Kannada NewsKarnataka News

ಶಬರಿಕೊಳ್ಳ, ಯೋಗಿಕೊಳ್ಳ, ಬಸವನಕೊಳ್ಳ ಮತ್ತಿತರ ಸ್ಥಳ ಜೀವವೈವಿಧ್ಯ ತಾಣ: ಅನಂತ ಹೆಗಡೆ ಆಶೀಸರ

ಅರಣ್ಯ ಪರಿಸರ ಜೀವವೈವಿಧ್ಯ ಅಭಿವೃದ್ಧಿ ಕುರಿತು ಸಭೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ  : ರಾಮದುರ್ಗದ ಶಬರಿಕೊಳ್ಳ, ಗೋಕಾಕ ತಾಲೂಕಿನ ಯೋಗಿಕೊಳ್ಳ, ಗೊಡಚಿನಮಲ್ಕಿ, ಬೆಳಗಾವಿ ತಾಲ್ಲೂಕಿನ ಕಣಬರಗಿ ಸಿದ್ಧೇಶ್ವರ ದೇವಸ್ಥಾನ, ಕಾಕತಿ ಸಮೀಪದ ಬಸವನಕೊಳ್ಳ ಸೇರಿದಂತೆ ವಿವಿಧ ಸ್ಥಳಗಳ ಬಗ್ಗೆ ಸಮಗ್ರ ಮಾಹಿತಿಯನ್ನು ಪಡೆದುಕೊಂಡ ಬಳಿಕ ಇವುಗಳನ್ನು ಜೀವವೈವಿಧ್ಯ ತಾಣಗಳನ್ನಾಗಿ ಘೋಷಿಸುವ ಕುರಿತು ನಿರ್ಧರಿಸಲಾಗುವುದು ಎಂದು ಕರ್ನಾಟಕ ಜೀವವೈವಿಧ್ಯ ಮಂಡಳಿ ಅಧ್ಯಕ್ಷ ಅನಂತ ಹೆಗಡೆ ಆಶೀಸರ ಹೇಳಿದರು.
ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಶುಕ್ರವಾರ (ಫೆ.೧೨) ನಡೆದ ಅರಣ್ಯ ಪರಿಸರ ಜೀವವೈವಿಧ್ಯ ಅಭಿವೃದ್ಧಿ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕೆರೆಗಳ ರಕ್ಷಣೆಗೆ ಅಧಿಕಾರಿಗಳಿಗೆ ಸೂಚನೆ:
ಬೆಳಗಾವಿ ಜಿಲ್ಲೆಯಲ್ಲಿ ಜೀವವೈವಿಧ್ಯ ವಿಶೇಷತೆ ಒಳಗೊಂಡಿರುವ ಕೆರೆ, ಗುಡ್ಡ ಮತ್ತಿತರ ಪ್ರದೇಶಗಳನ್ನು ಗುರುತಿಸಿ ಅವುಗಳ ರಕ್ಷಣೆಗೆ ತೆಗೆದುಕೊಳ್ಳಬಹುದಾದ ಕ್ರಮಗಳ ಕುರಿತು ಸದ್ಯದಲ್ಲೇ ರೂಪುರೇ?ಗಳನ್ನು ರೂಪಿಸಲಾಗುವುದು.
ಅರಣ್ಯಭೂಮಿ ರಕ್ಷಣೆಗೆ ಸಂಬಂಧಿಸಿದಂತೆ ಕಂದಾಯ ಹಾಗೂ ಅರಣ್ಯ ಇಲಾಖೆಯ ವತಿಯಿಂದ ಸೂಕ್ತ ಯೋಜನೆ ರೂಪಿಸಬೇಕು ಎಂದು ಅನಂತ ಹೆಗಡೆ ಆಶೀಸರ ಅವರು ಅಧಿಕಾರಿಗಳಿಗೆ ತಿಳಿಸಿದರು.
ಈ ಯೋಜನೆಯನ್ನು ಹಂತ ಹಂತವಾಗಿ ಅನು?ನಗೊಳಿಸಲು ಜಿಲ್ಲೆಯ ಕೈಗಾರಿಕೋದ್ಯಮಿಗಳು ಹಾಗೂ ಸಂಘ-ಸಂಸ್ಥೆಗಳ ನೆರವಿನೊಂದಿಗೆ ಕಾರ್ಯಪ್ರವೃತ್ತರಾಗಬಹುದು ಎಂದು ಅನಂತ ಹೆಗಡೆ ಆಶೀಸರ ಹೇಳಿದರು.
ಜಿಲ್ಲೆಯಲ್ಲಿ ಜೀವವೈವಿಧ್ಯ ರಕ್ಷಣೆಗೆ ಇನ್ನಷ್ಟು ಯೋಜನೆ ರೂಪಿಸಬೇಕು. ಕೆರೆ ರಕ್ಷಣೆ, ಅಕ್ರಮ ಗಣಿಗಾರಿಕೆಗೆ ಕಡಿವಾಣ, ಪ್ಲ್ಯಾಸ್ಟಿಕ್ ಬಳಕೆ ನಿಯಂತ್ರಣಕ್ಕೆ ಇರುವ ಕಾಯ್ದೆ-ಕಾನೂನುಗಳನ್ನು ಇನಷ್ಟು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜನಜಾಗೃತಿಗೆ ಹದಿನೈದು ದಿನಗಳ ವಿಶೇಷ ಅಭಿಯಾನ ಹಮ್ಮಿಕೊಳ್ಳಬೇಕು ಎಂದು ತಿಳಿಸಿದರು.
ಜೀವವೈವಿಧ್ಯ ನಿರ್ವಹಣಾ ಸಮಿತಿ ಸಬಲೀಕರಣಕ್ಕೆ ಕ್ರಮ:
ಗ್ರಾಮ ಪಂಚಾಯತಿ ಮಟ್ಟದಲ್ಲಿ ಜೀವವೈವಿಧ್ಯ ನಿರ್ವಹಣಾ ಸಮಿತಿಗಳನ್ನು ಸಬಲೀಕರಣಗೊಳಿಸುವ ಅಗತ್ಯವಿದೆ ಎಂದು ಅನಂತ ಹೆಗಡೆ ಹೇಳಿದರು.
ಜಿಲ್ಲಾ, ತಾಲ್ಲೂಕು ಮಟ್ಟದಲ್ಲಿ ಒಬ್ಬ ನೋಡಲ್ ಅಧಿಕಾರಿಗಳ ಅಗತ್ಯವಿದ್ದು, ೧೫ ನೇ ಹಣಕಾಸು ಯೋಜನೆಯಡಿ ಅನುದಾನ ಕೂಡ ಒದಗಿಸಬೇಕಿದೆ.
ವಿಶ್ವ ಪರಿಸರ ದಿನವಾದ ಮೇ ೨೨ ರೊಳಗೆ ರಾಜ್ಯದಾದ್ಯಂತ ಜೀವವೈವಿಧ್ಯ ನಿರ್ವಹಣಾ ಸಮಿತಿಗಳನ್ನು ರಚಿಸಿ ಕಾರ್ಯತತ್ಪರರಾಗಬೇಕಿದೆ.
ನಗರದ ಹೋಟೆಲ್, ವಸತಿನಿಲಯ ಮತ್ತಿತರ ಕಡೆಗಳಲ್ಲಿ ತ್ಯಾಜ್ಯದಿಂದ ಗ್ಯಾಸ್ ಉತ್ಪಾದನಾ ಸಣ್ಣ ಸಣ್ಣ ಘಟಕಗಳನ್ನು ನಿರ್ಮಿಸಲು ಪಾಲಿಕೆ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ನಿರ್ಮಿಸಲು ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು.
ಎಸ್.ಸಿ.ಪಿ ಮತ್ತು ಟಿ.ಎಸ್.ಪಿ ಅನುದಾನದಡಿ ಫಲಾನುಭವಿಗಳಿಗೆ ಸೋಲಾರ್ ದೀಪಗಳನ್ನು ನೀಡಲು ಕ್ರಮ ಕೈಗೊಳ್ಳಬೇಕು ಎಂದು ಅನಂತ ಹೆಗಡೆ ಆಶೀಸರ ತಿಳಿಸಿದರು.

ಜಿಲ್ಲೆಯಲ್ಲಿ ಅರಣ್ಯ ರಕ್ಷಣೆ ಹಾಗೂ ಅರಣ್ಯ ಬೆಳೆಸುವುದಕ್ಕೆ ಸಂಬಂಧಿಸಿದಂತೆ ಅರಣ್ಯ ಹಾಗೂ ಕಂದಾಯ ಇಲಾಖೆಯ ವತಿಯಿಂದ ಜೀವವೈವಿಧ್ಯ ಸಮಿತಿಗಳನ್ನು ರಚಿಸಿಕೊಂಡು ಕಾರ್ಯಪ್ರವೃತ್ತರಾಗಬೇಕು ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಬೆಳಗಾವಿ ನಗರದಲ್ಲಿರುವ ವ್ಯಾಕ್ಸಿನ್ ಡಿಪೋ ಕೂಡ ಜೀವವೈವಿಧ್ಯ ತಾಣ ಎಂದು ಘೋಷಿಸುವ ಕುರಿತು ಪರಿಶೀಲಿಸಬಹುದು. ಆರೋಗ್ಯ ಇಲಾಖೆಯ ಕೆಲ ಕಚೇರಿಗಳು ಅಲ್ಲಿದ್ದು, ಸ್ಮಾರ್ಟ್ ಸಿಟಿ ಯೋಜನೆಯಡಿ ಕೆಲ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ. ಈ ಪ್ರದೇಶವನ್ನು ಪರಿಶೀಲಿಸಿ ನಿರ್ಧಾರ ಕೈಗೊಳ್ಳಬಹುದು ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ತಿಳಿಸಿದರು.
ಉಪ ಅರಣ್ಯ ಸಂರಕ್ಷಣಾಧಿಕಾರಿ (ಸಾಮಾಜಿಕ ಅರಣ್ಯ) ಎಸ್.ಕೆ.ಕಲ್ಲೋಳಕರ, ಮಹಾನಗರ ಪಾಲಿಕೆಯ ಆಯುಕ್ತರಾದ ಜಗದೀಶ್ ಕೆ.ಎಚ್., ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಾದ ವಿಜಯಕುಮಾರ್ ಹೊನಕೇರಿ, ಕೃಷಿ ಇಲಾಖೆಯ ಉಪ ನಿರ್ದೇಶಕ ಡಾ.ಎಚ್.ಡಿ.ಕೋಳೇಕರ, ಪರಿಸರ ಅಧಿಕಾರಿ ಗೋಪಾಲಕೃಷ್ಣ ಮತ್ತಿತರರು ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button