LatestUncategorized

*ನಟಿ ಅಭಿನಯ ಸೇರಿದಂತೆ ಮೂವರಿಗೆ ಜೈಲುಶಿಕ್ಷೆ; ಹೈಕೋರ್ಟ್ ಮಹತ್ವದ ತೀರ್ಪು*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಕಾಶಿನಾಥ್ ಅಭಿನಯದ ಅನುಭವ ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ಖ್ಯಾತಿ ಪಡೆದಿದ್ದ ನಟಿ ಅಭಿನಯ. ಕಿರುತೆರೆ, ಹಿರಿತೆರೆ ಎರಡರಲ್ಲೂ ಜನಪ್ರಿಯತೆ ಪಡೆದಿರುವ ನಟಿ ಅಭಿನಯ. ಇದೀಗ ಜೈಲುಶಿಕ್ಷೆಗೆ ಗುರಿಯಾಗಿದ್ದಾರೆ. ಅಭಿನಯ ಸೇರಿದಂತೆ ಮೂವರಿಗೆ ಜೈಲುಶಿಕ್ಷೆ ವಿಧಿಸಿ ಹೈಕೋರ್ಟ್ ಏಕಸದಸ್ಯಪೀಠ ಆದೇಶ ನೀಡಿದೆ.

ಕೌಟುಂಬಿಕ ದೌರ್ಜನ್ಯ, ವರದಕ್ಷಿಣೆ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ಅಭಿನಯ ಹಾಗೂ ಅವರ ತಾಯಿ ಜಯಮ್ಮ ಹಾಗೂ ಸಹೋದರ ಚಲುವರಾಜ್ ಸೇರಿ ಮೂವರಿಗೆ ಜೈಲುಶಿಕ್ಷೆ ವಿಧಿಸಲಾಗಿದೆ.

ನಟಿ ಅಭಿನಯ ಅವರ ಅಣ್ಣನ ಪತ್ನಿ ಲಕ್ಷ್ಮಿದೇವಿ 2002ರಲ್ಲಿ ಚಂದ್ರಾಲೇಔಟ್ ಠಾಣೆಯಲ್ಲಿ ವರದಕ್ಷಿಣೆ ಕಿರುಕುಳ, ಕೌಟುಂಬಿಕ ದೌರ್ಜನ್ಯ ಕೇಸ್ ದಾಖಲಿಸಿದ್ದರು. ವಿವಾಹದ ವೇಳೆ 80 ಸಾವಿರ ವರದಕ್ಷಿಣೆ ಪಡೆದಿದ್ದರು. ಬಳಿಕ ವಿವಾಹದ ನಂತರ 1 ಲಕ್ಷ ವರದಕ್ಷಿಣೆ, ಮಗು ಹುಟ್ಟಿದ ಬಳಿಕವೂ ವರದಕ್ಷಿಣೆಗಾಗಿ ಬೇಡಿಕೆ ಇಟ್ಟಿದ್ದರು. ಅಲ್ಲದೇ ಹಾವಿನಿಂದ ಕಚ್ಚಿಸಿ ಕೊಲೆಯತ್ನ, ವೇಶ್ಯಾವಾಟಿಕೆಗೆ ತಳ್ಳಲೂ ಯತ್ನಿಸಿದ್ದರು ಎಂದು ಆರೋಪಿಸಿ ಲಕ್ಷ್ಮಿದೇವಿ ಅವರು ಪತಿ, ಅತ್ತೆ, ನಾದಿನಿ ಸೇರಿದಂತೆ ಐವರ ವಿರುದ್ಧ ದೂರು ದಾಖಲಿಸಿದ್ದರು.
ಈ ಪ್ರಕರಣದ ಆರೋಪಿಗಳಾದ ಶ್ರೀನಿವಾಸ್ ಹಾಗೂ ರಾಮಕೃಷ್ಣ ಎಂಬುವವರು ಸಾವನ್ನಪ್ಪಿದ್ದಾರೆ. ವಿಚಾರಣೆ ನಡೆಸಿದ ಹೈಕೋರ್ಟ್ ಏಕಸದಸ್ಯಪೀಠ ಈಗ ಅಭಿನಯ ಅವರಿಗೆ 2 ವರ್ಷ, ಅಭಿನಯ ತಾಯಿ ಜಯಮ್ಮ ಅವರಿಗೆ 5 ವರ್ಷ ಹಾಗೂ ಸಹೋದರ ಚಲುವರಾಜ್ ಗೆ 2 ವರ್ಷ ಜೈಲುಶಿಕ್ಷೆ ವಿಧಿಸಿದೆ.

ಏನಿದು ಪ್ರಕರಣ:
1998ರಲ್ಲಿ ಅಭಿನಯ ಅಣ್ಣ ಶ್ರೀನಿವಾಸ್ ಜೊತೆ ಲಕ್ಷ್ಮಿದೇವಿ ವಿವಾಹವಾಗಿದ್ದರು. ಮದುವೆಯ ವೇಳೆ ಶ್ರೀನಿವಾಸ್ ಹಾಗೂ ಮನೆಯವರು 80 ಸಾವಿರ ಹಣ 250 ಗ್ರಾಂ ಚಿನ್ನಾಭರಣ ಪಡೆದಿದ್ದರು. ಮದುವೆಯಾಗಿ ಮೂರು ತಿಂಗಳ ಬಳಿಕ ಕಿರುಕುಳ ನೀಡಲು ಆರಂಭಿಸಿದ್ದರು. 1 ಲಕ್ಷ ಹಣ ತರುವಂತೆ ಲಕ್ಷ್ಮಿದೆವಿಗೆ ಕಿರುಕುಳ ನೀಡಲಾರಂಭಿಸಿದ್ದರು. ಪತಿ ಹಾಗೂ ಮನೆಯವರು ಹಿಂಸೆಕೊಟ್ಟು ಲಕ್ಷ್ಮಿದೇವಿ ಅವರನ್ನು ತವರು ಮನೆಗೆ ಕಳುಹಿಸಿದ್ದರು. 2002ರಲ್ಲಿ ಲಕ್ಷ್ಮಿದೇವಿ ಚಂದ್ರಾಲೇಔಟ್ ಠಾಣೆಯಲ್ಲಿ ಐವರ ವಿರುದ್ಧ ಪ್ರಕರಣ ದಾಖಲಿಸಿದ್ದರು.

ಚಂದ್ರಾಲೇಔಟ್ ಪೊಲೀಸರ ಚಾರ್ಜ್ ಶೀಟ್ ಆಧರಿಸಿ ಮ್ಯಾಜಿಸ್ಟ್ರೇಟ್ ಕೋರ್ಟ್ ಐವರು ಆರೋಪಿಗಳಿಗೆ 2012ರಲ್ಲಿ ತಲಾ 2 ವರ್ಷ ಜೈಲುಶಿಕ್ಷೆ ಪ್ರಕಟಿಸಿತ್ತು. ಬಳಿಕ ಅಭಿನಯ ಜಿಲ್ಲಾ ನ್ಯಾಯಾಲಯದ ಮೆಟ್ಟಿಲೇರಿದ್ದರು. ಜಿಲ್ಲಾ ನ್ಯಾಯಾಲಯ ಐವರು ಆರೋಪಿಗಳನ್ನು ಖುಲಾಸೆಗೊಳಿಸಿ ಆದೇಶ ಹೊರಡಿಸಿತ್ತು. ಜಿಲ್ಲಾ ನ್ಯಾಯಾಲಯದ ಆದೇಶ ಪ್ರಶ್ನಿಸಿ ಲಕ್ಷ್ಮಿದೇವಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಈನಡುವೆ ಆರೋಪಿಗಳಾದ ಶ್ರೀನಿವಾಸ್, ರಾಮಕೃಷ್ಣ ಸಾವನ್ನಪ್ಪಿದ್ದಾರೆ. ಈಗ ಅಭಿನಯ, ಚಲುವರಾಜ್ ಅವರಿಗೆ ತಲಾ 2 ವರ್ಷ ಹಾಗೂ ಅಭಿನಯ ತಾಯಿ ಜಯಮ್ಮ ಅವರಿಗೆ 5 ವರ್ಷ ಜೈಲುಶಿಕ್ಷೆ ವಿಧಿಸಿ ಹೈಕೋರ್ಟ್ ಏಕಸದಸ್ಯಪೀಠ ತೀರ್ಪು ನೀಡಿದೆ.

ಲಕ್ಷ್ಮಿದೇವಿ ಹೇಳಿದ್ದೇನು?:
ಹೈಕೋರ್ಟ್ ತೀರ್ಪಿನ ಬೆನ್ನಲ್ಲೇ ಸುದ್ದಿಗಾರರೊಂದಿಗೆ ಪ್ರತಿಕ್ರಿಯಿಸಿರುವ ಲಕ್ಷ್ಮೀದೇವಿ, ನಾನು ನನ್ನ ಗಂಡನ ಮನೆಯಲ್ಲಿ ನರಕಯಾತನೆ ಅನುಭವಿಸಿದ್ದೆ. ಹಣಕ್ಕಾಗಿ ಕಿರುಕುಳ ನೀಡುತ್ತಿದ್ದರು. ತಿನ್ನಲು ಒಂದು ರೊಟ್ಟಿ, ಸ್ನಾನಕ್ಕೆ ಒಂದು ಬಕೆಟ್ ನೀರು ಕೊಡುತ್ತಿದ್ದರು. ಪರಪುರುಷರ ಜೊತೆ ಸಹಕರಿಸುವಂತೆ ಹೇಳುತ್ತಿದ್ದರು. ವೇಶ್ಯಾವಾಟಿಕೆಗೆ ತಳ್ಳಲೂ ಯತ್ನಿಸಿದ್ದಾರೆ. ನಾನು ಅದಕ್ಕೆಲ್ಲ ಸಹಕರಿಸದಿದ್ದಾಗ ಚಿತ್ರಹಿಂಸೆ ಕೊಡುತ್ತಿದ್ದರು. ನನ್ನ ಪತಿ ವಿಧಾನಸೌಧದಲ್ಲಿ ಕೆಲಸ ಮಾಡುತ್ತಿದ್ದರು. ವಿಪರೀತವಾಗಿ ಕುಡಿಯುವುದು, ಇಸ್ಪೀಟ್ ಆಡುವುದು ಮಾಡುತ್ತಿದ್ದರು. ಮಗನ ಕೆಟ್ಟಚಟಗಳ ಬಗ್ಗೆ ಗೊತ್ತಿದ್ದೂ ಅವರ ತಾಯಿ ಮದುವೆ ಮಾಡಿಸಿದ್ದಾರೆ. ಮದುವೆಯ ಬಳಿಕ ಕಿರುಕುಳ, ಹಿಂಸೆ ಕೊಟ್ಟಿದ್ದಾರೆ ಎಂದು ನೋವು ತೋಡಿಕೊಂಡಿದ್ದಾರೆ.

ಹಾವಿನಿಂದ ಕಚ್ಚಿಸಿ ಕೊಲ್ಲಲು ಯತ್ನಿಸಿದ್ದಾರೆ. ಕಾಲೇಜಿಗೆ ಕೆಲಸಕ್ಕೆ ಹೋಗುತ್ತಿದ್ದೆ. ಆ ಕೆಲಸವನ್ನೂ ತೆಗೆದು ಹಾಕಿದ್ದರು. ಜೀವನಕ್ಕಾಗಿ ಕೆಲಸ ಮಾಡಿಕೊಂಡಿದ್ದೆ. ನಿರಂತರ 20 ವರ್ಷಗಳ ಕಾಲ ಹೋರಾಟದಲ್ಲಿ ತುಂಬಾ ಕಷ್ಟಪಟ್ಟಿದ್ದೇನೆ. ಅವರ ವಿರುದ್ಧ ಕೇಸ್ ದಾಖಲಾಗುತ್ತಿದ್ದಂತೆ ನಮ್ಮ ಬಳಿ ದುಡ್ದಿದೆ ನಾವ್ಯಾಕೆ ತೊಂದರೆ ಕೊಡಲಿ, ಯಾವ ಸಮಸ್ಯೆಯನ್ನೂ ಕೊಟ್ಟಿಲ್ಲ ಎಂದು ಹೇಳಿಕೆ ಕೊಟ್ಟಿದ್ದಾರೆ. ಈವರೆಗೆ ಒಂದೇ ಒಂದು ದಿನ ನೋಡಲು ಬಂದಿಲ್ಲ, ಹೇಗಿದ್ದೀಯ ನಾವು ನಿನ್ನಜೊತೆ ಇದ್ದೇವೆ ಎಂದು ಒಂದೇ ಒಂದು ದಿನ ಮಾತನ್ನೂ ಆಡಿಲ್ಲ. ಇವರು ತೊಂದರೆ, ಕಿರುಕುಳ ಕೊಟ್ಟಿಲ್ಲ ಎಂದಿದ್ದರೆ ನಾನ್ಯಾಕೆ ಹೊರಬಂದು ದೂರು ದಾಖಲಿಸುತ್ತಿದ್ದೆ. ತುಂಬಾ ಸಮಸ್ಯೆಯಾಗಿದ್ದಕ್ಕೆ ಹೋರಾಟ ನಡೆಸಿದ್ದೇನೆ. ಈಗ ಹೈಕೋರ್ಟ್ ತೀರ್ಪು ನೀಡಿದೆ. ಒಂದೆಡೆ ಸಮಾಧಾನ ಇನ್ನೊಂದೆಡೆ ದು:ಖ ಎರಡೂ ಆಗುತ್ತಿದೆ ಎಂದು ಅಳಲು ತೋಡಿಕೊಂಡಿದ್ದಾರೆ.

*ಜನಾರ್ಧನ ರೆಡ್ಡಿ ರಾಜಕಾರಣಕ್ಕೆ ಮುನ್ನುಡಿಯಾಗಲಿದೆಯಾ ನೂತನ ಮನೆ ಗೃಹ ಪ್ರವೇಶ?*

https://pragati.taskdun.com/janardhana-reddyghuhapraveshagangavatikoppala/

*ದಂಗುಬಡಿಸಿದ ಕೇಂದ್ರ ಸರಕಾರದ ಜಾಹೀರಾತು ವೆಚ್ಚ* !

https://pragati.taskdun.com/center-spends-more-than-3000-cr-to-media-advretisments/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button