*ಉತ್ತರ ಕರ್ನಾಟಕ ಭಾಗದ ಪ್ರವಾಸೋದ್ಯಮ ಉತ್ತೇಜನಕ್ಕೆ ಕ್ರಮ: ಡಾ.ಕೆ.ವಿ.ರಾಜೇಂದ್ರ*
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಉತ್ತರ ಕರ್ನಾಟಕ ಭಾಗದ ಪ್ರವಾಸಿ ತಾಣಗಳ ಪ್ರಚಾರದಲ್ಲಿ ಹಿಂದೆ ಬಿದ್ದಿರುವುದು ಕಳವಳಕಾರಿ ಸಂಗತಿ. ಈ ಭಾಗದ ಪ್ರವಾಸಿ ತಾಣಗಳನ್ನು ಜಾಗತಿಕ ಮಟ್ಟದಲ್ಲಿಯೂ ಗುರುತಿಸುವಂತಾಗಿ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ಅಗತ್ಯವಿದ್ದು. ಈ ನಿಟ್ಟಿನಲ್ಲಿ ಪ್ರಯತ್ನಿಸಲಾಗುವುದು ಎಂದು ಪ್ರವಾಸೋದ್ಯಮ ಇಲಾಖೆ ನಿರ್ದೇಶಕ ಡಾ.ಕೆ.ವಿ. ರಾಜೇಂದ್ರ ಅವರು ನುಡಿದರು.
ಇಂದು ನಗರದಲ್ಲಿ ಜರುಗಿದ ಬೆಳಗಾವಿಯ ಪ್ರಯಾಣ, ಪ್ರವಾಸೋದ್ಯಮ ಮತ್ತು ಆತಿಥ್ಯ ಮದ್ಯಸ್ಥಿಕೆಗಾರರೊಂದಿಗೆ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಬೆಳಗಾವಿ ಹತ್ತಿರದ ಚನ್ನಮ್ಮನ ಕಿತ್ತೂರು, ನಂದಗಡ, ರಾಜಹಂಸಗಡ ಸೇರಿದಂತೆ ಇನ್ನೂ ಅನೇಕ ಪ್ರವಾಸಿ ತಾಣಗಳ ಕುರಿತು ಜಾಗತಿಕ ಮಟ್ಟದಲ್ಲಿ ಪ್ರಚಾರ ಕೈಗೊಳ್ಳಬೇಕು. ಈ ಭಾಗದ ಜನರ ಧೈರ್ಯ, ಕಾರ್ಯಕ್ಷಮತೆ, ಹಾಗೂ ನೈಸರ್ಗಿಕ ಸಂಪತ್ತುಗಳ ಕುರಿತು ಜಾಗೃತಿ ಮೂಡಿಸಬೇಕು. ಖಾನಾಪುರ ಭಾಗದ ಅರಣ್ಯ ಪ್ರದೇಶವು ತೀರ್ಥಹಳ್ಳಿಯ ಕಾಡಿಗಿಂತ ದಟ್ಟವಾಗಿದೆ. ಈ ಕುರಿತು ಇನ್ನೂ ಹೆಚ್ಚಿನ ಬೆಳಕು ಚೆಲ್ಲುವುದರ ಮೂಲಕ ಹೆಚ್ಚಿನ ಸಂಖ್ಯೆಯ ಚಾರಣಿಗರನ್ನು ಆಕರ್ಷಿಸುವ ಕಾರ್ಯವಾಗಬೇಕಾಗಿದೆ.
ಬೆಂಗಳೂರಿನಿಂದ ಮುಂಬೈಗೆ ಕೈಗಾರಿಕಾ ಉದ್ದೇಶದಿಂದ ಉದ್ಯಮಿಗಳು ಈ ಮಾರ್ಗವಾಗಿಯೇ ಪ್ರವಾಸ ಕೈಗೊಳ್ಳುತ್ತಿದ್ದಾರೆ ಇದರಿಂದಾಗಿ ಹೊಟೆಲ್ ಉದ್ಯಮಕ್ಕೆ ಅನುಕೂಲವಾಗಿದೆ. ಈ ಭಾಗದ ಕೃಷಿ ಪ್ರವಾಸೋದ್ಯಮದ ಜೊತೆಗೆ ಗ್ರಾಮೀಣ ಭಾಗದಲ್ಲಿ ಅನೇಕ ಉತ್ಪನ್ನಗಳಿಂದಲೂ ಪ್ರವಾಸೊದ್ಯಮಕ್ಕೆ ಉತ್ತೇಜನ ನೀಡಬಹುದಾಗಿದೆ. ಈ ಕುರಿತು ಪ್ರತಿಯೊಬ್ಬರಲ್ಲೂ ಜಾಗೃತಿ ಹಾಗೂ ಪ್ರಚಾರ ಮಾಡುವದು ಅತೀ ಮುಖ್ಯವಾಗಿದೆ.
ಪ್ರವಾಸೋದ್ಯಮ ಅಭಿವೃಧ್ದಿಗಾಗಿ ಇರುವ ಪೂರಕ ಅಂಶಗಳನ್ನು ಗುರುತಿಸಿ ಅವುಗಳ ಮೇಲೆ ಹೆಚ್ಚಿನ ಗಮನ ಹರಿಸಬೇಕು. ಯಾವುದೇ ಭಾಗದ ಹೊಟೆಲ್, ವಾಹನ ಮಾಲಿಕರು, ಚಾಲಕರು ಪ್ರವಾಸಿಗರೊಂದಿಗೆ ಗೌರವಯುತವಾಗಿ ನಡೆದುಕೊಂಡಲ್ಲಿ ಆ ಭಾಗದ ಪ್ರವಾಸೊದ್ಯಮ ಅಭಿವೃದ್ಧಿಗೊಳ್ಳುತ್ತದೆ ಎಂದರು.
ಪ್ರವಾಸೋದ್ಯಮ ಎಂದರೆ ಕೇವಲ ಹೊಟೆಲಗಳ ನಿರ್ಮಾಣ ಮಾತ್ರವಲ್ಲ; ಸ್ಥಳೀಯ ಆಹಾರ ಪದಾರ್ಥಗಳಿಂದಲೂ ಪ್ರವಾಸೋದ್ಯಮವನ್ನೂ ಉತ್ತೇಜಿಸಬಹುದಾಗಿದೆ. ಈ ಕುರಿತು ಪ್ರವಾಸೋದ್ಯಮ ಇಲಾಖೆಯಿಂದ ಶೀಘ್ರವೇ ಕ್ರಮ ವಹಿಸಲಾಗುವದು.
2024-2029ರ ವರೆಗಿನ ಕರ್ನಾಟಕ ಪ್ರವಾಸೊದ್ಯಮ ಕರಡು (ನೀತಿ)ಪಾಲಿಸಿಯನ್ನು ತಯಾರಿಸಲಾಗುತ್ತಿದೆ. ಇದರಲ್ಲಿ ಪ್ರವಾಸೊದ್ಯಮ ಮದ್ಯಸ್ಥಿಗಾರರ ಸಲಹೆ ಸೂಚನೆಗಳನ್ನು ಪರಿಗಣಿಸಿ ಅಂತಿಮ ವರದಿ ಸರಕಾರಕ್ಕೆ ಸಲ್ಲಿಸಲಾಗುವದು ಎಂದರು.
ಉತ್ತರ ಕರ್ನಾಟಕ ಭಾಗದ ಪ್ರವಾಸಿ ತಾಣಗಳ ಅಭಿವೃದ್ಧಿಗಾಗಿ ಎಲ್ಲ ರೀತಿಯ ಕ್ರಮಗಳನ್ನಹ ಕೈಗೊಳ್ಳಲಾಗುವದು. ಈ ಕಾರ್ಯದಲ್ಲಿ ಈ ಭಾಗದ ಮಧ್ಯಸ್ಥಿತಿಕೆಗಾರರು ಭಾಗವಹಿಸುವದು ಅತೀ ಮುಖ್ಯವಾಗಿದೆ ಎಂದು ಕೆ.ವಿ.ರಾಜೇಂದ್ರ ಅವರು ತಿಳಿಸಿದರು.
ತದನಂತರ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ವಿವಿಧ ಹೊಟೆಲ್ ಮಾಲೀಕರು ಪ್ರವಾಸೋದ್ಯಮ ಇಲಾಖೆಯ ಹಳೆಯ ಪಾಲಿಸಿ ಪ್ರಕಾರ ಹೋಂಸ್ಟೇಗಳಲ್ಲಿ ಇರುವ ಐದು ಕೋಣೆಗಳ ಬದಲಾಗಿ ಹತ್ತು ಕೋಣೆಗಳಿಗೆ ಅವಕಾಶ ಕಲ್ಪಿಸಲು, ಜಿಲ್ಲೆಗೆ ಆಗಮಿಸುವ ಬೇರೆ ರಾಜ್ಯಗಳ ಪ್ರವಾಸಿಗರೊಂದಿಗೆ ಪೊಲಿಸ್ ಇಲಾಖೆ ಸಿಬ್ಬಂದಿಗಳು ಗೌರವಯುತವಾಗಿ ನಡೆದುಕೊಳ್ಳುವದರ ಕುರಿತು ಚರ್ಚಿಸಿದರು.
ಬೆಳಗಾವಿಯ ಕಮಲ ಬಸದಿ, ಸುವರ್ಣಸೌಧ ಸೇರಿದಂತೆ ಅನೇಕ ಪ್ರೇಕ್ಷಣಿಯ ಸ್ಥಳಗಳಿದ್ದು ಇವುಗಳ ಕುರಿತು ಪ್ರಚಾರವಾಗುವದರ ಜೊತೆಗೆ ಸೂಕ್ತ ಸಾರಿಗೆ ವ್ಯವಸ್ಥೆ ಹಾಗೂ ಪ್ರವಾಸೋದ್ಯಮ ಇಲಾಖೆಯಲ್ಲಿ ಹೋಟೆಲಗಳನ್ನು ದಾಖಲಿಸುವ ಕುರಿತು ಇರುವ ಪ್ರಕ್ರಿಯೆ ಸರಳೀಕರಣ, ಜಲಕ್ರೀಡೆಗಳಿಗೆ ಅನುಮತಿ, ಚೆನ್ನಮ್ಮ ಜನ್ಮಸ್ಥಳ ಅಭಿವೃದ್ಧಿ ಪಡಿಸುವ ಕುರಿತು ಸಲಹೆ ಹಾಗೂ ತಮ್ಮ ಸಮಸ್ಯೆಗಳ ಕುರಿತು ವಿಸ್ತೃತವಾಗಿ ಚರ್ಚೆ ನಡೆಯಿತು.
ಕರ್ನಾಟಕ ಪ್ರವಾಸೋದ್ಯಮ ಸೊಸೈಟಿ ಹಾಗೂ ಬೋರ್ಡನ ನಿರ್ದೆಶಕ ಪಿ.ಸಿ.ರಾವ್, ಬೆಳಗಾವಿ ವಿಮಾನ ನಿಲ್ದಾಣದ ನಿರ್ದೆಶಕರಾದ ತ್ಯಾಗರಾಜ್, ಕರ್ನಾಟಕ ಪ್ರವಾಸೋದ್ಯಮ ಸೊಸೈಟಿ ಕಾರ್ಯದರ್ಶಿ ಮನು, ಪ್ರವಾಸೊದ್ಯಮ ಇಲಾಖೆ ಜಂಟಿ ನಿರ್ದೆಶಕಿ ಸೌಮ್ಯ, ಹೋಟಲ್ ಉದ್ಯಮಿ ವಿಠ್ಠಲ ಹೆಗಡೆ ಸೇರಿದಂತೆ ವಿವಿಧ ಹೋಟೆಲ್, ಮಾಲಿಕರು ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
**
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ