಯಲ್ಲಿ ಲಕ್ಷ್ಮಣ ಸವದಿ, ಚಿತ್ರದುರ್ಗದಲ್ಲಿ ರಘುಮೂರ್ತಿ, ಬಳ್ಳಾರಿಯಲ್ಲಿ ಅನ್ನಪೂರ್ಣ ತುಕಾರಾಂ, ಮೈಸೂರಿನಲ್ಲಿ ತನ್ವೀರ್ ಸೇಠ್, ಬಾಗಲಕೋಟೆಯಲ್ಲಿ ವಿಜಯಾನಂದ ಕಾಶಪ್ಪನವರ, ಚಾಮರಾಜನಗರದಲ್ಲಿ ಪುಟ್ಟರಂಗ ಶೆಟ್ಟಿ, ಹಾವೇರಿಯಲ್ಲಿ ರುದ್ರಪ್ಪ ಲಮಾಣಿ, ಬೆಂಗಳೂರು ನಗರದಲ್ಲಿ ಅನೆಕಲ್ ಶಿವಣ್ಣ, ಮಂಡ್ಯದಲ್ಲಿ ಚೆಲುವರಾಯಸ್ವಾಮಿ, ಧಾರವಾಡದಲ್ಲಿ ಸಂತೋಷ್ ಲಾಡ್, ಹಾಸನದಲ್ಲಿ ಶಿವಲಿಂಗೇಗೌಡ, ಕೋಲಾರದಲ್ಲಿ ಬಂಗಾರಪೇಟೆ ನಾರಾಯಣಸ್ವಾಮಿ, ಬೆಂಗಳೂರಿನಲ್ಲಿ ಜಮೀರ್ ಅಹ್ಮದ್ ಖಾನ್ ಹಾಗೂ ಬೆಳಗಾವಿಯಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್ ಅವರನ್ನು ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾಗಿ ನೇಮಕ ಮಾಡಲಾಗಿದೆ ಎಂದು ತಿಳಿಸಲಾಗಿದೆ.

ಎಐಸಿಸಿ ಸಂಘಟನಾ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರ ಸಹಿ ಇದೆ. ಆದರೆ ಈ ಪಟ್ಟಿಯ ಬಗ್ಗೆ ದಟ್ಟ ಅನುಮಾನಗಳಿವೆ. ಇದೊಂದು ಫೇಕ್ ಪಟ್ಟಿ ಇರಬಹುದು ಎನ್ನುವ ಒಂದು ಅನುಮಾನವಾದರೆ, ಪ್ರಮಾಣ ವಚನ ಸ್ವೀಕರಿಸಲಿರುವ ಸಚಿವರ ಪಟ್ಟಿಯನ್ನು ಮಿಸ್ ಗೈಡ್ ಮಾಡುವ ಉದ್ದೇಶದಿಂದಲೇ ಈ ರೀತಿ ಮಾಡಲಾಗಿದೆಯೇ ಎನ್ನುವ ಅನುಮಾನ ಮತ್ತೊಂದು ಕಡೆ ಇದೆ.

ಇದನ್ನು ಬೇರೆ ರೀತಿ ತರ್ಕಿಸುವುದಾದಲ್ಲಿ, ಸೋಮವಾರ ಪ್ರಮಾಣ ವಚನ ಸ್ವೀಕರಿಸಲಿರುವ ಸಚಿವರಿಗೇ 2028ರ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲಾಧ್ಯಕ್ಷರ ಜವಾಬ್ದಾರಿಯನ್ನೂ ನೀಡಲಾಗಿದೆಯೇ ಎನ್ನುವ ಅನುಮಾನವೂ ಇದೆ. ಬೆಳಗಾವಿಯಲ್ಲಿ ಲಕ್ಷ್ಮಣ ಸವದಿ ಮತ್ತು ಲಕ್ಷ್ಮೀ ಹೆಬ್ಬಾಳಕರ್ ಹೆಸರಿದ್ದು, ಬೆಳಗಾವಿ ಮತ್ತು ಚಿಕ್ಕೋಡಿ ಆಗಿರಬಹುದು, ಬೆಂಗಳೂರಿನಲ್ಲಿ ರಿಜ್ವಾನ್ ಅರ್ಷದ್ ಮತ್ತು ಜಮೀರ್ ಅಹ್ಮದ್ ಖಾನ್ ಹೆಸರಿದ್ದು, ಬೆಂಗಳೂರು ಉತ್ತರ, ದಕ್ಷಿಣ ಇರಬಹುದು ಎನ್ನುವ ವಾದವಿದೆ.

ಆದರೆ ಸುದ್ದಿ ಮೂಲಗಳ ಪ್ರಕಾರ, ಇದು ಸೋಮವಾರ ಪ್ರಮಾಣ ವಚನ ಸ್ವೀಕರಿಸಲಿರುವ ನೂತನ ಸಚಿವರ ಪಟ್ಟಿಯೇ ಹೊರತು ಜಿಲ್ಲಾ ಅಧ್ಯಕ್ಷರ ಪಟ್ಟಿ ಅಲ್ಲ. ಸೋಮವಾರ ಬೆಳಗ್ಗೆ ಹೊತ್ತಿಗೆ ಇದಕ್ಕೆ ಸ್ಪಷ್ಟ ಉತ್ತರ ಸಿಗಬಹುದು.


‎

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button