ಬೆಳಗಾವಿ: ಎಡಿಜಿಪಿ ಅಲೋಕ್‍ಕುಮಾರ್ ಗಂಭೀರ ಎಚ್ಚರಿಕೆ

ಪ್ರಗತಿ ವಾಹಿನಿ ಸುದ್ದಿ, ಬೆಳಗಾವಿ;
ಕರ್ನಾಟಕ – ಮಹಾರಾಷ್ಟ್ರ ಗಡಿ ವಿವಾದದ ಅಂತಿಮ ವಿಚಾರಣೆ ಸುಪ್ರೀಂಕೋರ್ಟನಲ್ಲಿ ಸೆ.30ರಂದು ನಡೆಯಲಿರುವ ಹಿನ್ನೆಲೆಯಲ್ಲಿ ರಾಜ್ಯದ ಹಾಗೂ ಬೆಳಗಾವಿ ಜಿಲ್ಲಾ ಪೊಲೀಸ್ ಇಲಾಖೆ ಹೈ ಅಲರ್ಟ್ ಆಗಿದ್ದು, ಎಡಿಜಿಪಿ ಅಲೋಕ್‍ಕುಮಾರ್ ಮಂಗಳವಾರ ನಿಪ್ಪಾಣಿಯಲ್ಲಿ ಪೊಲೀಸ್ ಅಧಿಕಾರಿಗಳ ಸಭೆ ನಡೆಸಿದರು.

ನಿಪ್ಪಾಣಿಯ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಂಡಿದ್ದ ಸಭೆಯಲ್ಲಿ ರಾಜ್ಯದ ಬೆಳಗಾವಿ, ವಿಜಯಪುರ, ಬೀದರ, ಕಲಬುರಗಿ ಜಿಲ್ಲೆಗಳ ಪೊಲೀಸ್ ವರಿಷ್ಠಾಧಿಕಾರಿಗಳು ನೇರವಾಗಿ ಪಾಲ್ಗೊಂಡಿದ್ದರೆ ಮಹಾರಾಷ್ಟ್ರದ ಕೊಲ್ಲಾಪುರ, ಸಾಂಗಲಿ, ಸಾತಾರಾ, ಸಿಂಧದುರ್ಗ ಜಿಲ್ಲೆಯ ಜಿಲ್ಲಾ  ಪೊಲೀಸ್ ವರಿಷ್ಠಾಧಿಕಾರಿಗಳು ವಿಡಿಯೋ ಕಾನ್ಫರೆನ್ಸ್ ಮೂಲಕ ಪಾಲ್ಗೊಂಡರು.

ನ್ಯಾಯಾಲಯದ ತೀರ್ಪಿನ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ವಹಿಸುವ ಮತ್ತು ಗಡಿ ಭಾಗದಲ್ಲಿ ನಡೆಯುವ ಇನ್ನಿತರ ಅಪರಾಧದ ಪ್ರಕರಣಗಳ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.

ಕಡಕ್ ಎಚ್ಚರಿಕೆ
ಗಡಿ ವಿವಾದದ ಬಗ್ಗೆ ಚರ್ಚಿಸಲು ಯಾರೇ ರಾಜ್ಯದೊಳಗೆ ಬಂದರೂ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅಲೋಕ್ ಕುಮಾರ್ ಎಚ್ಚರಿಕೆ ನೀಡಿದ್ದಾರೆ. ಬೇರೆ ಖಾಸಗಿ ಕಾರ್ಯಕ್ರಮಗಳಿಗೆ ಬಂದರೆ ತೊಂದರೆ ಇಲ್ಲ ಎಂದರು. ಗಡಿ ಭಾಗದ ಬೆಳಗಾವಿ ಜಿಲ್ಲೆಯ 21 ಚೆಕ್ ಪೋಸ್ಟ್‍ಗಳಲ್ಲಿ ಸೂಕ್ತ ಬಂದೋಬಸ್ತ್ ಮಾಡಲಿದ್ದೇವೆ ಎಂದರು.
ಸಭೆಯಲ್ಲಿ ಉತ್ತರ ವಲಯ ಐಜಿಪಿ ಸತೀಶ್ ಕುಮಾರ್, ನಗರ ಪೊಲೀಸ್ ಆಯುಕ್ತ ಡಾ. ಎಂ.ಬಿ.ಬೋರಲಿಂಗಯ್ಯ, ಜಿಲ್ಲಾ ಪೆೊಲೀಸ್ ವರಿಷ್ಠಾಧಿಕಾರಿ ಡಾ. ಸಂಜೀವ್ ಪಾಟೀಲ್, ಹೆಚ್ಚುವರಿ ಪೆೊಲೀಸ್ ವರಿಷ್ಠಾಧಿಕಾರಿ ಮಹಾನಿಂಗ ನಂದಗಾವಿ ಸೇರಿದಂತೆ ಪೊಲೀಸ್ ಅಧಿಕಾರಿಗಳು ಪಾಲ್ಗೊಂಡಿದ್ದರು.

ಪುಂಡರಿಗೆ ಎಚ್ಚರಿಕೆ
ಎಂಇಎಸ್ ಅಥವಾ ಇನ್ಯಾರೇ ಆದರೂ ಪುಂಡಾಟಿಕೆ ನಡೆಸಿದರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಎಡಿಜಿಪಿ ಅಲೋಕ್‍ಕುಮಾರ್ ಎಚ್ಚರಿಕೆ ನೀಡಿದ್ದಾರೆ.

ಡಿ.19ರಿಂದ ವಿಧಾನಮಂಡಲ ಅಧಿವೇಶನ ಆರಂಭವಾಗುತ್ತಿದ್ದು ಸಿದ್ಧತೆಯ ಪರಿಶೀಲನೆಗೆ ಭೇಟಿ ನೀಡಿದ್ದೇನೆ. ಅಧಿವೇಶನದ ವೇಳೆ ಮೀಸಲಾತಿಗೆ ಆಗ್ರಹಿಸಿ ವಿವಿಧ ಸಮುದಾಯದವರು ಪ್ರತಿಭಟನೆ ನಡೆಸುವ ಸಾಧ್ಯತೆ ಇದೆ. ಯಾವುದೇ ಅಹಿತರಕ ಘಟನೆಗೆ ಆಸ್ಪದವಾಗದಂತೆ ಸೂಕ್ತ ಭದ್ರತೆ ಕಲ್ಪಿಸಲಾಗುವುದು ಎಂದರು.

ಅಧಿವೇಶನದ ಭದ್ರತೆಗೆ 8 ಎಸ್‍ಪಿ, 38 ಡಿಎಸ್‍ಪಿ, 80 ಇನ್ಸ್‍ಪೆಕ್ಟರ್‍ಗಳ ನಿಯೋಜನೆಯಾಗಲಿದೆ. 4 ಸಾವಿರ ಪೊಲೀಸ್ ಸಿಬ್ಬಂದಿ ಕಾರ್ಯ ನಿರ್ವಹಿಸುವರು ಎಂದು ತಿಳಿಸಿದರು.
ಶಾಂತ ರೀತಿಯಲ್ಲಿ ಯಾರೇ ಪ್ರತಿಭಟನೆ ನಡೆಸಿದರೂ ಅಡ್ಡಿ ಮಾಡುವುದಿಲ್ಲ ಎಂದು ತಿಳಿಸಿದರು.

*ಕೇಂದ್ರ ರಕ್ಷಣಾ ಸಚಿವರನ್ನು ಭೇಟಿ ಮಾಡಿದ ಸಿಎಂ ಬೊಮ್ಮಾಯಿ: ಬೆಳಗಾವಿ ವಿಷಯ ಪ್ರಸ್ತಾಪಿಸಿದ್ದೇಕೆ?*

https://pragati.taskdun.com/cm-bommai-met-union-defense-minister-request-to-hand-over-732-24-acres-area-of-belgaum-to-the-state/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button