ನಟ ದರ್ಶನ್ ಬಳ್ಳಾರಿ ಜೈಲಿಗೆ ಶಿಪ್ಟ್: ಅಗತ್ಯ ಕ್ರಮಕ್ಕೆ ಉತ್ತರ ವಲಯ ಡಿಐಜಿ ಟಿಪಿ ಶೇಷಾ ಆದೇಶ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಕೇಂದ್ರ ಕಾರಾಗೃಹ ಬೆಂಗಳೂರಿನಿಂದ ಕೇಂದ್ರ ಕಾರಾಗೃಹ ಬಳ್ಳಾರಿಗೆ ವರ್ಗಾವಣೆಗೊಂಡಿರುವ ವಿಚಾರಣಾಧೀನ ಬಂಧಿ ನಟ ದರ್ಶನ್ ಗೆ ಕಾರಾಗೃಹದ ನಿಯಮಾನುಸಾರ ಅಗತ್ಯ ಕ್ರಮ ಕೈಗೊಳ್ಳುವಂತೆ ಉತ್ತರ ವಲಯ ಡಿಐಜಿ ಟಿಪಿ ಶೇಷಾ ಆದೇಶ ಹೊರಡಿಸಿದ್ದಾರೆ.
ಬೆಂಗಳೂರು ಕಾರಾಗೃಹದಿಂದ ಬಳ್ಳಾರಿ ಕೇಂದ್ರ ಕಾರಾಗೃಹಕ್ಕೆ ವರ್ಗಾವಣೆಗೊಂಡಿದ್ದು, ಬಂದಿಯು ಕನ್ನಡ ಚಿತ್ರರಂಗದ ಪ್ರಭಾವಿ ವ್ಯಕ್ತಿಯಾಗಿದ್ದು, ಹೆಚ್ಚಿನ ಸಂಖ್ಯೆಯ ಅಭಿಮಾನಿ ಜನಸ್ತೋಮ ಹೊಂದಿರುತ್ತಾನೆ. ಈಗಾಗಲೇ ಬೆಂಗಳೂರು ಕೇಂದ್ರ ಕಾರಾಗೃಹದಲ್ಲಿ ಕಾರಾಗೃಹದ ನಿಯಮಗಳನ್ನು ಮೀರಿ ಅಕ್ರಮವಾಗಿ ಸೌಲಭ್ಯಗಳನ್ನು ಹೊಂದಿರುವ ಆಧಾರದ ಮೇಲೆ ಶಿಸ್ತು ಕ್ರಮದ ಮೇರೆಗೆ ಬಳ್ಳಾರಿ ಕೇಂದ್ರ ಕಾರಾಗೃಹಕ್ಕೆ ವರ್ಗಾವಣೆಗೊಂಡಿರುವ ಹಿನ್ನಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಕಾರಾಗೃಹದ ನಿಯಮಗಳನುಸಾರ ಹಾಗೂ ಕಾರಾಗೃಹದ ಆಡಳಿತ ಮತ್ತು ಭದ್ರತೆಯ ಹಿತದೃಷ್ಟಿಯಿಂದ ಕಟ್ಟುನಿಟ್ಟಾಗಿ ಅಗತ್ಯ ಕ್ರಮ ಕೈಗೊಳ್ಳಲು ಸೂಚಿಸಿದ್ದಾರೆ.
ವಿಚಾರಣಾ ಬಂದಿಯನ್ನು ಪ್ರತ್ಯೇಕ ಕೊಠಡಿಯಲ್ಲಿ ದಾಖಲಿಸುವುದು. ಬಂಧಿಯ ಚಟುವಟಿಕೆಗಳ ಮೇಲೆ ಸೂಕ್ತ ನಿಗಾ ವಹಿಸಲು 24×7 ಸಿಸಿಟಿವಿ ಕ್ಯಾಮರಾಗಳ ಕಣ್ಗಾವಲಿನಲ್ಲಿರುವಂತೆ ಅಗತ್ಯ ಕ್ರಮ ಕೈಗೊಳ್ಳುವುದು. ಬಂಧಿಯ ಕಾರ್ಯವಟಿಕೆಗಳನ್ನು ಸೆರೆಹಿಡಿದ ಸಿಸಿಟಿವಿ ದೃಶ್ಯಾವಳಿಗಳನ್ನು ಪ್ರತಿನಿತ್ಯ ಮುಂಜಾಗ್ರತಾ ಕ್ರಮವಾಗಿ ಶೇಖರಣೆ ಮಾಡಿ ಪ್ರತ್ಯೇಕವಾಗಿಟ್ಟುಕೊಳ್ಳುವುದು. ಬಂದಿಯ ಪ್ರತಿ ನಿತ್ಯದ ಕಾರ್ಯ ಚಟುವಟಿಕೆಗಳನ್ನು ಬಾಡಿ ವೋರ್ನ ಕ್ಯಾಮರಾದಲ್ಲಿ ಸೆರೆಹಿಡಿದಿಟ್ಟುಕೊಂಡು ಸದರಿ ದೃಶ್ಯಾವಳಿಗಳನ್ನು ಪ್ರತಿನಿತ್ಯ ಕಾರಾಗೃಹದ ಹಿರಿಯ ಅಧಿಕಾರಿಗಳು ಪರಿಶೀಲಿಸಿ ಸಂಗ್ರಹಿಸಿಡುವುದು. ತಾತ್ಕಾಲಿಕವಾಗಿ ಸದರಿ ಬಂದಿಯ ಧರ್ಮ ಪತ್ನಿ, ರಕ್ತ ಸಂಬಂಧಿಗಳು ಮತ್ತು ಪ್ರಕರಣದ ವಕಾಲತ್ತು ವಹಿಸಿದ ವಕೀಲರಿಗೆ ಮಾತ್ರ ಕಾರಾಗೃಹದ ನಿಯಮಾನುಸಾರ ಸಂದರ್ಶನ ನೀಡಲು ಅವಕಾಶ ಕಲ್ಪಿಸತಕ್ಕದ್ದು.
ಬಂಧಿಯ ಸಂದರ್ಶನಕ್ಕಾಗಿ ಕನ್ನಡ ಚಿತ್ರರಂಗದ ಕಲಾವಿದರು, ಅಭಿಮಾನಿ ಬಳಗದವರು ಮತ್ತು ಪ್ರಭಾವಿ/ರಾಜಕೀಯ ವ್ಯಕ್ತಿಗಳು ಆಗಮಿಸುವ ಸಂಭವವಿದ್ದು, ಕಾರಾಗೃಹದ ಆಡಳಿತ ಮತ್ತು ಭದ್ರತೆಯ ಹಿತ-ದೃಷ್ಟಿಯಿಂದ ಸದರಿರವರಿಗೆ ಯಾವುದೇ ಕಾರಣಕ್ಕೂ ಸಂದರ್ಶನಕ್ಕೆ ಅವಕಾಶ ಕಲ್ಪಿಸತಕ್ಕದ್ದಲ್ಲ. ಸದರಿ ಬಂದಿಗೆ ವಿಶೇಷ ಸೌಲಭ್ಯಗಳನ್ನು ಕಲ್ಪಿಸಿದ್ದರ ಬಗ್ಗೆ ಸುದ್ದಿ ವಾಹಿನಿಗಳಲ್ಲಿ ಪ್ರಸಾರವಾಗಿ ಸರ್ಕಾರದ ಮಟ್ಟದಲ್ಲಿ ಚರ್ಚೆಯಾಗುತ್ತಿರುವುದರಿಂದ ಸದರಿ ಬಂದಿಯನ್ನು ಸಾಮಾನ್ಯ ಬಂದಿಯಂತೆ ಪರಿಗಣಿಸಿ ಸಾಮಾನ್ಯ ಬಂದಿಗೆ ಕಲ್ಪಿಸತಕ್ಕಂತಹ ಸೌಲಭ್ಯಗಳನ್ನು ಮಾತ್ರ ಕಲ್ಪಿಸತಕ್ಕದ್ದು ಹೊರತು ಯಾವುದೇ ವಿಶೇಷ ಆತಿಥ್ಯ ನೀಡತಕ್ಕದ್ದಲ್ಲ.
ಉಪಹಾರ ಗೃಹ, ಮನರಂಜನೆ ಸೌಲಭ್ಯಗಳನ್ನು ಕಾರಾಗೃಹದ ನಿಯಮಾವಳಿಗಳಂತೆ ಮಾತ್ರ ಒದಗಿಸುವುದು. ಯಾವುದೇ ನಿಯಮಗಳ ಉಲ್ಲಂಘನೆಗೆ ಆಸ್ಪದ ನೀಡತಕ್ಕದ್ದಲ್ಲ. ಸದರಿ ಬಂದಿಯು ಹಿರಿಯ ಅಧಿಕಾರಿಯವರ ಅನುಮತಿ ರಹಿತವಾಗಿ ತನ್ನ ವಿಭಾಗದಿಂದ ನಿರ್ಗಮಿಸದಂತೆ ಮತ್ತು ಬೇರೆ ಬಂದಿಗಳ ಜೊತೆಗೆ ಬೆರೆಯದಂತೆ ನಿಗಾವಹಿಸತಕ್ಕದ್ದು. ಕಾರಾಗೃಹದ ಅಧಿಕಾರಿಗಳು ಸದರಿ ಬಂದಿಯ ವಿಭಾಗವನ್ನು ಅನಿರೀಕ್ಷಿತವಾಗಿ ತಪಾಸಣೆ ಕೈಗೊಂಡು ಯಾವುದೇ ನಿಷೇಧಿತ/ ಕಾನೂನುಬಾಹಿರ ವಸ್ತುಗಳು ನುಸುಳದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದು. ಕಾರಾಗೃಹದ ಭದ್ರತೆಗೆ ನಿಯೋಜನೆಗೊಂಡ ಕೆ.ಎಸ್.ಐ.ಎಸ್.ಎಫ್ ಘಟಕದ ಅಧಿಕಾರಿ/ಸಿಬ್ಬಂದಿಯವರು ಸದರಿ ಬಂದಿಯ ಸಂದರ್ಶನಕ್ಕೆ ಆಗಮಿಸುವ ಅರ್ಹ ವ್ಯಕ್ತಿಗಳನ್ನು ಸಂಪೂರ್ಣವಾಗಿ ತಪಾಸಣೆಯನ್ನು ಮಾಡತಕ್ಕದ್ದು, ಯಾವುದೇ ತರಹದ ನಿಷೇಧಿತ/ ಕಾನೂನುಬಾಹಿರ ವಸ್ತುಗಳು ನುಸುಳದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದು.
ಸದರಿ ಬಂದಿಯು ಪ್ರಭಾವಿ ವ್ಯಕ್ತಿಯಾಗಿರುವುದರಿಂದ ಸದರಿ ಬಂದಿಯ ಅಭಿಮಾನಿಗಳು ಕಾರಾಗೃಹದ ಮುಂದೆ ಗಲಾಟೆಗಳನ್ನು ಮಾಡುವ ಸಂಭವವಿರುವುದರಿಂದ ಮುಂಜಾಗ್ರತಾ ಕ್ರಮವಾಗಿ ಹಿರಿಯ ಪೊಲೀಸ್ ಅಧಿಕಾರಿಗಳನ್ನು ಖುದ್ದಾಗಿ ಭೇಟಿ ಮಾಡಿ ಕಾರಾಗೃಹದ ಭದ್ರತೆಗೆ ಸೂಕ್ತ ಪೊಲೀಸ್ ಬೆಂಗಾವಲು ಒದಗಿಸುವಂತೆ ಕೋರಲು ತಿಳಿಸಿದೆ.
ಈ ಮೇಲೆ ನಮೂದಿಸಿದ ಎಲ್ಲಾ ಸೂಚನೆಗಳನ್ನು ಕಟ್ಟು-ನಿಟ್ಟಾಗಿ ಅನುಸರಿಸಿ ಕಾರಾಗೃಹದ ಆಡಳಿತ ಮತ್ತು ಭದ್ರತೆಗೆ ಧಕ್ಕೆ ಉಂಟಾಗದಂತೆ ಸುಗಮವಾಗಿ ನಡೆಸಿಕೊಂಡು ಹೊಗುವುದು. ಒಂದು ವೇಳೆ ಸದರಿ ಬಂದಿಗೆ ಸಂಬಂಧಿಸಿದಂತೆ ಕಾರಾಗೃಹದ ಆಡಳಿತ ವೈಪಲ್ಯ ಎಂಬುದಾಗಿ ಯಾವುದಾದರೂ ದೂರುಗಳು ಲಿಖಿತವಾಗಿ ಹಾಗೂ ಸುದ್ದಿ ಮಾಧ್ಯಮಗಳಲ್ಲಿ ಪ್ರಸಾರಗೊಂಡ ಪಕ್ಷದಲ್ಲಿ ಕಾರಾಗೃಹದ ಮುಖ್ಯಸ್ಥರನ್ನೇ ನೇರ ಹೊಣೆಗಾರರನ್ನಾಗಿಸಿ ಸೂಕ್ತ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಸೂಚನೆ ನೀಡಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ