ಪ್ರಗತಿವಾಹಿನಿ ಸುದ್ದಿ; ಮೂಡಿಗೆರೆ: ನನಗೆ ನಿಮ್ಮ ಹೂವಿನ ಹಾರ, ಜೈಕಾರ ಬೇಡ. ನಾನು ಇದಕ್ಕಾಗಿ ಬರಲಿಲ್ಲ. ಮುಂದಿನ ಚುನಾವಣೆಯಲ್ಲಿ ಮೂಡಿಗೆರೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಿಸಿ ವಿಧಾನಸೌಧಕ್ಕೆ ಕಳಿಸಿದಾಗ ನನಗೆ ಹೂವಿನ ಹಾರ, ಜೈಕಾರ ಹಾಕಿದಂತೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಮೂಡಿಗೆರೆ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಡಿ.ಕೆ. ಶಿವಕುಮಾರ್, ಚುನಾವಣೆಯಲ್ಲಿ ನೀವು ಕಾಂಗ್ರೆಸ್ ಪಕ್ಷಕ್ಕೆ ಶಕ್ತಿ ತುಂಬಬೇಕು. ಯಾರೇ ಅಭ್ಯರ್ಥಿ ಆದರೂ ನಿಜವಾದ ಅಭ್ಯರ್ಥಿಗಳು ನಾನು, ಸಿದ್ದರಾಮಯ್ಯ ಹಾಗೂ ಮಲ್ಲಿಕಾರ್ಜುನ ಖರ್ಗೆ ಅವರು. ಹೀಗಾಗಿ ಪಕ್ಷ ಯಾರಿಗೇ ಟಿಕೆಟ್ ಕೊಟ್ಟರೂ ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು. ಈ ಕ್ಷೇತ್ರ ಬಹಳ ಜನನಾಯಕರನ್ನು ನೀಡಿದೆ. ಮುಂದಿನ ಚುನಾವಣೆಯಲ್ಲಿ ಕ್ಷೇತ್ರಕ್ಕೆ ಯಾವ ಮೀಸಲಾತಿ ಸಿಗುತ್ತದೋ ನೋಡಬೇಕು. ಇಲ್ಲಿನ ಜನ ವಿದ್ಯಾವಂತರು, ಬುದ್ದಿವಂತರು ಇದ್ದಾರೆ ಎಂದರು.
ಕಾಂಗ್ರೆಸ್ ಪಕ್ಷಕ್ಕೆ ಅದರದೇ ಆದ ಸಿದ್ಧಾಂತ ಇದೆ. ಕಾಂಗ್ರೆಸ್ ಜಾತಿ ಮೇಲಲ್ಲ, ನೀತಿ ಮೇಲೆ ನಿಂತಿದೆ. ದೇಶದಲ್ಲಿ ಸ್ವಾತಂತ್ರ್ಯಕ್ಕಾಗಿ ಗಾಂಧಿ ಅವರು ಬ್ರಿಟೀಷರೇ ಭಾರತ ಬಿಟ್ಟು ತೊಲಗಿ ಎಂದು ಕರೆ ನೀಡಿದರು. ಮೋದಿ ಅವರ ಸರ್ಕಾರ ಈ ದೇಶದಲ್ಲಿ ಅಧಿಕಾರಕ್ಕೆ ಬಂದ ನಂತರ ಜನರಲ್ಲಿ ಧರ್ಮ, ದ್ವೇಷದ ವಿಷ ಬೀಜ ಬಿತ್ತುತ್ತಿದ್ದಾರೆ. ಅವರು ಭಾವನೆಗಳ ಮೇಲೆ ರಾಜಕೀಯ ಮಾಡುತ್ತಿದ್ದಾರೆ. ರಾಹುಲ್ ಗಾಂಧಿ ಅವರು ಇದರ ವಿರುದ್ಧ ಹೋರಾಡಿ ದೇಶವನ್ನು ಒಂದುಗೂಡಿಸಲು ಭಾರತ ಜೋಡೋ ಯಾತ್ರೆ ಮಾಡುತ್ತಿದ್ದಾರೆ. ರಾಹುಲ್ ಗಾಂಧಿ ಹಾಗೂ ಸೋನಿಯಾ ಗಾಂಧಿ ಅವರು ಇಬ್ಬರೂ ಪ್ರಧಾನಮಂತ್ರಿ ಆಗಬಹುದಿತ್ತು. ಆದರೆ ಆ ಸ್ಥಾನ ತ್ಯಾಗ ಮಾಡಿ, ದೇಶದ ಹಿತ ಕಾಯಲು ಆರ್ಥಿಕ ತಜ್ಞ ಮನಮೋಹನ್ ಸಿಂಗ್ ಅವರನ್ನು ಪ್ರಧಾನಿ ಮಾಡಿದರು. ಮನಮೋಹನ್ ಸಿಂಗ್ ಅವರು ತಮ್ಮ ಅವಧಿಯಲ್ಲಿ ಜನಪರ ಕಾಯ್ದೆ ಹಾಗೂ ಯೋಜನೆಗಳನ್ನು ಜಾರಿಗೆ ತಂದರು. ಆಹಾರ ಭದ್ರತೆ, ಶಿಕ್ಷಣ ಹಕ್ಕು, ಉದ್ಯೋಗ ಭದ್ರತೆ, ಆರೋಗ್ಯ ಸೌಲಭ್ಯ ಸೇರಿದಂತೆ ಹಲವು ಯೋಜನೆ ತಂದರು ಎಂದರು.
ಇಂದಿರಾ ಗಾಂಧಿ, ನೆಹರೂ, ಲಾಲ್ ಬಹಾದ್ದೂರ್ ಶಾಸ್ತ್ರಿ, ರಾಜೀವ್ ಗಾಂಧಿ ಅವರು ಪ್ರಧಾನಮಂತ್ರಿ ಆಗಿದ್ದಾಗ ದೇಶದ ಪ್ರಗತಿಗೆ ಪೂರಕವಾದ ಯೋಜನೆ ರೂಪಿಸಲಾಗಿತ್ತು. ಈ ಇತಿಹಾಸ ತಿರುಚಲು ಸಾಧ್ಯವಿಲ್ಲ. ಇಂದಿರಾ ಗಾಂಧಿ ಅವರು ಬ್ಯಾಂಕ್ ರಾಷ್ಟ್ರೀಕರಣ ಮಾಡಿ ದೇಶದ ಬಡವರಿಗೆ ಬ್ಯಾಂಕಿಂಗ್ ಸೌಲಭ್ಯ ಸಿಗುವಂತೆ ಮಾಡಿದರು. ರಾಹುಲ್ ಗಾಂಧಿ ಅವರಿಗೆ ಭಾರತ ಜೋಡೋ ಯಾತ್ರೆ ಸಂದರ್ಭದಲ್ಲಿ ವಯಸ್ಸಾದ ಮಹಿಳೆ ಸೌತೇಕಾಯಿ ತಂದು ಕೊಟ್ಟು, ಇದು ನಿಮ್ಮ ಅಜ್ಜಿ ಇಂದಿರಾಗಾಂಧಿಯವರು ಕೊಟ್ಟ ಜಮೀನಿನಲ್ಲಿ ಬೆಳೆದದ್ದು ಎಂದರು. ಇದು ಈ ದೇಶದ ಇತಿಹಾಸ. ಈ ದೇಶಕ್ಕೆ ಶಕ್ತಿ ತುಂಬಲು ಬಡವರಿಗೆ ಜಮೀನು, ನಿವೇಶನ ನೀಡಿದ್ದು, ಬ್ಯಾಂಕ್ ರಾಷ್ಟ್ರೀಕರಣ ಮಾಡಿದ್ದು, ಉದ್ಯೋಗ ಮಾಡಿದ್ದು ಕಾಂಗ್ರೆಸ್ ಪಕ್ಷ. ಬಿಜೆಪಿ ಇಂತಹ ಒಂದು ಯೋಜನೆ ಜಾರಿ ತಂದಿಲ್ಲ. ಅವರು ನೋಟು ರದ್ದು, ಆರ್ಟಿಕಲ್ 370, ಏಕರೂಪ ನಾಗರಿಕ ಕಾಯ್ದೆ, ಇಂತಹ ಭಾವನಾತ್ಮಕ ವಿಚಾರಗಳತ್ತ ಗಮನಹರಿಸಿದ್ದಾರೆ. ಭಾವನೆ ಬಿಟ್ಟು ಜನರ ಹೊಟ್ಟೆ ತುಂಬುವ ಯಾವ ಕಾರ್ಯಕ್ರಮವನ್ನು ಬಿಜೆಪಿ ಸರ್ಕಾರ ನೀಡಿದೆ?
ನಿನ್ನೆ ಶಿವಮೊಗ್ಗದಲ್ಲಿ ಜನಾಕ್ರೋಶ ಸಮಾವೇಶ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೆ. ಮಲೆನಾಡಿನ ಜನರ ಸಮಸ್ಯೆ ಬಗ್ಗೆ ರಮೇಶ್ ಹೆಗಡೆ ಅವರ ನೇತೃತ್ವದಲ್ಲಿ ಸಮಿತಿ ರಚನೆ ಮಾಡಿದ್ದೆವು. ಅವರು ಅಧ್ಯಯನ ಮಾಡಿ ಸಮಸ್ಯೆಗಳ ಬಗ್ಗೆ ಪಟ್ಟಿ ನೀಡಿದ್ದಾರೆ. ಈ ಭಾಗದಲ್ಲಿ ಒತ್ತುವರಿ, ಬಗರ್ ಹುಕುಂ ಸಮಸ್ಯೆಗಳಿರುವುದಾಗಿ ತಿಳಿಸಿದ್ದಾರೆ. ಕಸ್ತೂರಿ ರಂಗನ್ ವರದಿ, ರಸ್ತೆ ಸಂಪರ್ಕ, ಕಾಫಿ ಬೆಳೆಗಾರರ ಸಮಸ್ಯೆ, ರಸಗೊಬ್ಬರ, ಆಶ್ರಯ ಮನೆ ವಿಚಾರವಾಗಿ ಪಟ್ಟಿ ನೀಡಿದ್ದಾರೆ ಎಂದು ತಿಳಿಸಿದರು.
ಮಲೆನಾಡು ಹಾಗೂ ಕರಾವಳಿ ಪ್ರದೇಶಕ್ಕೆ ಕಾಂಗ್ರೆಸ್ ಪಕ್ಷ ಪ್ರತ್ಯೇಕ ಪ್ರಣಾಳಿಕೆ ನೀಡುತ್ತದೆ. ಬಿಜೆಪಿ ಸರ್ಕಾರ ಕಳೆದ ಬಾರಿ ಚುನಾವಣೆಯಲ್ಲಿ ಕೊಟ್ಟ ಪ್ರಣಾಳಿಕೆ ನೋಡಿ. ಒಂದು ತಿಂಗಳಲ್ಲಿ ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿ 1 ಲಕ್ಷದವರೆಗೆ ಸಾಲ ಮನ್ನಾ ಮಾಡುತ್ತೇವೆ ಎಂದು ತಿಳಿಸಿದರು. ಸಾಲ ಮನ್ನಾ ಆಯಿತೇ? ನಿಮ್ಮ ಖಾತೆಗಳಿಗೆ 15 ಲಕ್ಷ ಹಾಕುತ್ತೇವೆ ಎಂದಿದ್ದರು. ನಿಮ್ಮ ಖಾತೆಗೆ ಹಣ ಬಂತಾ? ಕೇವಲ ಸುಳ್ಳಿನ ಕಂತೆ ಮೇಲೆ ರಾಜಕೀಯ ಮಾಡುತ್ತಾರೆ. ಅವರು ಕೊಟ್ಟ 600 ಭರವಸೆಗಳಲ್ಲಿ 550 ಭರವಸೆ ಈಡೇರಿಸಿಲ್ಲ. ಈ ಬಗ್ಗೆ ದಿನನಿತ್ಯ ಪ್ರಶ್ನೆ ಕೇಳಿದರೂ ಯಾವುದೇ ಉತ್ತರ ನೀಡುತ್ತಿಲ್ಲ.
ಕೋವಿಡ್ ಸಮಯದಲ್ಲಿ ನೀವು ನರಳಿದ್ದೀರಿ. ಹಲವರು ಸತ್ತಿದ್ದಾರೆ, ಹಲವರು ಆಸ್ಪತ್ರೆ ಸೇರಿದ್ದಾರೆ. ಈ ಸಂದರ್ಭದಲ್ಲಿ ವಲಸೆ ಕಾರ್ಮಿಕರಿಂದ ಮೂರು ಪಟ್ಟು ಪ್ರಯಾಣದರ ವಸೂಲಿಗೆ ಮುಂದಾಗಿದ್ದರು. ಆದರೆ ನಾನು ನಿಮಗೆ 1 ಕೋಟಿ ಚೆಕ್ ನೀಡುತ್ತೇನೆ, ಅವರಿಗೆ ಉಚಿತ ಪ್ರಯಾಣ ವ್ಯವಸ್ಥೆ ಮಾಡಿ ಎಂದು ಆಗ್ರಹಿಸಿದೆ. ಆಗ ಸರ್ಕಾರ ಒಂದು ವಾರಗಳ ಕಾಲ ಉಚಿತ ಪ್ರಯಾಣ ವ್ಯವಸ್ಥೆ ಮಾಡಿತು.
ಇನ್ನು ಸಾಂಪ್ರದಾಯಿಕ ವೃತ್ತಿ ಅವಲಂಬಿತರಿಗೆ ತಿಂಗಳಿಗೆ 10 ಸಾವಿರ ರು. ಪರಿಹಾರ ನೀಡುವಂತೆ ಆಗ್ರಹಿಸಿದೆವು. ಆದರೆ ಒಂದು ತಿಂಗಳಿಗೆ 5 ಸಾವಿರ ರು. ಪರಿಹಾರ ಘೋಷಣೆ ಮಾಡಿದರು. ಆದರೆ ಅದೂ ಬರಲಿಲ್ಲ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದವರಿಗೆ ಚಿಕಿತ್ಸೆ ವೆಚ್ಚದ ಹಣ ನೀಡುತ್ತೇವೆ ಎಂದರು, ಆದರೆ ನೀಡಲಿಲ್ಲ. 4.5 ಲಕ್ಷ ಜನ ಕೊರೋನಾಗೆ ಸತ್ತಿದ್ದಾರೆ. ಆದರೆ ಬಿಜೆಪಿ ಸರ್ಕಾರ ಸತ್ತವರಿಗೂ ಪರಿಹಾರ ನೀಡಿಲ್ಲ ಎಂದು ವಾಗ್ದಾಳಿ ನಡೆಸಿದರು.
ಚಾಮರಾಜನಗರದಲ್ಲಿ 36 ಜನ ಆಕ್ಸಿಜನ್ ಇಲ್ಲದೇ ಸತ್ತರು. ಒಬ್ಬ ಮಂತ್ರಿ ಹೋಗಿ ಅಲ್ಲಿನ ಜನರನ್ನು ಭೇಟಿ ಮಾಡಲಿಲ್ಲ. ನಂತರ ನ್ಯಾಯಾಲಯ ಮಧ್ಯಪ್ರವೇಶಿಸಿತು. ನಂತರ ನಾನು, ಧ್ರುವನಾರಾಯಣ ಅವರು ಪ್ರತಿಯೊಬ್ಬರ ಮನೆಗೂ ಹೋಗಿ ಪ್ರತಿ ಕುಟುಂಬಕ್ಕೆ 1 ಲಕ್ಷ ಪರಿಹಾರ ನೀಡಿ ಸಾಂತ್ವಾನ ಹೇಳಿದೆವು. ಈ ಸರ್ಕಾರಕ್ಕೆ ಕಣ್ಣು, ಕಿವಿ, ಹೃದಯ ಯಾವುದು ಇಲ್ಲ. ಬಡವರು ಸಾಯುತ್ತಿದ್ದಾರೂ ಸಹಾಯ ಮಾಡುವುದಿಲ್ಲ. ಬದಲಿಗೆ ಅವರಿಗೆ ತೊಂದರೆ ನೀಡುತ್ತಿದ್ದಾರೆ. ಈ ಭಾಗದಲ್ಲಿ ಕೊವಿಡ್ ಸಮಸ್ಯೆ ಇದ್ದಾಗ ಮೋಟಮ್ಮ ಹಾಗೂ ಅವರ ಪುತ್ರಿ ನಯನಾ ಅವರು ತಮ್ಮ ಕೈಲಾದ ಮಟ್ಟಿಗೆ ಸಹಾಯ ಮಾಡಿದ್ದಾರೆ.
ನಿಮ್ಮ ಅಧಿಕಾರ ಅವಧಿಯಲ್ಲಿ ಜನರ ಬದುಕಿನಲ್ಲಿ ಬದಲಾವಣೆ ತರಲು ಯಾವ ನಿರ್ಧಾರ ಕೈಗೊಂಡಿದ್ದೀರಿ ಎಂದು ಸಿ. ಟಿ ರವಿ, ಯಡಿಯೂರಪ್ಪ ಹಾಗೂ ಬೊಮ್ಮಾಯಿ ಅವರನ್ನು ಕೇಳಲು ಬಯಸುತ್ತೇನೆ. ಬೆಲೆ ಏರಿಕೆಯಿಂದ ಜನರ ಜೇಬಿಗೆ ಕತ್ತರಿ ಹಾಕಲಾಗುತ್ತಿದೆ. ಆದಾಯ ಡಬಲ್ ಆಗುತ್ತೆ ಎಂದರು. ಆಯಿತಾ? ರಸಗೊಬ್ಬರ, ಪೆಟ್ರೋಲ್, ಅಡುಗೆ ಅನಿಲ ಸಿಲಿಂಡರ್ ಬೆಲೆ ಹೆಚ್ಚಾಗಿದೆ. ಆದಾಯ ಪಾತಾಳಕ್ಕೆ ಕುಸಿದು, ವೆಚ್ಚ ಆಕಾಶಕ್ಕೆ ಏರಿದೆ.
ಅಲ್ಲಮಪ್ರಭು ಒಂದು ಮಾತು ಹೇಳಿದ್ದಾರೆ. ಕೊಟ್ಟ ಕುದುರೆ ಏರಲಾಗದವನು, ಮತ್ತೊಂದು ಕುದುರೆ ಏರಲು ಬಯಸುವವನು ವೀರನೂ ಅಲ್ಲ, ಶೂರನೂ ಅಲ್ಲ. ಅಧಿಕಾರ ಇದ್ದಾಗ ಏನೂ ಮಾಡದಿದ್ದಾಗ, ಅಧಿಕಾರ ಹೋಗುವಾಗ ಏನು ಮಾಡುತ್ತೀರಾ? ಎಂದು ಪ್ರಶ್ನಿಸಿದ್ದಾರೆ.
ಈಶ್ವರಪ್ಪನವರ 40 % ಕಮಿಷನ್ ಕಿರುಕುಳಕ್ಕೆ ಗುತ್ತಿಗೆದಾರ ಆತ್ಮಹತ್ಯೆ ಮಾಡಿಕೊಂಡ. ಗುತ್ತಿಗೆದಾರ ಸಂಘದ ಅಧ್ಯಕ್ಷ ಕೆಂಪಣ್ಣ ಪ್ರಧಾನಿಗೆ ಪತ್ರ ಬರೆದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಈಶ್ವರಪ್ಪ ರಾಜಿನಾಮೆ ನೀಡುತ್ತಿದ್ದಂತೆ ಅವರು ನಿರ್ದೋಷಿಯಾಗುತ್ತಾರೆ ಎಂದು ಯಡಿಯೂರಪ್ಪ, ಗೃಹಮಂತ್ರಿಗಳು ಸರ್ಟಿಫಿಕೇಟ್ ಕೊಟ್ಟರು. ಪರಿಣಾಮ ಪೊಲೀಸರು ಬಿ ರಿಪೋರ್ಟ್ ಹಾಕಿದ್ದಾರೆ. ಇದು 40% ಕಮಿಷನ್ ಸರ್ಕಾರ. ಮೋದಿ ಅವರು ಪೆಟ್ರೋಲ್ ಬಂಕ್ಗಳಲ್ಲಿ ಫೋಟೋ ಹಾಕಿಕೊಳ್ಳುತ್ತಿದ್ದರು. ಅದನ್ನು ಈಗ ಯಾಕೆ ತೆಗೆದರು? ಉಜ್ವಲ್ ಯೋಜನೆ ಜಾರಿ ಮಾಡಿದ್ದೇನೆ ಎಂದು ದೊಡ್ಡ ಪ್ರಚಾರ ಮಾಡಿದರು. ಈಗ ಆ ಪ್ರಚಾರ ಯಾಕೆ ಮಾಡುತ್ತಿಲ್ಲ.
ಕೋವಿಡ್ ಸಮಯದಲ್ಲಿ ಯಡಿಯೂರಪ್ಪನವರು 2 ಸಾವಿರ ಕೋಟಿ ಪ್ಯಾಕೆಜ್ ಘೋಷಣೆ ಮಾಡಿದರು. ನಿರ್ಮಲಾ ಸೀತಾರಾಮನ್ ಅವರು 20 ಲಕ್ಷ ಕೋಟಿ ಪ್ಯಾಕೆಜ್ ಘೋಷಿಸಿದರು. ಇದರಲ್ಲಿ ನಿಮಗೆ ಯಾರಿಗಾದರೂ ಹಣ ತಲುಪಿತಾ?
ನಮ್ಮ ಸರ್ಕಾರ ಅಕ್ಕಿ ಕೊಟ್ಟಿದೆ. ಹಲವು ಯೋಜನೆ ಜಾರಿಗೆ ತಂದಿದೆ. ಇಂದಿರಾ ಗಾಂಧಿ ಅವರ ಹೆಸರಲ್ಲಿ ಕ್ಯಾಂಟೀನ್ ಆರಂಭಿಸಿದೆವು. ಆಗ ಪಕ್ಷ ನೋಡಿದೆವಾ? ರೈತರ ಬದುಕು, ವಿದ್ಯಾರ್ಥಿ, ಕೈಗಾರಿಕೆ ವೃದ್ಧಿಗೆ ಶ್ರಮ ವಹಿಸಿದ್ದೆವು. ಮೊನ್ನೆ ಬಂಡವಾಳ ಹೂಡಿಕೆ ಸಮಾವೇಶದಲ್ಲಿ 10 ಲಕ್ಷ ಕೋಟಿ ಬಂದಿದೆ ಎಂದು ತಿಳಿಸಿದರು. ನಾನು ಶಿವಮೊಗ್ಗಕ್ಕೆ ಹೋದಾಗ ಆ ಜಿಲ್ಲೆಗೆ ಎಷ್ಟು ಬಂಡವಾಳ ಬಂದಿದೆ ಎಂದು ಕೇಳಿದೆ. ಆ ಜಿಲ್ಲೆಯಲ್ಲಿ ಕಾಂಗ್ರೆಸ್ ಸೇರಲು ಮುಂದಾಗಿದ್ದ ವೈದ್ಯನಿಗೆ ಸಿಬಿಐ ದಾಳಿ ಮಾಡಿಸುತ್ತೇವೆ ಎಂದು ಬೆದರಿಕೆ ಹಾಕುತ್ತಿದ್ದಾರೆ.
ಈ ಡಿ.ಕೆ. ಶಿವಕುಮಾರ್ ಅವರಿಗೆ ಕಿರುಕುಳ ಕೊಟ್ಟಂತೆ ಬೇರೆ ನಾಯಕರಿಗೆ ಕಿರುಕುಳ ನೀಡುತ್ತೀರಾ? ಬಿಜೆಪಿಯ ಬೆದರಿಕೆಗೆ ಕಾಂಗ್ರೆಸ್ನ ಯಾವುದೇ ನಾಯಕರು ಹೆದರುವುದಿಲ್ಲ. ಹುಟ್ಟಿದ ಮೇಲೆ ಸಾಯಲೇಬೇಕು. ಈ ಸರ್ಕಾರ ಬಿಜೆಪಿಯ ಒಬ್ಬ ನಾಯಕರ ಮೇಲೆ ದಾಳಿ ಮಾಡಿಲ್ಲ. ಯಾರು ಹೇಗಿದ್ದರು, ಈಗ ಹೇಗಿದ್ದಾರೆ ಎಂದು ನನಗೂ ಗೊತ್ತಿದೆ. ಇದಕ್ಕೆ ಉತ್ತರ ನೀಡಬೇಕಾಗಿರುವುದು ನಾನಲ್ಲ, ನೀವು. ನಂಬಿಕೆಗಿಂತ ಉತ್ತಮ ಗುಣ ಬೇರೊಂದಿಲ್ಲ. ನನಗೆ ನಿಮ್ಮ ಮೇಲೆ ನಂಬಿಕೆ ಇದೆ. ಹೀಗಾಗಿ ನಾನು ನಿಮ್ಮ ಮೂಡಿಗೆರೆಗೆ ಬಂದು ನಮ್ಮ ಅಭ್ಯರ್ಥಿ ಗೆಲ್ಲಿಸಿ ಎಂದು ಕೇಳಿಕೊಳ್ಳುತ್ತಿದ್ದೇನೆ. ನಿಮ್ಮ ಜತೆ ನಾವಿದ್ದೇವೆ, ನಿಮ್ಮ ಹೋರಾಟಕ್ಕೆ ನಾವು ಶಕ್ತಿ ನೀಡುತ್ತೇವೆ ಎಂದರು.
ನಿಮ್ಮಲ್ಲಿ ಏನೇ ಭಿನ್ನಾಭಿಪ್ರಾಯ ಇದ್ದರೂ ಅದನ್ನು ಪಕ್ಕಕ್ಕೆ ಇಡಿ. ನಿಮ್ಮ ವೈಯಕ್ತಿಕ ವಿಚಾರಕ್ಕೆ ಕಾರ್ಯಕರ್ತರನ್ನು ಬಲಿ ನೀಡುವುದು ಬೇಡ. ನಾವು ತ್ಯಾಗದ ಮನೋಭಾವ ಬೆಳೆಸಿಕೊಳ್ಳಬೇಕು. ನಮ್ಮ ನಾಯಕರು ಪ್ರಧಾನಮಂತ್ರಿ ಹಾಗೂ ಪಕ್ಷದ ಅಧ್ಯಕ್ಷ ಸ್ಥಾನ ತ್ಯಾಗ ಮಾಡಿದ್ದಾರೆ. ಬಿಜೆಪಿಯ ಯಾವುದಾದರೂ ಒಬ್ಬ ನಾಯಕ ಇಂತಹ ತ್ಯಾಗ ಮಾಡಿದ್ದಾರಾ? ಬಿಜೆಪಿಯವರು ನಾವು ಹಿಂದೂ ನಾವು ಮುಂದು ಎನ್ನುತ್ತಾರೆ. ಆದರೆ ನಾವು ಕಾಂಗ್ರೆಸ್ ನಾಯಕರು ಹಿಂದೂ ಮುಸ್ಲೀಂ, ಕ್ರೈಸ್ತ, ಸಿಖ್, ಒಕ್ಕಲಿಗರು, ಲಿಂಗಾಯತರು ಎಲ್ಲರೂ ಒಂದು ಎನ್ನುತ್ತೇವೆ. ಇದೇ ನಮಗೂ ಅವರಿಗೂ ಇರೋ ವ್ಯತ್ಯಾಸ.
ನಮ್ಮಲ್ಲಿ ಸಮಸ್ಯೆ ಇರಬಹುದು. ಎಲ್ಲವೂ ಸರಿ ಎಂದು. ಹೇಳುವುದಿಲ್ಲ. ನಾವು ತಪ್ಪು ಮಾಡಿದ್ದೇವೆ. ಈ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲಿದೆ. ನಿಮ್ಮ ಮನೆ ಬಾಗಿಲಿಗೆ ಅಧಿಕಾರ ಬರುತ್ತಿದೆ. ನಾನು ಇಡೀ ರಾಜ್ಯ ಪ್ರವಾಸ ಮಾಡುತ್ತಿದ್ದೇನೆ. ಸಿದ್ದರಾಮಯ್ಯ ಅವರು ಪ್ರವಾಸ ಮಾಡಲಿದ್ದಾರೆ. ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡೋಣ. ಬಿಜೆಪಿ ಅವರು ಅಡಿಕೆ ಮಂಡಳಿ ಮಾಡುತ್ತೇವೆ ಎಂದರು, ಮಾಡಿದರಾ? ಮುಂದಿನ ಕಾಂಗ್ರೆಸ್ ಸರ್ಕಾರದಲ್ಲಿ ಅಡಿಕೆದಾರರ ಸಮಸ್ಯೆ ಬಗೆಹರಿಸಿ ಅಡಕೆ ಮಂಡಳಿ ರಚನೆ ಮಾಡುತ್ತೇವೆ.
ಇನ್ನು ಬಗರ್ ಹುಕುಮ್ ಸಾಗುವಳಿ ವಿಚಾರದಲ್ಲಿ ನಮ್ಮ ಸರ್ಕಾರ ಸಮಯ ನೀಡಿ ಕೆಲವರಿಗೆ ಜಮೀನು ನೀಡಿದೆ. ಉಳುವವನಿಗೆ ಭೂಮಿ ನೀಡುವುದು ನಮ್ಮ ಬದ್ಧತೆ. ಅರಣ್ಯ ಭೂಮಿ ವಿಚಾರದಲ್ಲಿ ಪರಿಶಿಷ್ಟರಿಗೆ 25 ವರ್ಷ ಸಾಮಾನ್ಯ ವರ್ಗದವರಿಗೆ 75 ವರ್ಷ ಎಂದು ಇದೆ. ಈ ವಿಚಾರವಾಗಿ ರಾಹುಲ್ ಗಾಂಧಿಯವರ ಜತೆ ಚರ್ಚೆ ಮಾಡಿದ್ದು, ರೈತರು ಎಂದರೆ ಎಲ್ಲರೂ ಒಂದೇ. ಮುಂದೆ ಯಾವುದೇ ಒತ್ತಡ ಬಂದರೂ ನೀವು ಜಮೀನಿನಿಂದ ಹೊರ ಹೋಗಬೇಡಿ. ಕಾಂಗ್ರೆಸ್ ಸರ್ಕಾರ ನಿಮ್ಮ ರಕ್ಷಣೆ ಮಾಡಲಿದೆ. ಇದು ಕಾಂಗ್ರೆಸ್ ಸಂಕಲ್ಪ. ನೀವು ನಮ್ಮ ಮೇಲೆ ವಿಶ್ವಾಸ ಇಡಿ. ನಾವು ನುಡಿದಂತೆ ನಡೆಯುತ್ತೇವೆ.
ಈ ನಾಡನ್ನು ಬಸವಣ್ಣ, ಕನಕದಾಸ, ಶಿಶುನಾಳ ಶರೀಫರ, ಕುವೆಂಪು ಅವರ ನಾಡಿನಂತೆ ಎಲ್ಲರೂ ಸಾಮರಸ್ಯದಿಂದ ಬದುಕಬೇಕು. ಬಿಜೆಪಿ ಅವರದ್ದು ಎಲ್ಲವೂ ಮೋಸ. ಸುಲಭವಾಗಿ ಸಿಗುವುದು ಮೋಸ, ಕಷ್ಟದಲ್ಲಿ ಸಿಗುವುದು ಗೌರವ, ಹೃದಯದಿಂದ ಸಿಗುವುದು ಪ್ರೀತಿ. ಕಾಂಗ್ರೆಸ್ ಎಲ್ಲರನ್ನೂ ಪ್ರೀತಿಯಿಂದ ಕಂಡು ರಕ್ಷಣೆ ನೀಡಲು ಕಾರ್ಯಕ್ರಮ ರೂಪಿಸಿಕೊಂಡು ಬಂದಿದೆ.
ನಾವು ಯಾರನ್ನೇ ಅಭ್ಯರ್ಥಿ ಮಾಡಿದರೂ ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು. ಎಲ್ಲರೂ ಒಗ್ಗಟ್ಟಿನಿಂದ ಬೂತ್ ಗೆ ಹೋಗಿ ಪಕ್ಷ ಸಂಘಟನೆ ಮಾಡಬೇಕು. ಬೇರೆ ಪಕ್ಷದ ನಾಯಕರನ್ನು ಪಕ್ಷಕ್ಕೆ ಸೇರಿಸಿಕೊಳ್ಳಬೇಕು. ಬೇರೆ ಪಕ್ಷದಿಂದ ಬಂದ ಮಾತ್ರಕ್ಕೆ ನಿಮ್ಮ ಕುರ್ಚಿಗೆ ಕಂಟಕ ಬರುವುದಿಲ್ಲ. ಪಕ್ಷಕ್ಕೆ ಬಲ ತುಂಬುವ ಬಗ್ಗೆ ಗಮನಹರಿಸಿ. ಎಲ್ಲರೂ ಸಕ್ರಿಯವಾಗಿ ಕೆಲಸ ಮಾಡಿ. ಕಾಂಗ್ರೆಸ್ ಕಾರ್ಯಕ್ರಮಗಳನ್ನು ಜನರಿಗೆ ತಿಳಿಸಿ. ಡಬಲ್ ಇಂಜಿನ್ ಸರ್ಕಾರವಂತೆ. ಜನರ ಬದುಕು ಕಟ್ಟಲು ಒಂದೂ ಯೋಜನೆ ನೀಡಿಲ್ಲ. ನಾವಿರುವುದು ನಿಮಗಾಗಿ, ನೀವಿರುವುದು ನಮಗಾಗಿ. ಇದನ್ನು ಗಮನದಲ್ಲಿ ಇಟ್ಟುಕೊಳ್ಳಿ ಎಂದರು.
*ಕೇಂದ್ರ ರಕ್ಷಣಾ ಸಚಿವರನ್ನು ಭೇಟಿ ಮಾಡಿದ ಸಿಎಂ ಬೊಮ್ಮಾಯಿ: ಬೆಳಗಾವಿ ವಿಷಯ ಪ್ರಸ್ತಾಪಿಸಿದ್ದೇಕೆ?*
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ