ಮಾತು ತಪ್ಪದ ನವರಸ ನಾಯಕ ಜಗ್ಗೇಶ್

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ನಿರ್ಭಯಾ ಗ್ಯಾಂಗ್ ರೇಪ್ ಹಾಗೂ ಅತ್ಯಾಚಾರ ಪ್ರಕರಣದ ನಾಲ್ವರು ಅಪರಾಧಿಗಳನ್ನು ಇಂದು ಗಲ್ಲಿಗೇರಿಸಲಾಗಿದ್ದು, ಅಪರಾಧಿಗಳನ್ನು ಗಲ್ಲಿಗೇರಿಸಿರುವ ಹ್ಯಾಂಗ್ ಮ್ಯಾನ್ ಪವನ್ ಜಲ್ಲಾದ್‍ಗೆ ನವರಸನಾಯಕ ಜಗ್ಗೇಶ್ ತಾವು ಕೊಟ್ಟ ಮಾತಿನಂತೆ 1 ಲಕ್ಷ ರೂ. ನೀಡಿದ್ದಾರೆ.

ಇಂದು ಮುಂಜಾನೆ 5:30ಕ್ಕೆ ನಿರ್ಭಯಾ ಅತ್ಯಾಚಾರಿಗಳನ್ನು ತಿಹಾರ್ ಜೈಲಿನಲ್ಲಿ ಗಲ್ಲಿಗೇರಿಸಲಾಯಿತು. ಅಪರಾಧಿಗಳನ್ನು ಗಲ್ಲಿಗೇರಿಸಿದ ಬೆನ್ನಲ್ಲೇ ಟ್ವೀಟ್ ಮಾಡಿರುವ ನಟ ಜಗ್ಗೇಶ್, ಕೊಟ್ಟ ಮಾತಿನಂತೆ 1 ಲಕ್ಷ ರೂ. ನಿರ್ಭಯಾ ಹಂತಕರ ಹ್ಯಾಂಗ್‍ಮ್ಯಾನ್‍ಗೆ ನನ್ನ ದೇಣಿಗೆ. ದೇವನೊಬ್ಬನಿರುವ ಅವ ಎಲ್ಲ ನೋಡುತಿರುವ. ಸತ್ಯದ ಹಾದಿಯಲ್ಲಿ ನಡೆದವಗೆ ಭಯವಿಲ್ಲ. ಅಸತ್ಯದ ಮಾರ್ಗಕ್ಕೆ ಶಿಕ್ಷೆ ತಪ್ಪೊಲ್ಲಾ. ಈ ದಿನಕ್ಕೆ ಹಲ್ಲುಕಚ್ಚಿ, ಎಂದು ಅಂತ್ಯ ದುಷ್ಟ ಕ್ರಿಮಿಗಳಿಗೆ ಎಂದು ಕಾಯುತ್ತಿದ್ದೆ. ಸುದ್ದಿ ಕೇಳಲು ನಿದ್ರೆಮಾಡದೆ ಕಾದೆ ಎಂದು ಬರೆದುಕೊಂಡಿದ್ದಾರೆ.

ಈ ಹಿಂದೆ ಹ್ಯಾಂಗ್‍ಮ್ಯಾನ್ ಪವನ್ ಜಲ್ಲಾದ್ ಅವರು ನಿರ್ಭಯಾ ಅತ್ಯಾಚಾರಿಗಳನ್ನು ಗಲ್ಲಿಗೇರಿಸಿದರೆ ಅದರಿಂದ ಬರುವ ದುಡ್ಡಿನಲ್ಲಿ ನನ್ನ ಮಗಳ ಮದುವೆ ಮಾಡುತ್ತೇನೆ. ಸರ್ಕಾರ ನನಗೆ ಒಂದು ಲಕ್ಷ ನೀಡುತ್ತದೆ. ನಾನು ಬಡತನದಿಂದ ಕುಸಿದು ಹೋಗಿದ್ದೆ. ಈಗ ಈ ಕರ್ತವ್ಯ ನಿರ್ವಹಿಸಲು ಹೇಳಿದ್ದಾರೆ. ಹೀಗಾದರೆ ನನಗೆ ಒಂದು ಲಕ್ಷ ದುಡ್ಡು ಬರುತ್ತದೆ. ಮಗಳ ಮದುವೆ ಮಾಡುತ್ತೇನೆ. ಗಲ್ಲಿಗೇರಿಸಲು ನಾನು ಸಿದ್ಧವಾಗಿದ್ದೇನೆ. ಇದು ನನ್ನ ಮಗಳ ಮದುವೆಗೆ ಹಣ ಹೊಂದಿಸುವುದಕ್ಕಾಗಿ ದೇವರೇ ಕೊಟ್ಟ ಅವಕಾಶ ಎಂದು ಭಾವುಕರಾಗಿ ಹೇಳಿಕೆ ನೀಡಿದ್ದರು.

ಪವನ್ ಅವರ ಮಾತು ಕೇಳಿ ಜಗ್ಗೇಶ್ ತಮ್ಮ ಟ್ವಿಟ್ಟರಿನಲ್ಲಿ, ರಾಕ್ಷಸ ಸಂಹಾರ ಮಾಡುವ ಈ ಕಾರ್ಯವನ್ನು ನೀವು ಮಾಡಿದರೆ ಒಂದು ಲಕ್ಷ ರೂ. ನಿಮಗೆ ನೀಡುತ್ತೇನೆ. ಮಗಳ ಮದುವೆ ಮಾಡುವೆ ಎನ್ನುವ ನಿಮ್ಮ ಮಾತು ನನ್ನನ್ನು ಭಾವುಕನಾಗಿಸಿದೆ. ಇಂದೇ ನಾನು ದುಡಿದ ಹಣದಲ್ಲಿ ನಿಮಗೆ ದುಡ್ಡು ಎತ್ತಿಡುವೆ ಎಂದು ಟ್ವೀಟ್ ಮಾಡಿದ್ದರು. ಕೊಟ್ಟ ಮಾತಿನಂತೆಯೇ ಜಗ್ಗೇಶ್ ಇಂದು ಹ್ಯಾಂಗ್‍ಮ್ಯಾನ್ ಪವನ್ ಅವರಿಗೆ ಒಂದು ಲಕ್ಷ ರೂ. ದೇಣಿಗೆ ನೀಡಿದ್ದಾರೆ.

Home add -Advt

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button