Kannada NewsKarnataka News

ಶತಮಾನದ ಸಾಧಕ ಡಾ.ಪ್ರಭಾಕರ ಕೋರೆ

ಎಂ.ಕೆ.ಹೆಗಡೆ

ಸಾಧನೆ ಎಲ್ಲರಿಗೂ ಸಿದ್ಧಿಸುವುದಿಲ್ಲ. ಅದು ಕೆಲವೇ ಜನರ ಸ್ವತ್ತು. ಹಾಗೆಂದ ಮಾತ್ರಕ್ಕೆ ಅದು ಕೇವಲ ಹಣೆಬರಹದಿಂದ ಬರುವಂತದ್ದಲ್ಲ. ಅದಕ್ಕೆ ನಿರಂತರ ಪರಿಶ್ರಮ, ಕಾಯಕನಿಷ್ಠೆ, ನಾಯಕತ್ವ ಗುಣ, ತಾಳ್ಮೆ, ಶೃದ್ಧೆ, ಎಲ್ಲರನ್ನೂ ಪ್ರೀತಿಸುವ, ಗೌರವಿಸುವ, ಅಳೆದು ತೂಗುವ ಗುಣಗಳಿರಬೇಕು. ಇವೆಲ್ಲ ಸಿದ್ಧಿಸುವುದು ನಿರಂತರ ತಪಸ್ಸಿನಿಂದ ಮಾತ್ರ.

ತಪಸ್ಸು ಎಂದ ಮಾತ್ರಕ್ಕೆ ಹಿಂದೆಲ್ಲ ಋಷಿಮುನಿಗಳು ಮಾಡುತ್ತಿದ್ದರಲ್ಲ, ಆ ಮಾದರಿಯ ತಪಸ್ಸಲ್ಲ. ನಿರಂತರ ಕನಸು ಕಾಣುತ್ತ ಗುರಿಯತ್ತ ಓಡುವುದು. ಅಂತಹ ಸಂದರ್ಭದಲ್ಲಿ ಎದುರಾಗಬಹುದಾದ ಎಲ್ಲ ಅಡೆತಡೆಗಳಿಗೆ ಅವುಗಳ ಯೋಗ್ಯತೆಗೆ ತಕ್ಕಂತೆ ಪ್ರತ್ಯುತ್ತರ ನೀಡುತ್ತ ಸಾಗಬೇಕು. ಕೆಲವು ಸ್ವೀಕಾರಾರ್ಹವಾಗಿದ್ದರೆ, ಕೆಲವು ನಿರ್ಲಕ್ಷ್ಯಕ್ಕೆ ಯೋಗ್ಯವಾಗಿರುತ್ತವೆ. ಆಯಾ ಸಂದರ್ಭಕ್ಕೆ ತಕ್ಕಂತೆ ಚುರುಕಾಗಿ ನಿರ್ಧಾರ ತೆಗೆದುಕೊಳ್ಳುವುದು ಕೂಡ ಅಷ್ಟೇ ಮಹತ್ವವಾಗಿರುತ್ತವೆ.

ಸಾಧಕರು ವಿಶಾಲ ಜಗತ್ತಿನಲ್ಲಿ ಸಾಕಷ್ಟು ಜನರಿದ್ದಾರೆ. ಒಬ್ಬೊಬ್ಬರು ಒಂದೊಂದು ಕ್ಷೇತ್ರದಲ್ಲಿ ಸಾಧನೆ ಮಾಡುತ್ತಾರೆ. ಕೆಲವರು ಅಲ್ಪಸಮಯದಲ್ಲೇ ಸಾಧನೆಯನ್ನು ಸಿದ್ಧಿಸಿಕೊಂಡರೆ ಕೆಲವರಿಗೆ ದೀರ್ಘ ಕಾಲ ಬೇಕಾಗುತ್ತದೆ. ಕೆಲವರು ಒಂದು ಸಾಧನೆ ಮಾಡಿದ ನಂತರ ಮಾಯವಾಗಿ ಬಿಡುತ್ತಾರೆ. ಕೆಲವರು ಅದರ ಬೆನ್ನು ಬಿಡದೆ ಮುನ್ನುಗ್ಗುತ್ತಲೇ ಇರುತ್ತಾರೆ.

ಡಾ.ಪ್ರಭಾಕರ ಕೋರೆ, ಅವರನ್ನು ಶತಮಾನದ ಸಾಧಕ ಎನ್ನುವುದಕ್ಕೆ ಹಲವು ಬಲವಾದ ಕಾರಣಗಳಿವೆ. ಕೇವಲ 36ನೇ ವಯಸ್ಸಿಗೆ ಒಂದು ದೊಡ್ಡ ಸಂಸ್ಥೆಯ ಚುಕ್ಕಾಣಿ ಹಿಡಿದು ಮತ್ತೆ 36 ವರ್ಷಗಳಷ್ಟು ದೀರ್ಘ ಕಾಲದವರೆಗೂ ಒಂದಿಂಚೂ ಹಿಂದೆ ಸರಿಯದೆ ಸತತವಾಗಿ ಆ ಸಂಸ್ಥೆಯನ್ನು ಎತ್ತರೆತ್ತರಕ್ಕೆ ಕೊಂಡೊಯ್ಯುವ ಕಾಯಕದಲ್ಲಿ ಅವರು ನಿರತರಾಗಿದ್ದಾರೆ. ಹಲವು ಅಡೆತಡೆ, ಟೀಕೆ ಟಿಪ್ಪಣಿಗಳ ಮಧ್ಯೆಯೂ ತಾವು ಹೊತ್ತ ಜವಾಬ್ದಾರಿಗೆ ಬೆನ್ನು ಮಾಡದೆ ಮುನ್ನಡೆಯುತ್ತಿದ್ದಾರೆ.

ಬೆಳಗಾವಿಯ ಕೆಎಲ್ಇ ಸಂಸ್ಥೆ ಇಂದು ವಿಶ್ವಮಾನ್ಯ ಸಂಸ್ಥೆಯಾಗಿ ಬೆಳೆದು ನಿಂತಿದೆ. ಕೇವಲ 38 ಅಂಗ ಸಂಸ್ಥೆಗಳಿದ್ದಾಗ ಜವಾಬ್ದಾರಿ ಹೆಗಲಿಗೇರಿಸಿಕೊಂಡ ಪ್ರಭಾಕರ ಕೋರೆ ಇಂದು ಹತ್ತಿ ಹತ್ತಿರ 300ಕ್ಕೆ ತಂದು ನಿಲ್ಲಿಸಿದ್ದಾರೆ. ಇದು ಕಡಿಮೆ ಸಾಧನೆಯೇನಲ್ಲ. ಕರ್ನಾಟಕದ ಗಡಿ ಮೀರಿ, ಭಾರತದ ಗಡಿ ಮೀರಿ ಅವರು ಸಂಸ್ಥೆಯ ವಿಸ್ತಾರವನ್ನು ಹೆಚ್ಚಿಸಿದ್ದಾರೆ.

ಪ್ರಭಾಕರ ಕೋರೆ ರಾಜ್ಯಸಭಾ ಸದಸ್ಯರಾಗಿ 3 ಅವಧಿಗೆ ಕೆಲಸ ಮಾಡಿದ್ದಾರೆ. ರಾಜಕೀಯವಾಗಿ ಅದು ಅವರನ್ನು ಗುರುತಿಸಿದ್ದು ನಿಜ. ಆದರೆ ಕೋರೆಯವರು ನಿಜವಾಗಿ ವಿಶ್ವಮಾನ್ಯರಾಗಿದ್ದು, ಜಾಗತಿಕವಾಗಿ ಗುರುತಿಸಲ್ಪಟ್ಟಿದ್ದು ಕೆಎಲ್ಇ ಸಂಸ್ಥೆಯ ಮೂಲಕವೇ.

ಕೆಎಲ್ಇ ಯಂತಹ ದೊಡ್ಡ ಸಂಸ್ಥೆಯನ್ನಿಟ್ಟುಕೊಂಡು ಅವರು ಯಾವ ಶ್ರಮವಿಲ್ಲದೆ ಬದುಕಬಹುದಿತ್ತು. ಆದರೆ 73ನೇ ವಯಸ್ಸಿನಲ್ಲೂ ಅವರು ಪಾದರಸದಂತೆ ಸದಾ ಚಟುವಟಿಕೆಯಿಂದ ಕೂಡಿದ್ದು, ಪ್ರತಿ ದಿನ ನಿರಂತರ ಚಟುವಟಿಕೆಯಲ್ಲಿ ತೊಡಗಿಕೊಂಡಿರುತ್ತಾರೆ. ಪ್ರವಾಹ, ಕೊರೋನಾದಂತಹ ಸಂಕಷ್ಟಗಳು ಬಂದಾಗಲೂ ಅವರು ಜನರ ಸೇವೆಯಲ್ಲಿ ತೊಡಗಿಕೊಂಡಿದ್ದಾರೆ.

ಕೋರೆಯವರಲ್ಲಿರುವ ಪ್ರಮುಖವಾದ ಗುಣ ನಾಯಕತ್ವ ಗುಣ. ಇಂತಹ ದೊಡ್ಡ ಸಂಸ್ಥೆಯನ್ನು ಅತ್ಯಂತ ಶಿಸ್ತುಬದ್ದವಾಗಿ ಮುನ್ನಡೆಸುವ ಚಾಕಚಕ್ಯತೆಯನ್ನು ಅವರು ಹೊಂದಿದ್ದಾರೆ. ಅದು ಎಲ್ಲರಿಗೂ ಸಿದ್ಧಿಸುವಂತದ್ದಲ್ಲ. ಯಾವ ಅಂಗಸಂಸ್ಥೆಯೂ ಶಿಸ್ತನ್ನು ಮೀರಿ ನಡೆಯದಂತೆ ನೋಡಿಕೊಂಡಿದ್ದಾರೆ.

ಕೋರೆಯವರಿಗೆ ಸಾವಿರಾರು ಪ್ರಶಸ್ತಿಗಳು ಬಂದಿವೆ, ಗೌರವ ಹುದ್ದೆಗಳು ಬಂದಿವೆ, ದೇಶ ವಿದೇಶಗಳಲ್ಲಿ ಅವರು ಗುರುತಿಸಲ್ಪಟ್ಟಿದ್ದಾರೆ. ಕೆಎಲ್ಇ ಮೂಲಕ ಪ್ರಭಾಕರ ಕೋರೆ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಸಾವಿರಾರು ಜನರಿಗೆ ಆಸರೆಯಾಗಿದ್ದಾರೆ. ಲಕ್ಷಾಂತರ ಜನರು ಅವರ ಹೆಸರನ್ನು ಹೇಳಿಕೊಂಡು ಊಟ ಮಾಡುತ್ತಿದ್ದಾರೆ. ಹಾಗಾಗಿ ಅವರು ಕೇವಲ ವ್ಯಕ್ತಿಯಲ್ಲ, ಅದೊಂದು ಶಕ್ತಿಯೇ ಸರಿ.

ರಾಷ್ಟ್ರೀಯ ನೆಲೆಯಲ್ಲಿ ಯೋಚಿಸುವ ಚಿಂತಕ ಡಾ.ಪ್ರಭಾಕರ ಕೋರೆ

ಕೋರೆ ಯುಗವು ಕೆಎಲ್ಇ ಸಂಸ್ಥೆಗೆ ಒಂದು ಸುವರ್ಣ ಯುಗ

ಡಾ.ಪ್ರಭಾಕರ ಕೋರೆಗೆ ಜೀವಮಾನ ಸಾಧನೆ ಪ್ರಶಸ್ತಿ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button